Bengaluru 2nd Airport: 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈ ಭಾಗದ ಜನರ ವಿರೋಧ
ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಸ್ಥಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಅಂತಿಮ ಹಂತ ತಲುಪಿದೆ. ಹಾರೋಹಳ್ಳಿ ಮತ್ತು ನೆಲಮಂಗಲ ಅಂತಿಮ ಹಂತದ ರೇಸ್‌ನಲ್ಲಿದ್ದು ಸರ್ಕಾರ ಯಾವ ಸ್ಥಳವನ್ನು ಗುರುತಿಸುತ್ತದೆ ಎನ್ನುವ ಕುತೂಹಲವಿದೆ. ಬೆಂಗಳೂರು ಅಭಿವೃದ್ಧಿಗೆ ವೇಗ ತುಂಬಲು ಎರಡನೇ ವಿಮಾನ ನಿಲ್ದಾಣ ಸಹಕಾರಿಯಾಗಲಿದೆ, ಆದರೆ ಆರಂಭದಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಡೆ ತಡೆಗಳು ಎದುರಾಗುತ್ತಿದೆ.
ಹಾರೋಹಳ್ಳಿ ಸಮೀಪ ಸರ್ಕಾರ ಸ್ಥಳ ಗುರುತಿಸಿದ್ದು ಇದು ಸ್ಥಳ ಆಯ್ಕೆಯಲ್ಲಿ ಮುಂಚೂಣಿಯಲ್ಲಿದೆ ಎನ್ನುವ ವಿಚಾರ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅದರಲ್ಲೂ ಕೃಷಿಯನ್ನು ನಂಬಿಕೊಂಡು ಬದುಕುತ್ತಿರುವ ಈ ಭಾಗದ ಜನ ಆತಂಕಗೊಂಡಿದ್ದು, ನಮ್ಮ ಕಡೆ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದೇ ಬೇಡ ಎನ್ನುತ್ತಿದ್ದಾರೆ.

ಯಾವುದೇ ಕಾರಣಕ್ಕೂ ಹಾರೋಹಳ್ಳಿ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದು ಈ ಸಂಬಂಧ ಶಾಸಕರಿಗೆ ಮನವಿ ಕೂಡ ಸಲ್ಲಿಸಿದ್ದಾರೆ. ಹಾರೋಹಳ್ಳಿಯ ದೊಡ್ಡ ಸಾದೇನಹಳ್ಳಿ ಗ್ರಾಮಸ್ಥರು ವಿಮಾನ ನಿಲ್ದಾಣ ನಿರ್ಮಾಣವನ್ನು ವಿರೋಧಿಸಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆಗೆ ಆಗಮಿಸಿದ್ದ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಮನವಿ ಮಾಡಿದ್ದಾರೆ.
ನಮ್ಮ ಕುಟುಂಬಗಳು ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಾ ಬಂದಿದ್ದೇವೆ. ಈ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು. ಇರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ, ಹೇಗೋ ನೆಮ್ಮದಿಯಾಗಿ ಬದುಕುತ್ತಿದ್ದೇವೆ. ಸರ್ಕಾರ ಕೊಡುವ ಪರಿಹಾರ ಇಟ್ಟುಕೊಂಡು ನಾವೇನು ಮಾಡಬೇಕು, ನಮಗೆ ವಿಮಾನ ನಿಲ್ದಾಣ ಬೇಡ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮಸ್ಥರ ಮನವಿಯನ್ನು ಆಲಿಸಿರುವ ಶಾಸಕ ಇಕ್ಬಾಲ್ ಹುಸೇನ್, ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹಾರೋಹಳ್ಳಿ ಹೆಸರು ಕೇಳಿ ಬಂದಿದೆ ಅಷ್ಟೇ, ಒಟ್ಟು ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದ್ದು ಇನ್ನೂ ಯಾವುದೇ ಸ್ಥಳವೂ ಅಂತಿಮವಾಗಿಲ್ಲ, ಯಾರೂ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಕಾದು ನೋಡೋಣ ಎಂದು ಸಮಾಧಾನ ಪಡಿಸಿದ್ದಾರೆ.
ನೆಲಮಂಗಲವೇ ಸೂಕ್ತ ಆಯ್ಕೆ?
ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನೆಲಮಂಗಲ-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ ಗುರುತಿಸಿರುವ ಜಾಗವೇ ಉತ್ತಮ ಆಯ್ಕೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಫೆರಿಫೆರಲ್ ರಿಂಗ್ ರಸ್ತೆ, ತುಮಕೂರು ಬೆಂಗಳೂರು ಎಕ್ಸ್‌ಪ್ರೆಸ್ ವೇ, ನೈಸ್ ರಸ್ತೆ ಹತ್ತಿರವಿದ್ದು, ನೆಲಮಂಗಲಕ್ಕೂ ಮೆಟ್ರೋ ವಿಸ್ತರಣೆ ಮಾಡುವ ಯೋಚನೆ ಇರುವುದರಿಂದ ಇದನ್ನು ಆಯ್ಕೆ ಮಾಡಿದರೆ ಬೆಂಗಳೂರು ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಹೇಳಲಾಗಿದೆ.












Click it and Unblock the Notifications