ಪ್ರಜ್ವಲ್ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಜಿ.ಟಿ. ದೇವೇಗೌಡ
ಬೆಂಗಳೂರು, ಮೇ 25: ಹಾಸನದ ನೂತನ ಸಂಸದ ಪ್ರಜ್ವಲ್ ರೇವಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸಚಿವ ಜಿ.ಟಿ. ದೇವೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರೊಂದಿಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮಾತನಾಡಿದ್ದಾರೆ. ತಮಗಾಗಿ ಪ್ರಜ್ವಲ್ ಗೆದ್ದ ಸ್ಥಾನವನ್ನು ತ್ಯಜಿಸುವುದು ಬೇಡ ಎಂದಿದ್ದಾರೆ. ನನ್ನ ಆಶೀರ್ವಾದದಿಂದ ನೀನು ಗೆದ್ದಿದ್ದು. ನನ್ನ ಜಾಗವನ್ನು ನಿನಗೆ ಬಿಟ್ಟುಕೊಟ್ಟಿದ್ದು, ನೀವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ ಎಂದು ಎಂಬುದಾಗಿ ದೇವೇಗೌಡ ಅವರು ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ಜಿಟಿಡಿ ಹೇಳಿದರು.
ನಾವು ಸೋಲು ಒಪ್ಪಿಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯ ಕೋರಿದ್ದೇವೆ. ಈಗಲಾದರೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಜನಪರ ಮತ್ತು ರೈತಪರ ಕೆಲಸಗಳನ್ನು ಮಾಡಲಿ. ಜನರ ಖಾತೆಗೆ 15 ಲಕ್ಷ ರೂಪಾಯಿ ಹಣ ಹಾಕಲಿ ಎಂದು ಹೇಳಿದರು.

ನಾವು ಸೋಲಿನಿಂದ ಕಂಗೆಟ್ಟಿಲ್ಲ. ತುಮಕೂರಿನಲ್ಲಿ ಸೋತರೂ ದೇವೇಗೌಡ ಅವರು ಫೀನಿಕ್ಸ್‌ನಂತೆ ಎದ್ದು ಬರುತ್ತಾರೆ. ಅವರು ಮತ್ತೆ ಪಕ್ಷ ಕಟ್ಟುತ್ತಾರೆ ಎಂದರು.
ಜನರು ನಮಗೆಲ್ಲರಿಗೂ ತಕ್ಕ ಪಾಠ ಕಲಿಸಿದ್ದಾರೆ. ಈ ಸೋಲು ನಮಗೆಲ್ಲರಿಗೂ ದೊಡ್ಡ ಪಾಠ. ಇದರಿಂದ ಕಲಿತು ನಾವು ಮುನ್ನಡೆಯುತ್ತೇವೆ. ನಿಖಿಲ್ ಕುಮಾರ್ ನಮ್ಮೊಂದಿಗೆ ನಮ್ಮ ಜೊತೆ ಪ್ರತಿದಿನ ಮಾತನಾಡುತ್ತಿದ್ದಾರೆ. ಸೋಲೇ ಗೆಲುವಿನ ಮೆಟ್ಟಿಲು. ನಾವು ಮತ್ತೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications