ಸಮ್ಮಿಶ್ರ ಸರ್ಕಾರದ ಪರ ಒಲವಿಗೆ ಈ ಫಲಿತಾಂಶ ಸಾಕ್ಷಿ: ಎಚ್‌ಡಿಕೆ
ಬೆಂಗಳೂರು, ಸೆಪ್ಟೆಂಬರ್ 03: ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶವು ಸಮ್ಮಿಶ್ರ ಸರ್ಕಾರವನ್ನು ಜನ ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಉತ್ತಮ ಪ್ರದರ್ಶನ ತೋರಿದ್ದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು 'ಸರ್ಕಾರ ಇದೆಯಾ?' ಎಂದೆಲ್ಲಾ ಪ್ರಶ್ನಿಸಿದ್ದರು ಈ ಫಲಿತಾಂಶದ ಮೂಲಕ ಜನರೇ ಅವರಿಗೆ ಉತ್ತರ ನೀಡಿದ್ದಾರೆ ಎಂದರು.
ನಗರ ಪ್ರದೇಶದಲ್ಲಿ ಬಿಜೆಪಿ ಪಕ್ಷದ ಒಲವಿದೆ ಎಂಬ ನಂಬಿಕೆಯನ್ನು ಈ ಚುನಾವಣೆ ಫಲಿತಾಂಶ ಸುಳ್ಳು ಮಾಡಿದೆ ಎಂದ ಅವರು, ನಗರ ಪ್ರದೇಶದಲ್ಲೂ ಬಿಜೆಪಿ ಅವರಿಗೆ ಹೊಡೆತ ಬಿದ್ದಿದೆ ಎಂದು ಅವರು ಹೇಳಿದರು.

ನಾವೇನು ಈ ಚುನಾವಣೆಗೆ ಭಾರಿ ಪ್ರಚಾರವನ್ನೇನೂ ಮಾಡಲಿಲ್ಲ. ಸ್ಥಳೀಯ ಅಭ್ಯರ್ಥಿಗಳೇ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸಲು ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ ಬಿಜೆಪಿಯವರು ಜಿಲ್ಲಾವಾರು ನಾಯಕರುಗಳು ತೆರಳಿ ಪ್ರಚಾರ ಮಾಡಿದ್ದರು ಆದರೆ ಅವರಿಗೆ ಗೆಲುವು ಸಾದ್ಯವಾಗಲಿಲ್ಲ ಎಂದು ಅವರು ಹೇಳಿದರು.
ಅತಂತ್ರ ಸ್ಥಿತಿ ಇದ್ದ ಕಡೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ಮಾಹಿತಿ ನೀಡಿದ ಅವರು, ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಸೇರಿಕೊಂಡು ಬಿಜೆಪಿಯನ್ನು ರಾಜ್ಯದಲ್ಲಿ ಅರಳದಂತೆ ಮಾಡುತ್ತೇವೆ ಎಂದು ವಿಶ್ವಾಸದಿಂದ ನುಡಿದರು.












Click it and Unblock the Notifications