ಟೆಕ್ಕಿ ಸಾವು: ಬಿಬಿಎಂಪಿ ಅಧಿಕಾರಿಗಳಿಗೆ ಸಮನ್ಸ್ ನೀಡಿ, ವರದಿ ಸಲ್ಲಿಸಲು ಲೋಕಾಯುಕ್ತ ಆದೇಶ
ಬೆಂಗಳೂರು, ಮೇ. 28: ಈ ತಿಂಗಳು ಬೆಂಗಳೂರಿನಲ್ಲಿ ಬಿದ್ದ ಮಳೆಗೆ ಅನಾಹುತಗಳು ನಡೆದಿದ್ದು, ಇನ್ನು ಕಣ್ಣಮುಂದೆ ಇದೆ. ಮೇ 21 ರಂದು ನಗರದ ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ 23 ವರ್ಷದ ಟೆಕ್ಕಿ ಸಾವನ್ನಪ್ಪಿದ ನಂತರ ಕರ್ನಾಟಕ ಲೋಕಾಯುಕ್ತರು ಬೆಂಗಳೂರಿನ ಪೌರಾಡಳಿತ ಮಂಡಳಿಯ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಕ್ರಮ ಪ್ರಾರಂಭಿಸಿದ್ದು, ಸಮನ್ಸ್ ನೀಡಿದೆ.
ಘಟನೆ ಸಂಬಂಧ ಲೋಕಾಯುಕ್ತರು ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳಿಗೆ ಸಮನ್ಸ್ ಕಳುಹಿಸಿದ್ದು, ಮಳೆನೀರು ಚರಂಡಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವ ಬಗ್ಗೆ ವಿವರಣೆ ಕೇಳಿದ್ದಾರೆ.

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಲೋಕಾಯುಕ್ತರು ನೋಟಿಸ್‌ನಲ್ಲಿ ಪುರಸಭೆಯ ಪ್ರದೇಶ ಅಥವಾ ಸ್ಥಳೀಯ ಸಂಸ್ಥೆಯೊಳಗೆ ವಾಸಿಸುವ ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಸ್ಥಿತಿಯ ರಸ್ತೆಗಳನ್ನು ಹೊಂದುವ ಹಕ್ಕಿದೆ ಎಮದಿದೆ. ಜೊತೆಗೆ ಭಾರತೀಯ ಸಂವಿಧಾನದ 21 ನೇ ವಿಧಿಯನ್ನು ಉಲ್ಲೇಖಿಸಿದ್ದು, ಪ್ರತಿ ನಾಗರಿಕರಿಗೆ ಇರುವ ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸಿದೆ.
ಬಿಬಿಎಂಪಿ ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಮತ್ತು ಇದನ್ನು ದುರಾಡಳಿತದ ನಿದರ್ಶನ ಎಂದು ಲೋಕಾಯುಕ್ತ ಇಲಾಖೆ ಹೇಳಿದೆ. ಬಿಬಿಎಂಪಿ ಮುಖ್ಯ ಆಯುಕ್ತರು, ವಲಯ ಆಯುಕ್ತರು, ಬಿಬಿಎಂಪಿ ಪೂರ್ವ ವಲಯ, ಶಿವಾಜಿನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್, ಸಂಪಂಗಿರಾಮನಗರ ವಾರ್ಡ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮತ್ತು ಮಳೆನೀರು ಚರಂಡಿಗಳ ಕಾರ್ಯಪಾಲಕ ಎಂಜಿನಿಯರ್ ಅವರನ್ನು ತಮ್ಮ ಮುಂದೆ ಹಾಜರುಪಡಿಸಲು ಮತ್ತು ಘಟನೆಯ ವರದಿಯನ್ನು ಸಲ್ಲಿಸಲು ಸಮನ್ಸ್ ನೀಡಿದೆ.

ಮೇ 21 ರಂದು, ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಭಾನು ರೇಖಾ ಎಂದು ಗುರುತಿಸಲಾದ 23 ವರ್ಷದ ಟೆಕ್ಕಿ ಸಾವನ್ನಪ್ಪಿದರೆ, ಆಕೆಯ ಐವರು ಸಂಬಂಧಿಕರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ರಕ್ಷಿಸಿದ್ದರು. ಆಕೆಯ ಸಹೋದರ ಸಂದೀಪ್ ನೀಡಿದ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.
ನಿರ್ಲಕ್ಷ್ಯದ ಕಾರಣಕ್ಕೆ ವಾಹನ ಚಾಲಕನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಚಾಲಕ ಮತ್ತು ಬಿಬಿಎಂಪಿಯಿಂದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications