ಬೆಂಗಳೂರು ಲೋಕಸಭೆ: ಯಾರ ಒಲವು, ಯಾರ ಕಡೆಗೆ?
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅದರ ಕಾವು ಕೂಡ ಏರುತ್ತಿದ್ದೆ. ಬಿಜೆಪಿ ಮೋದಿ ಅಲೆ-ಯಡಿಯೂರಪ್ಪನವರ ಆಗಮನದಿಂದ ಬೀಗುತ್ತಿದೆ. ಇನ್ನೊಂದು ಕಡೆ ಸಿದ್ದರಾಮಯ್ಯನವರು ಅಹಿಂದ ಮೂಲಕ ರಾಜಕೀಯ ಮಾಡಲು ಅಣಿಯಾಗುತ್ತಿದ್ದಾರೆ. ಇನ್ನು ರಾಜ್ಯದ ಮೂರನೇ ಪ್ರಮುಖ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೇಂದ್ರದ ಮೂರನೇ ರಂಗದ ಮುಖ್ಯನಾಗಿ ರೂಪಾಂತರಗೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ.
ಆಮ್ ಆದ್ಮಿ ಅಬ್ಬರ ದಿನ ಕಳೆದಂತೆ ಮುಂಕಾಗುತ್ತಿದ್ದೆ. ಶ್ರೀರಾಮಲು ರಾಜಕೀಯ ಮುಖ್ಯವಾಗಿ ಬಳ್ಳಾರಿ-ರಾಯಚೂರಿಗೆ ಸೀಮಿತವಾಗಿದೆ. ಇದು ಒಟ್ಟಾರೆ ಮೇಲ್ನೋಟಕ್ಕೆ ಕಂಡು ಬರುವ ರಾಜಕೀಯ ಚಿತ್ರಣ, ಆದರೆ ಪ್ರತಿ ಕ್ಷೇತ್ರದ ರಾಜಕೀಯ ಚಿತ್ರಣ ಮೇಲ್ನೋಟದ ರಾಜಕೀಯಕ್ಕಿಂತ ಭಿನ್ನವಾಗಿರುತ್ತೆ.
ರಾಜಕೀಯವಾಗಿ ವಿಶ್ಲೇಷಿಸಿದಾಗ ಸ್ಥಳೀಯವಾಗಿ ಜನಸಾಮಾನ್ಯರನ್ನು ಕಾಡುವ ಮೂಲಭೂತ ಸಮಸ್ಯೆಗಳೇ ಆಯಾಯ ಕ್ಷೇತ್ರಗಳಲ್ಲಿನ ಪ್ರಮುಖ ರಾಜಕೀಯ ವಿಷಯವಾಗಿರುತ್ತದೆ. ಆದರೆ ಇದರೊಂದಿಗೆ ರಾಷ್ಟ್ರೀಯ ವಿದ್ಯಮಾನಗಳು, ಕೇಂದ್ರ ಸರ್ಕಾರದ ಸಾಧನೆಗಳು-ವೈಫಲ್ಯಗಳು, ಭ್ರಷ್ಟಾಚಾರದಂತ ರಾಜಕೀಯ ಪಿಡುಗು, ಬೆಲೆ ಏರಿಕೆ ಇದೆಲ್ಲಾ ಅತಿಮುಖ್ಯವಾಗಿರುತ್ತದೆ.
ಹೀಗಾಗಿ ಜನತೆ ಸ್ಥಳೀಯ ಸಮಸ್ಯೆಗಳ ಒತ್ತು ಕೊಟ್ಟರು ಲೋಕಸಭಾ ಚುನಾವಣೆಯಲ್ಲಿ ಮಾತ್ರ ಅತಿಮುಖ್ಯವಾಗಿ ಬೆಲೆ ಏರಿಕೆ-ಭ್ರಷ್ಟಾಚಾರ-ಸುಸ್ಥಿರ ಆಡಳಿತ ಇವಕ್ಕೆ ಅತಿಹೆಚ್ಚಿನ ಆದ್ಯತೆ ನೀಡುತ್ತಿರುವುದು ಮೇಲುನೋಟಕ್ಕೆ ಕಂಡು ಬರುತ್ತಿರುವ ಅಂಶ. ಇನ್ನು ಕ್ಷೇತ್ರವಾರು ಸದ್ಯದ ಪರಸ್ಥಿತಿಯ ಯಾರ ಒಲವು ಹೇಗಿದೆಂತ ಎಂಬುವುದರ ಕಡೆಗೆ ನೋಡೋಣ...

ದಕ್ಷಿಣದಲ್ಲಿ ಅನಂತ ಅನುಭವ-ಆಧಾರ್ ನ ಗೊಂದಲ
ಅಂದರೀಕಿ ಮಂಚೋಡು ಅನಂತಯ್ಯ ಎಂಬ ಮಾತು ಅನಂತ ಕುಮಾರ್ ಗೆ ಅನ್ವಯಿಸುತ್ತೆ. ಬೆಂಗಳೂರು ದಕ್ಷಿಣದಲ್ಲಿ 5 ಬಾರಿ ಗೆದ್ದಿರುವ ಅನಂತ ಕುಮಾರ್ ಅವರು ಮತ್ತೊಮ್ಮೆ ಜನರು ತಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಮತ್ತೊಮ್ಮೆ ಉಳಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ.
ಅತ್ತ ರಾಷ್ಟ್ರೀಯ ಮಟ್ಟದಲ್ಲಿ ಇರುವ ಜವಾಬ್ದಾರಿಯನ್ನು ನಿಭಾಯಿಸುತ್ತಾ ಇತ್ತ ದಕ್ಷಿಣ ಕ್ಷೇತ್ರದ ಜನರ ಆಶೋತ್ತರಕ್ಕೂ ಸ್ಪಂದಿಸುತ್ತಿರುವುದು ಅವ್ರ ಪಾಲಿಗೆ ವರವಾಗಲಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು-ಕ್ರೀಡಾಕೂಟಗಳನ್ನು ಆಯೋಜಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಎಲ್ಲಕ್ಕಿಂತ ತಮ್ಮ ಸಾಧನೆಗಳ ಜತೆಗೆ ಮೋದಿ ಅವರ ಜತೆಗಿನ ಒಡನಾಟದ ಅನುಭವ ಹಾಗೂ ರಾಜ್ಯದಲ್ಲಿ ಮೋದಿ ಅಲೆ ಏಳುವಂತೆ ಮಾಡುವಲ್ಲಿ ಸಫಲರಾಗಿರುವುದು ಅವರ ಕೈ ಹಿಡಿಯಲಿದೆ.

ನಂದನ್ ನಿಲೇಕಣಿ ವಿಭಿನ್ನ ಪ್ರಚಾರ ತಂತ್ರ
ಇನ್ನು ಕಾಂಗ್ರೆಸ್ ನಂದನ್ ನಿಲೇಕಣಿಯನ್ನು ಇಲ್ಲಿ ಸ್ಪರ್ಧೆಗೆ ಇಳಿಸುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಪೂರ್ವಭಾವಿ ಎಂಬಂತೆ ಕೆಲವೊಂದು ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳ ಜೊತೆ ಚರ್ಚೆ-ಸಂವಾದಗಳನ್ನು ನಡೆಸಿದ್ದಾರೆ. ಇಂಟರ್ನೆಟ್ ನಲ್ಲಿ ತಮ್ಮ ಸಾಧನೆಗಳನ್ನು ಬಿಂಬಿಸಿಕೊಳ್ಳುತ್ತಿದ್ದಾರೆ.
ಆದರೆ ಸ್ಥಳೀಯ ನಾಯಕರಲ್ಲಿ ನಂದನ್ ಬಗ್ಗೆ ಅಂತಹ ಹೆಚ್ಚಿನ ಒಲವು ಕೂಡ ಕಂಡುಬರುತ್ತಿಲ್ಲ. ಇದನ್ನು ಅವರು ಹೇಗೆ ನಿಭಾಯಿಸುತ್ತಾರೆ ಅನ್ನೋದು ನೋಡಬೇಕು. ಎಷ್ಟಾದ್ರೂ ನಿಲೇಕಣಿ ಹೈಕಮಾಂಡ್ ಕ್ಯಾಡಿಡೇಟ್ ಅಲ್ವಾ!. ನಂದನ್ ನಿಲೇಕಣಿಗೆ ಇಲ್ಲಿ ಕಾಡುತ್ತಿರುವ ಎರಡು ಮುಖ್ಯ ಸಮಸ್ಯೆಗಳು ಕನ್ನಡ ಬರುವುದಿಲ್ಲ (ಇಷ್ಟು ವರ್ಷ ಯದೇಇರೋ ಇವರು ರಾಜಕೀಯ ಅನಿವಾರ್ಯತೆಗಾಗಿ ಕನ್ನಡ ಕಲಿಯಕ್ಕೆ ಮುಂದಾಗಿರುವುದು ವಿಪರಾಸ್ಯವೇ ಸರಿ) ಆಧಾರ್ ನ ಅವಾಂತರ ಕೂಡ ಬಹುವಾಗಿ ಕಾಡಲಿದೆ. ಇನ್ನೂ ಜೆಡಿಎಸ್-ಆಮ್ ಆದ್ಮಿ ಯಾರ ಮತಗಳಿಗೆ ಕೈ ಹಾಕಲಿದೆ ಅನ್ನೋದು ನೋಡಬೇಕಿರುವ ಸಂಗತಿ.
ಐಟಿ ಉದ್ಯೋಗಿಗಳು ಹೆಚ್ಚಿರಾಗಿರುವ ಈ ಕ್ಷೇತ್ರದಲ್ಲಿ ಬ್ರಾಹ್ಮಣರು- ಒಕ್ಕಲಿಗರು ಬಹುಸಂಖ್ಯಾತರು. ರಾಷ್ಟ್ರೀಯ ವಿಷಯಗಳೆ ಪ್ರಮುಖವಾಗಿರುವ ಅಲ್ಲಿ ಮೋದಿ ಅಲೆ ಜೋರಾಗಿಯೇ ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಒಟ್ಟಾರೆ ಸದ್ಯದ ಮಟ್ಟಿಗೆ ಬಿಜೆಪಿಯ ಮುನ್ನಡೆ ಎದ್ದು ಕಾಣುತ್ತಿದೆ.

ಬೆಂಗಳೂರು ಉತ್ತರಕ್ಕೆ ಉತ್ತರವಿಲ್ಲ
ಬೆಂಗಳೂರು ಉತ್ತರ ಗೊಂದಲಗೂಡು. ಬಿಜೆಪಿ ಅಳೆದು-ತೂಗಿ ಕೊನೆಗೆ ಬೆಂಗಳೂರಿನ ಸಾಮ್ರಾಟ್ ನಿಗೆ ಟಿಕೇಟ್ ಅಂತ ಘೋಷಿಸಿದೆ. ಆದರೆ ಅಶೋಕ್ ನ ಪರಸ್ಥಿತಿ ಮಾತ್ರ ಅಕ್ಕಿ ಮೇಲೆ ಆಸೆ-ನೆಂಟರ ಮೇಲೆ ಪ್ರೀತಿ ಅನ್ನೋ ಆಗಿದೆ.
ಒಂದು ಕಡೆ ರಾಜ್ಯ ರಾಜಕೀಯದಲ್ಲಿ ಬಲಗೊಂಡು ಮುಂದಿನ ಚುನಾವಣೆ ಹೊತ್ತಿಗೆ ಮುಖ್ಯಮಂತ್ರಿ ಸ್ಥಾನದ್ಮೇಲೆ ಟವಲ್ ಹಾಕೋ ಆಸೆ ಒಂದು ಕಡೆ, ಇನ್ನೊಂದಡೆ ಕೇಂದ್ರದಲ್ಲಿ ಸಚಿವನಾಗುವ ಬಯಕೆ. ಎಲ್ಲಕ್ಕಿಂತ ತನ್ನ ಸಾಮ್ರಾಜ್ಯದ ಮೇಲೆ ಮತ್ತೊಬ್ಬರು ವಿರಾಜಮಾನರಾಗಿ ತನಗೆ ಪ್ರತಿಸ್ಪರ್ಧಿಗಳಾಗಿ ಬೆಳೆಯಬಾರದು ಅನ್ನೊ ನಿಲುವು.
ಇದೇ ಕಾರಣಕ್ಕೆ ಬಹುಮುಖ್ಯವಾಗಿ ಸದಾನಂದಗೌಡರಿಗೆ ಟಿಕೇಟ್ ತಪ್ಪಿಸಿದ್ದು, ಇದಕ್ಕೆ ಒತ್ತಾಸೆಯಾಗಿ ನಿಂತಿದ್ದು ಅನಂತ. ಇನ್ನು ಕಾಂಗ್ರೆಸ್ ನಲ್ಲಿ ಅರ್ಹ ಅಭ್ಯರ್ಥಿಯ ಆಯ್ಕೆಗೆ ಕಸರತ್ತುಗಳು ನಡೆಯುತ್ತಲೇ ಇದೆ. ಒಟ್ಟಾರೆ ಮೋದಿ ಅಲೆ ಪ್ರಯೋಜನ ಬಿಜೆಪಿಗೆ ಒಕ್ಕಲಿಗರ ಈ ಕೋಟೆಯಲ್ಲಿ ಚೆನ್ನಾಗೆ ಕೆಲಸ ಮಾಡುತ್ತಿದ್ದೆ.

ಪಕ್ಷಗಳ ಆಂತರಿಕ ಕಚ್ಚಾಟ, ಮತದಾರನಿಗೆ ಗೊಂದಲ
ಒಟ್ಟಾರೆ, ಒಂದು ವೇಳೆ ಟಿಕೆಟ್ ಅಶೋಕ್ ಕೈ ತಪ್ಪಿದರೂ ಡಿವಿ ಸದಾನಂದ ಗೌಡ ಅಥವಾ ಡಿಬಿ ಚಂದ್ರೇಗೌಡ ಹೀಗೆ ಒಕ್ಕಲಿಗರ ವೋಟ್ ಬ್ಯಾಂಕ್ ಮೇಲೆ ಬಿಜೆಪಿ ಗೆಲುವು ನಿರ್ಧಾರವಾಗಲಿದೆ. ಇಲ್ಲೇನಾದರೂ ಬಿಜೆಪಿ ನೆಲಕಚ್ಚಿದರೆ ಅದಕ್ಕೆ ಕಾರಣ ಆಂತರಿಕ ಕಚ್ಚಾಟ ಅಲ್ಲದೆ ಮತ್ತೇನಿಲ್ಲ.
ಕಾಂಗ್ರೆಸ್ಸಿನಿಂದ ಬಿ.ಎಲ್. ಶಂಕರ್ ಅಥವಾ ರಾಜೀವಗೌಡ ಆಯ್ಕೆ ಖಚಿತ ಎನ್ನಲಾಗಿದೆ. ಸಿ. ನಾರಾಯಣಸ್ವಾಮಿ, ಸಿ.ಜೆ. ಚಂದ್ರಶೇಖರ್, ಕೆ.ಸಿ. ರಾಮಮೂರ್ತಿ, ರಮೇಶ್ ಜಿ. ಗೌಡ ಆದರೆ, ಟಿಕೆಟ್ ಆಕಾಂಕ್ಷಿಗಳ ಆಂತರಿಕ ಚುನಾವಣೆ ಬೇರೆ ನಡೆಯಲಿದೆ. ಆದರೂ ಈ ಕ್ಷೇತ್ರ ಕಾಂಗ್ರೆಸ್ಸಿಗೆ ಕಬ್ಬಿಣದ ಕಡಲೆ

ಬೆಂಗಳೂರು ಕೇಂದ್ರದಲ್ಲಿ ಯಾರ ಕಾರಬಾರು
ಬೆಂಗಳೂರು ಕೇಂದ್ರದಲ್ಲಿ ಅಲ್ಪಸಂಖ್ಯಾತರು-ದಲಿತರೇ ಪ್ರಮುಖ ಮತದಾರರು, ಇನ್ನು ಭಾಷಾ ಅಲ್ಪಸಂಖ್ಯಾತರಾದ ತಮಿಳರು-ತೆಲುಗರೇ ನಿರ್ಣಾಯಕರು. ಕಾಂಗ್ರೆಸ್ ನಲ್ಲಿ ಮುಸ್ಲಿಂರಿಗೆ ಟಿಕೆಟ್ಟ್ ನೀಡಬೇಕು ಅಂತ, ಕ್ರೈಸ್ತರಿಗೆ ನೀಡಬೇಕೆಂದು ಆಯಾಯ ಸಮುದಾಯದವರು ಪಟ್ಟು ಹಿಡಿದಿದ್ದಾರೆ.
ಯುವ ನಾಯಕ ಆರ್ಷದ್ ರಿಜ್ವಾನ್ ಹೆಸರು ಜೋರಾಗಿ ಓಡುತ್ತಿದ್ದೆ. ಆದರೆ ಸ್ಥಳೀಯರಲ್ಲವೆಂಬ ಆರೋಪವೂ ಅವರ ಮೇಲಿದೆ. ಪಿಸಿ ಮೋಹನ್ ಬಿಜೆಪಿಯ ಅಭ್ಯರ್ಥಿಯಾಗುವ ಲಕ್ಷಣಗಳಿವೆ. ಸದ್ಯಕ್ಕೆ ಮಟ್ಟಿಗೆ ಇಲ್ಲಿ ಕಾಂಗ್ರೆಸಿಗೆ ಒಂದಷ್ಟು ಅನುಕೂಲಗಳು ಕಂಡುಬರುತ್ತಿದ್ದರು, ಅಭ್ಯರ್ಥಿಯ ಆಯ್ಕೆಯ ಮೇಲೆ ಕಾಂಗ್ರೆಸ್ ನ ಸೋಲು-ಗೆಲುವು ನಿಂತಿದೆ. ಕಾಂಗ್ರೆಸ್ ಯುವ ಅಭ್ಯರ್ಥಿ ನಿಲ್ಲಿಸುವುದೋ ಹಳೆ ಹುಲಿ ಸಿಕೆ ಜಾಫರ್ ಷರೀಪ್ ಕರೆ ತರುವ ಚಿಂತನೆಯಲ್ಲಿದೆ.
ಈ ನಡುವೆ ಆಮ್ ಆದ್ಮಿ ಪಕ್ಷ ಇನ್ಫೋಸಿಸ್ ಮಾಜಿ ಉದ್ಯೋಗಿ ಬಾಲಕೃಷ್ಣನ್ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದೆ. ಬೆಂಗಳೂರು ಹಬ್ಬ ಖ್ಯಾತಿಯ ನಂದಿನಿ ಆಳ್ವ(ಜೀವರಾಜ್ ಆಳ್ವ ಅವರ ಪತ್ನಿ) ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಯೋಜಿಸಿದೆ.

ಬೆಂಗಳೂರು ಗ್ರಾಮಾಂತರದಲ್ಲಿ ಗೆಲುವು ಯಾರಿಗೆ
ಸದ್ಯದ ಮಟ್ಟಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ‘ರಿಪಬ್ಲಿಕ್ ಆಫ್ ಡಿಕೆ ಬ್ರದರ್ಸ್' ಆಗಿ ಪರಿವರ್ತನೆಗೊಂಡಿದೆ. ಈಗ ಡಿಕೆಶಿ ಪ್ರಭಾವಿ ಸಚಿವ, ಅವರ ತಮ್ಮ ಬೈ ಎಲೆಕ್ಷನ್ ನಲ್ಲಿ ಗೆದ್ದಿರುವ ಸಂಸತ್ ಸದಸ್ಯ. ಆಡಳಿತ ಯಂತ್ರಾಂಗ ಸಂಪೂರ್ಣವಾಗಿ ಇವರ ಕೈಯಲ್ಲಿಯೇ ಇದೇ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿಕೆ ಸುರೇಶ್ ಗೆ ವಾತಾವರಣ ಪೂರಕವಾಗಿರುವುದು ಮೇಲುನೋಟಕ್ಕೆ ಕಂಡು ಬರುತ್ತಿರುವುದು.
ಆದರೆ ದೊಡ್ಡಗೌಡರು ಆಲೋಚನೆನೇ ಬೇರೆ ಇದೇ. ಸಿ.ಪಿ. ಯೋಗಿಶ್ವರ್ ನ ಜೆಡಿಎಸ್‍ಗೆ ಕರೆ ತಂದು ಸಾಧ್ಯವಾಗದೇ ಹೋದರೆ ಸಮಾಜವಾದಿ ಪಕ್ಷದಿಂದಲ್ಲೇ ನಿಲ್ಲಿಸಿ ತಮ್ಮ ಬೆಂಬಲವನ್ನು ಸಂಪೂರ್ಣವಾಗಿ ಧಾರೆಯೆರೆದು ಕ್ಷೇತ್ರದ ಮೇಲೆ ಮತ್ತೆ ಹಿಡಿತ ಸಾಧಿಸುವ ದೂರಲೋಚನೆ ಅವರದು. ಇನ್ನು ಬಿಜೆಪಿಯ ಪಿ.ಮುನಿರಾಜು ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ ಹಾಗೂ ಅನೇಕಲ್ ನಲ್ಲಿ ಪಕ್ಷಕ್ಕಿರುವ ಬೆಂಬಲ- ಮೋದಿ ಅಲೆಯನ್ನು ಬಹುವಾಗಿ ನೆಚ್ಚಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಕಾಂಗ್ರೆಸ್ ನೇರ ಮುನ್ನಡೆಯಲ್ಲಿದೆ.












Click it and Unblock the Notifications