ಕರ್ನಾಟಕದಲ್ಲಿ ಶೀಘ್ರದಲ್ಲೇ ಲಾಕ್‌ಡೌನ್? ಇಂದು ತಜ್ಞರೊಂದಿಗೆ ಸಿಎಂ ಸಭೆ
ಬೆಂಗಳೂರು ಜನವರಿ 04: ಕೋವಿಡ್ ಮತ್ತು ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಜ್ಞರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. "ನಾವು COVID ಮತ್ತು Omicron ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ, ಇದು ದೇಶದಲ್ಲಿ, ರಾಜ್ಯ ಮತ್ತು ನೆರೆಯ ರಾಜ್ಯಗಳಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ. ಆದ್ದರಿಂದ ನಾವು ತಜ್ಞರೊಂದಿಗೆ ಚರ್ಚೆ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ತಜ್ಞರೊಂದಿಗೆ ಚರ್ಚೆ ನಡೆಸುತ್ತೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸೋಂಕಿನ ವೇಗ ಹೆಚ್ಚಿರುವುದರಿಂದ ರಾಜ್ಯದಲ್ಲಿ ಪರಿಸ್ಥಿತಿ ನಿರ್ವಹಣೆಗೆ ತಜ್ಞರ ಅಭಿಪ್ರಾಯ ಪಡೆಯಲಾಗುವುದು. ಜೊತೆಗೆ ತಜ್ಞರ ಸಮಿತಿಯ ಅಭಿಪ್ರಾಯವನ್ನು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಕೊರೊನಾ ಮತ್ತು ಓಮಿಕ್ರಾನ್ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರವು ಈಗಾಗಲೇ ಡಿಸೆಂಬರ್ 28 ರಿಂದ ಜನವರಿ 7 ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ "ರಾತ್ರಿ ಕರ್ಫ್ಯೂ" ನಂತಹ ನಿಯಂತ್ರಣ ಕ್ರಮಗಳನ್ನು ವಿಧಿಸಿದೆ.
"ಹಿಂದಿನ ಎರಡು ಅಲೆಗಳನ್ನು ನಿರ್ವಹಿಸಿದ ಅನುಭವವನ್ನು ಹೊಂದಿದ್ದು, ಜನರ ದೈನಂದಿನ ಜೀವನದ ಮೇಲೆ ಸೀಮಿತ ಪರಿಣಾಮ ಬೀರುವ ಕ್ರಮಗಳನ್ನು ಶಿಫಾರಸು ಮಾಡಲು ನಾವು ಈಗಾಗಲೇ ತಜ್ಞರನ್ನು ಕೇಳಿದ್ದೇವೆ" ಎಂದು ಅವರು ಹೇಳಿದರು. ಜೊತೆಗೆ ಕೋವಿಡ್ ತಡೆಗಟ್ಟುವ ಮೂಲಕ ಸ್ವಯಂ ನಿಯಂತ್ರಣವನ್ನು ತೋರಿಸಲು ನಾಗರಿಕರಿಗೆ ಕರೆ ನೀಡಿದರು.

ಕರ್ನಾಟಕವು ಕಳೆದ ಐದು ದಿನಗಳಿಂದ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ದೈನಂದಿನ ಅಂಕಿಅಂಶಗಳು 1,000 ದಾಟಿದೆ. ಕರ್ನಾಟಕದಲ್ಲಿ ಭಾನುವಾರದಂದು 10 ಕೊರೋನವೈರಸ್‌ನ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಈವರೆಗೆ 76 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಜ. 03 ರಂದು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 1209 ಆಗಿದೆ.
ಈಗಾಗಲೇ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾದರೆ ಹಾಗೂ ಆಸ್ಪತ್ರೆಗಳಲ್ಲಿ ಐಸಿಯು ಮತ್ತು ಆಕ್ಸಿಜನ್ ಹಾಸಿಗೆಗಳು ಶೇ.40ರಷ್ಟು ಭರ್ತಿಯಾದರೆ ಲಾಕ್‌ಡೌನ್ ಮಾಡುವುದು ಅನಿವಾರ್ಯ ಎಂದು ಸರಕಾರಕ್ಕೆ ಸಮಿತಿ ಸೂಚಿಸಿದೆ. ಜನವರಿ 2, ಭಾನುವಾರ ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 1.08 ಇದೆ. ಸೋಂಕಿನಬ್ಬರ ತೀವ್ರಗೊಳ್ಳುತ್ತಿರುವ ಲಕ್ಷಣಗಳನ್ನು ಗಮನಿಸಿದರೆ, ಕೆಲವೇ ದಿನಗಳಲ್ಲಿ ಶೇ. 5ರ ಪಾಸಿಟಿವಿಟಿ ಪ್ರಮಾಣ ತಲುಪಿದರೆ ಅಚ್ಚರಿ ಇಲ್ಲ. ಇದೇ ವೇಳೆ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗದಂತೆ ತಡೆಯಲು ಹಳದಿ, ಕಿತ್ತಳೆ, ಕೆಂಪು ಬಣ್ಣಗಳ ಕೋಡ್ ಆಧಾರದ ಮೇಲೆ ನಿರ್ಬಂಧ ವಿಧಿಸುವಂತೆಯೂ ಸಲಹೆ ನೀಡಿದೆ. ಸೋಂಕು ಶೇ.1ಕ್ಕಿಂತ ಕಡಿಮೆ ಇದ್ದರೆ ಯೆಲ್ಲೊಅಲರ್ಟ್, ಶೇ. 1 ರಿಂದ 2ರಷ್ಟಿದ್ದರೆ ಆರೆಂಜ್ ಹಾಗೂ ಸೋಂಕು 2ಕ್ಕಿಂತ ಹೆಚ್ಚಿದ್ದರೆ ರೆಡ್ ಅಲರ್ಟ್ ನೀಡಿ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲು ಸೂಚಿಸಲಾಗಿದೆ.

ಕರ್ನಾಟಕದಲ್ಲಿ ಕೊರೊನಾ ಸೋಂಕು ದ್ವಿಗುಣವಾಗುತ್ತಿದ್ದು, ಶಾಲಾ ಕಾಲೇಜುಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ 23 ಶಿಕ್ಷಕ- ಶಿಕ್ಷಕಿಯರು ಕೊರೊನಾ ಸೋಂಕಿನಿಂದ ( ಸಕ್ರಿಯ) ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ 193 ಮಕ್ಕಳು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಒಂದೇ - ಒಂದು ಪ್ರಕರಣದಲ್ಲಿ ಸಹ ಕೊರೊನಾ ಸೋಂಕಿತ ವಿದ್ಯಾರ್ಥಿಗಳ ಜೀವ ಹಾನಿ ಸಂಭವಿಸಿಲ್ಲ. ಸರ್ಕಾರದ ಅಂಕಿ ಅಂಶಗಳಿಂದ ಈ ಸಂಗತಿ ಹೊರ ಬಿದ್ದಿದೆ.
Recommended Video
ಈ ಬಗ್ಗೆ ಮುಖ್ಯಮಂತ್ರಿಗಳು ಟಾಸ್ಕ್ ಫೋರ್ಸ್ ಸಭೆ ಮುಗಿಸಿದ ಬಳಿಕ ಅವರೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುತ್ತದೆ. ಎಲ್ಲೋ ಒಂದು ಕಡೆ ಕೊರೊನಾ ಕಾಣಿಸಿಕೊಂಡು ಇಡೀ ರಾಜ್ಯದೆಲ್ಲೆಡೆ ಶಾಲೆಗಳನ್ನು ಬಂದ್ ಮಾಡುವುದರಲ್ಲಿ ಅರ್ಥವಿಲ್ಲ. ಮಕ್ಕಳ ಕಲಿಕೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಈಗಾಗಲೇ ಕೊರೊನಾ ಲಾಕ್ ಡೌನ್‌ನಿಂದ ಮಕ್ಕಳ ಶಿಕ್ಷಣದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತೇವೆ ಎಂದು ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.












Click it and Unblock the Notifications