ಮೋದಿ ಚಿತ್ರಗಳನ್ನು ಬಳಸಿಕೊಳ್ಳುವ ಹಕ್ಕು ಈಶ್ವರಪ್ಪಗೆ ಇಲ್ಲ ಎಂದ ವಿರೋಧ ಪಕ್ಷದ ನಾಯಕ ಆರ್ ಅಶೋಕ್
ಬೆಂಗಳೂರು, ಏಪ್ರಿಲ್.07: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧವೇ ಬಂಡಾಯ ಎದ್ದಿರುವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ತಾವು ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸು ಮಾಡಲು ಮತ್ತು ಕುಟುಂಬ ರಾಜಕಾರಣದ ವಿರುದ್ಧ ಬಂಡಾಯ ಎದ್ದಿರುವುದಾಗಿ ಹೇಳಿದ್ದಾರೆ.
ಇದಲ್ಲದೆ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಬಳಸುವುದಕ್ಕೆ ಅನುಮತಿ ಕೂಡ ಕೇಳಿದ್ದಾರೆ. ಮೋದಿ ಫೋಟೋ ಬಳಕೆಗಾಗಿ ಕೋರ್ಟ್ ಮೊರೆಹೋಗಿ ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಈಶ್ವರಪ್ಪ ಅವರು ತಮ್ಮ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳನ್ನು ಅನಧಿಕೃತವಾಗಿ ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಬಂಡಾಯ ನಾಯಕ ಕೆ ಎಸ್ ಈಶ್ವರಪ್ಪ. ಅವರ ಬಗ್ಗೆ ಈವರೆಗೂ ಬಿಜೆಪಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅವರು ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ನಾಮಪತ್ರ ಸಲ್ಲಿಸಿದ ನಂತರ ಬಿಜೆಪಿ ಅವರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳನ್ನು ಈಶ್ವರಪ್ಪ ಅನಧಿಕೃತವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಆರ್ ಅಶೋಕ್, ಮತ ಯಾಚನೆಯಂತಹ ರಾಜಕೀಯ ಚಟುವಟಿಕೆಗಳಿಗೆ ಮೋದಿ ಅವರ ಫೋಟೋಗಳನ್ನು ಬಳಸಿಕೊಳ್ಳುವ ಹಕ್ಕು ಬಿಜೆಪಿಗೆ ಮಾತ್ರ ಇದೆ, ಈ ಬಗ್ಗೆ ಪಕ್ಷದ ಕಾನೂನು ಘಟಕವು ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.

"ಇದು ತಪ್ಪು, ಈಶ್ವರಪ್ಪ ಅವರಿಗೆ ಮೋದಿ ಅವರ ಚಿತ್ರಗಳನ್ನು ಬಳಸುವ ಹಕ್ಕಿಲ್ಲ. ಮೋದಿ ಅವರು ದೇಶದ ಪ್ರಧಾನಿಯಾಗಿರುವುದರಿಂದ ಸರ್ಕಾರಿ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರ ಫೋಟೋ ಬಳಸಬಹುದು. ಆದರೆ, ರಾಜಕೀಯ ಅಥವಾ ಮತಗಳಿಗೆ ಸಂಬಂಧಿಸಿದ ವಿಷಯಕ್ಕೆ ಬಂದಾಗ ಚುನಾವಣೆಯಲ್ಲಿ ಮೋದಿಯವರ ಚಿತ್ರಗಳನ್ನು ಬಳಸುವ ಹಕ್ಕು ಬಿಜೆಪಿಗೆ ಮಾತ್ರ ಇದೆ. ಪಕ್ಷದ ಕಾನೂನು ಘಟಕ ಈ ಬಗ್ಗೆ ಪರಿಶೀಲಿಸುತ್ತದೆ, ಇದು ಸರಿಯಲ್ಲ, ಅಗತ್ಯ ದೂರು ನೀಡುತ್ತೇವೆ" ಎಂದು ತಿಳಿಸಿದ್ದಾರೆ.
ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಕೆಎಸ್ ಈಶ್ವರಪ್ಪ ವಿರುದ್ಧ ಪಕ್ಷ ಇನ್ನೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರ್ ಅಶೋಕ್, ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ನಾಮಪತ್ರ ಸಲ್ಲಿಸಿದ ನಂತರ ಬಿಜೆಪಿ ಅವರ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಈಶ್ವರಪ್ಪ ಘೋಷಿಸಿದ್ದಾರೆ.ಈ ಶ್ವರಪ್ಪ ಅವರನ್ನು ಸಮಾಧಾನ ಪಡಿಸಲು ಪಕ್ಷದ ಮುಖಂಡರು ಹರಸಾಹಸ ಪಟ್ಟರೂ ಪ್ರಯತ್ನ ಸಫಲವಾಗಿಲ್ಲ.
ಲೋಕಸಭಾ ಚುನಾವಣೆಗೆ ಹಾವೇರಿ ಕ್ಷೇತ್ರದಿಂದ ತಮ್ಮ ಪುತ್ರ ಕೆ ಇ ಕಾಂತೇಶ್‌ಗೆ ಟಿಕೆಟ್ ನೀಡದೆ ಇರುವುದಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಪಕ್ಷದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರೇ ಕಾರಣ ಎಂದು ಈಶ್ವರಪ್ಪ ಆರೋಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿಯಿಂದ ಟಿಕೆಟ್ ನೀಡಲಾಗಿದೆ.












Click it and Unblock the Notifications