Hemnath Nimbalkar: ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಎತ್ತಂಗಡಿ
ಬೆಂಗಳೂರು, ಮಾರ್ಚ್ 31: ಲೋಕಸಭೆ ಚುನಾವಣೆ 2024ರ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಕರ್ನಾಟಕ ಸರ್ಕಾರ ಐಪಿಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ. ಪತ್ನಿ ಲೋಕಸಭೆ ಚುನಾವಣೆ ಅಭ್ಯರ್ಥಿಯಾಗಿರುವ ಕಾರಣ ಚುನಾವಣಾ ಆಯೋಗದ ಸೂಚನೆಯಂತೆ ಐಪಿಎಸ್ ಅಧಿಕಾರಿ ಹಾಗೂ ಅಭ್ಯರ್ಥಿಯ ಪತಿಯನ್ನು ಸರ್ಕಾರ ವರ್ಗಾವಣೆಗೊಳಿಸಿದೆ.
ಹೇಮಂತ್ ನಿಂಬಾಳ್ಕರ್ ವರ್ಗಾವಣೆಗೊಂಡಿರುವ ಐಪಿಎಸ್ ಅಧಿಕಾರಿ. ಹೇಮಂತ್ ಪತ್ನಿ ಅಂಜಲಿ ನಿಂಬಾಳ್ಕರ್ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅಂಜಲಿ ನಿಂಬಾಳ್ಕರ್ ಅಭ್ಯರ್ಥಿಯಾದ ಕಾರಣ ಹೇಮಂತ್ ನಿಂಬಾಳ್ಕರ್ ವರ್ಗಾವಣೆ ಮಾಡಬೇಕೆಂದು ಪ್ರತಿಪಕ್ಷವಾದ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರ ಸಲ್ಲಿಸಿತ್ತು.

ಈ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಸೂಚನೆಯಂತೆ ಕರ್ನಾಟಕ ಸರ್ಕಾರ ಹೇಮಂತ್ ನಿಂಬಾಳ್ಕರ್ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ತನಕ ವರ್ಗಾವಣೆ ಆದೇಶ ಜಾರಿಯಲ್ಲಿರುತ್ತದೆ ಸರ್ಕಾರ ಹೇಳಿದೆ.
ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಈ ಬಾರಿ ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅವರ ಪತಿ ಹೇಮಂತ್ ಕುಮಾರ್ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಸರ್ಕಾರ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸರ್ಕಾರ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲು ಚುನಾವಣಾ ಆಯೋಗದ ಅನುಮತಿಯ ಅಗತ್ಯ. ಚುನಾವಣೆ ಅಭ್ಯರ್ಥಿಯ ಪತಿಯಾಗಿರುವ ಹೇಮಂತ್ ನಿಂಬಾಳ್ಕರ್ ಅವರನ್ನು ವಾರ್ತಾ ಇಲಾಖೆಯಿಂದ ವರ್ಗಾವಣೆ ಮಾಡುವಂತೆ ಬಿಜೆಪಿ ಚುನಾವಣೆ ಆಯೋಗಕ್ಕೆ ದೂರು ನೀಡಿತ್ತು.

"ಹೇಮಂತ್ ನಿಂಬಾಳ್ಕರ್ ಅವರು ಹೆಚ್ಚು ಪ್ರಭಾವಿ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅಭ್ಯರ್ಥಿಯೊಂದಿಗಿನ ಅವರ ಸಂಬಂಧವು ಇತರ ಐಪಿಎಸ್ ಅಧಿಕಾರಿಗಳು ಮತ್ತು ಚುನಾವಣಾ ಕೆಲಸಕ್ಕಾಗಿ ನಿಯೋಜಿಸಲಾದ ಪೊಲೀಸರ ಮೇಲೆ ಪ್ರಭಾವ ಬೀರಬಹುದು. ಅಲ್ಲದೆ, ಹೇಮಂತ್ ನಿಂಬಾಳ್ಕರ್ ತಮ್ಮ ಪತ್ನಿ ಪರ ಮತ ಕೇಳಲು ತಮ್ಮ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ. ಇದೇ ಹುದ್ದೆಯಲ್ಲಿ ಮುಂದುವರಿದರೆ ಅವರು ತಮ್ಮ ಪ್ರಭಾವ ಬಳಸಿ ಕಾಂಗ್ರೆಸ್ ಪಕ್ಷ ಮತ್ತು ಅಭ್ಯರ್ಥಿಗಳ ಪರ ಒಲವು ತೋರುತ್ತಾರೆ" ಎಂದು ಬಿಜೆಪಿ ದೂರಿನಲ್ಲಿ ಆರೋಪಿಸಿತ್ತು.
ದೂರು ಸಲ್ಲಿಸಿದ ನಂತರ, ಬಿಜೆಪಿ ಎಂಎಲ್‌ಸಿ ನಾರಾಯಣಸ್ವಾಮಿ ಮಾತನಾಡಿ, "ಸಾರ್ವತ್ರಿಕ ಚುನಾವಣೆಯಲ್ಲಿ ಅವರು ತಮ್ಮ ಅಧಿಕಾರ ಅಥವಾ ಪ್ರಭಾವವನ್ನು ಬಳಸಿಕೊಳ್ಳಬಹುದು. ಹೀಗಾಗಿ ಹೇಮಂತ್ ನಿಂಬಾಳ್ಕರ್ ಅವರನ್ನು ಬೇರೆ ರಾಜ್ಯಕ್ಕೆ ನಿಯೋಜಿಸುವಂತೆ ನಾವು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅವರನ್ನು ಒತ್ತಾಯಿಸಿದ್ದೇವೆ" ಎಂದು ಹೇಳಿದ್ದರು.
ಸೂರಳ್ಕರ್ ವಿಕಾಸ್ ಕಿಶೋರ್ ವಾರ್ತಾ ಇಲಾಖೆ ನೂತನ ಆಯುಕ್ತ
ಹೇಮಂತ್ ನಿಂಬಾಳ್ಕರ್ ಅವರ ಜಾಗದಲ್ಲಿ ವಾರ್ತಾ ಇಲಾಖೆಯ ನೂತನ ಆಯುಕ್ತರನ್ನಾಗಿ ಸೂರಳ್ಕರ್ ವಿಕಾಸ್ ಕಿಶೋರ್ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಸೂರಳ್ಕರ್ ವಿಕಾಸ್ ಕಿಶೋರ್ ಅವರು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾಗಿದ್ದರು. ಈಗ ವಾರ್ತಾ ಇಲಾಖೆಯ ನೂತನ ಆಯುಕ್ತರಾಗಿದ್ದಾರೆ.
2012ರ ಐಎಎಸ್ ಬ್ಯಾಚ್‌ನ ಸೂರಳ್ಳರ್ ವಿಕಾಸ್ ಕಿಶೋರ್ ಅವರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ಗಮಿತ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಶನಿವಾರ ಸಂಜೆ ಅಧಿಕಾರ ಹಸ್ತಾಂತರಿಸಿದ್ದಾರೆ. ನೂತನ ಆಯುಕ್ತರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹುದ್ದೆಗೆ ಜೊತೆಗೆ ಬಿಬಿಎಂಪಿ ವಿಶೇಷ ಆಯುಕ್ತರ ಹುದ್ದೆಯಲ್ಲಿಯೂ ಇರಲಿದ್ದಾರೆ.












Click it and Unblock the Notifications