Idli: ಬೆಂಗಳೂರಿನಲ್ಲಿ ರುಚಿಯಾದ ಇಡ್ಲಿ ಸಿಗುವ ಜನಪ್ರಿಯ ಹೋಟೆಲ್‌ಗಳ ಪಟ್ಟಿ ಇಲ್ಲಿದೆ
ಬೆಂಗಳೂರು, ಡಿಸೆಂಬರ್ 04: ಬೆಳಗಿನ ಉಪಹಾರ ಒಂದು ರುಚಿಕರವಾಗಿದ್ದರೆ ಆ ದಿನದ ಉತ್ತಮವಾಗಿ ಆರಂಭವಾದಂತೆ, ಸಂಜೆಯ ತಿಂಡಿ ರುಚಿಕರವಾಗಿದ್ದರೆ ಆ ದಿನದ ಉತ್ತಮವಾಗಿ ಮುಕ್ತಾಯವಾದಂತೆ. ಹೀಗಾಗಿ ಉಪಹಾರ ಹಾಗೂ ಸಂಜೆಯ ತಿಂಡಿಗೆ ಇಡ್ಲಿ ಬೆಸ್ಟ್ ಆಯ್ಕೆ.
ಬೆಂಗಳೂರಿನ ನಿವಾಸಿಗಳು ಒತ್ತಡ ಜೀವನದಲ್ಲಿ ಉತ್ತಮ ಆಹಾರಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೊಡುತ್ತಾರೆ. ಮನೆ ತಿಂಡಿಯನ್ನು ಮಿಸ್ ಮಾಡಿಕೊಳ್ಳುವವರು ಹೋಟೆಲ್‌ಗಳಲ್ಲೇ ಮನೆಯ ರುಚಿಯನ್ನು ಹುಡುಕುತ್ತಿರುತ್ತಾರೆ. ಇಂತವರಿಗಾಗಿ ಬೆಂಗಳೂರಿನಲ್ಲಿ ಇಡ್ಲಿ ಸಿಗುವ ಬೆಸ್ಟ್ ಸ್ಥಳಗಳ ಪಟ್ಟಿಯನ್ನು ನೀಡಲಾಗಿದೆ. ಆಹಾರ ಪ್ರಿಯರು ಸ್ವತಃ ಸ್ಥಳಕ್ಕೆ ತೆರಳಿ ರುಚಿ ನೋಡಿದ ಬಳಿಕ ಅವರು ನೀಡಿದ ಪ್ರತಿಕ್ರಿಯೆ ಮೇಲೆ ಈ ಪಟ್ಟಿಯನ್ನು ನೀಡಲಾಗಿದೆ.

ಬೆಂಗಳೂರಿನಲ್ಲಿ ಇಡ್ಲಿ ಸಿಗುವ ಬೆಸ್ಟ್ ಸ್ಥಳಗಳ ಪಟ್ಟಿ ಇಲ್ಲಿದೆ.
ಉಮೇಶ್ ದೋಸೆ ಪಾಯಿಂಟ್, ಶೇಷಾದ್ರಿಪುರಂ
ಬೆಂಗಳೂರಿನ ಕುಮಾರ ಪಾರ್ಕ್ ಬಳಿ ಇರುವ ಉಮೇಶ್ ದೋಸೆ ಪಾಯಿಂಟ್ ಹೆಸರಿಗೆ ತಕ್ಕಂತೆ ದೋಸೆ ಹೆಚ್ಚು ಜನಪ್ರಿಯತೆ ಪಡೆದಿದೆ. ಜೊತೆಗೆ ಇಡ್ಲಿ ಕೂಡ. ಇಲ್ಲಿ ತಯಾರಿಸುವ ಇಡ್ಲಿಗೆ ಆಹಾರ ಪ್ರಿಯರು ಮನಸೋತಿದ್ದಾರೆ. ಶೇಷಾದ್ರಿಪುರಂ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿರುವ ಈ ಹೋಟೆಲ್ ಶುದ್ಧ ಸಸ್ಯಹಾರಿಯಾಗಿದ್ದು, ಎಲ್ಲಾ ರೀತಿಯ ಉಪಹಾರಗಳು ಇಲ್ಲಿ ದೊರೆಯುತ್ತದೆ. ಆದರೆ ಇಲ್ಲಿನ ಇಡ್ಲಿ, ದೋಸೆ, ಚಿತ್ರಾನಕ್ಕೆ ಸಪರೇಟ್ ಫ್ಯಾನ್ಸ್ ಇದ್ದು, ಪ್ರತಿ ನಿತ್ಯವು ಇಲ್ಲಿಗೆ ಬಂದು ತಿನ್ನುವ ಆಹಾರ ಪ್ರಿಯರು ಕೂಡ ಇದ್ದಾರೆ. ಈ ಹೋಟೆಲ್ ಉಮೇಶ್ ಕ್ಯಾಂಟೀನ್ ಅಂತಲೂ ಜನಪ್ರಿಯವಾಗಿದೆ.
ಸದಾ ಜನರಿಂದ ತುಂಬಿರುವ ಉಮೇಶ್ ದೋಸೆ ಪಾಯಿಂಟ್ ಬೆಂಗಳೂರಿನ ಕೆಲ ಭಾಗಗಲ್ಲಿ ಬ್ರಾಂಚ್ ಕೂಡ ಹೊಂದಿದೆ. ಉಮೇಶ್ ದೋಸೆ ಪಾಯಿಂಟ್‌ನಲ್ಲಿ ಸಾಮಾನ್ಯ ಇಡ್ಲಿ, ತುಪ್ಪದ ಇಡ್ಲಿ ಹಾಗೂ ತುಪ್ಪದ ಪುಡಿ ಇಡ್ಲಿ ಲಭ್ಯ ಇರುತ್ತದೆ. ಬೃಹತ್ ಆಕಾರದ ಇಡ್ಲಿಗಳ ಮೇಲೆ ತುಪ್ಪ ಸುರಿದು ಚಟ್ನಿ ಪುಡಿ ಸುರಿದು ನೀಡುತ್ತಾರೆ. ಈ ಇಡ್ಲಿ ಬಾಯಲ್ಲಿ ಇಡುತ್ತಿದ್ದಂತೆ ಕರಗುತ್ತದೆ. ಬೆಳಗ್ಗೆ ಆರಂಭವಾಗುವ ಈ ಹೋಟೆಲ್ ರಾತ್ರಿ ಸುಮಾರು 11 ಗಂಟೆ ತನಕ ತೆರೆದಿರುತ್ತದೆ. ಇನ್ನು ಉಮೇಶ್ ದೋಸೆ ಪಾಯಿಂಟ್‌ನಲ್ಲಿ ಚಟ್ನು ಪುಡಿ ಸೇರಿದಂತೆ ವಿವಿಧ ಬಗೆಯ ಖಾದ್ಯಗಳ ಮಿಕ್ಸ್ ಪ್ಯಾಕೆಟ್‌ಗಳು ಸಹ ಸಿಗುತ್ತದೆ.

ವೀಣಾ ಸ್ಟೋರ್ಸ್ ಮಲ್ಲೇಶ್ವರಂ
ಮಲ್ಲೇಶ್ವರಂನಲ್ಲಿರುವ ವೀಣಾ ಸ್ಟೋರ್ಸ್ ಎಲ್ಲಾ ರೀತಿಯ ಉಪಹಾರಕ್ಕೂ ಫೇಮಸ್. ಶುದ್ಧ ಸಸ್ಯಹಾರವಾಗಿರುವ ಈ ಹೋಟೆಲ್‌ನಲ್ಲಿ ನೀವು ರುಚಿರುಚಿಯಾದ ಉಪಹಾರದ ಖಾದ್ಯಗಳನ್ನು ಸೇವಿಸಬಹುದು. ಇಡ್ಲಿ, ದೋಸೆ, ಖಾರಬಾತ್, ಉದ್ದಿನ ವಡೆ, ಚೌಚೌ ಬಾತ್ ಹೀಗೆ ವಿವಿಧ ತಿಂಡಿಗಳು ಇಲ್ಲಿಗೆ ಬರುವ ಗ್ರಾಹಕರನ್ನು ತಮ್ಮ ರುಚಿಯಲ್ಲೇ ಹಿಡಿದಿಟ್ಟುಕೊಂಡಿರುತ್ತವೆ. ಇಲ್ಲಿ ಇಡ್ಲಿಯ ಜೊತೆಗೆ ಚಟ್ನಿ ನೀಡಲಾಗುತ್ತದೆ.
ಉಪಹಾರದ ಸಮಯದಲ್ಲಿ ಜನರಿಂದ ತುಂಬಿ ತುಳುಕುವ ಈ ಹೋಟೆಲ್‌ನಲ್ಲಿ ಸರದಿಯಲ್ಲಿ ನಿಂತು ಇಲ್ಲಿಯ ಇಡ್ಲಿ, ವಡೆ ಚಟ್ನಿಯನ್ನು ಸವಿಯಬೇಕಾಗುತ್ತದೆ. ಈ ಹೋಟೆಲ್ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8:30 ರವರೆಗೆ ತೆರೆದಿರುತ್ತದೆ. ಸದಾ ಜನರಿಂದ ತುಂಬಿ ತುಳುಕುವ ಈ ಹೋಟೆಲ್ ಆಹಾರ ಪ್ರಿಯರ ಬೆಸ್ಟ್ ಆಯ್ಕೆಯಾಗಿದೆ.

IDC ಕಿಚನ್
ಹೆಸರಿಗೆ ತಕ್ಕಂತೆ ಬೆಂಗಳೂರಿನಲ್ಲಿ ಇಡ್ಲಿ, ದೋಸೆ ಹಾಗೂ ಕಾಫಿಗೆ ಐಡಿಸಿ ಕಿಚನ್ ಜನಪ್ರಿಯತೆ ಪಡೆದಿದೆ. ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿರುವ ದಕ್ಷಿಣ ಭಾರತದ ಅತ್ಯುತ್ತಮ ತಿಂಡಿಗಳನ್ನು ಒದಗಿಸುವಲ್ಲಿ ಐಡಿಸಿ ಕಿಚನ್ ತನ್ನ ಘನತೆಯನ್ನು ಉಳಿಸಿಕೊಂಡು ಬಂದಿದೆ. ಇಲ್ಲಿ ಇಡ್ಲಿ, ತಟ್ಟೆ ಇಡ್ಲಿ, ತುಪ್ಪದ ಮಸಾಲೆ ತಟ್ಟೆ ಇಡ್ಲಿ ದೊರೆಯುತ್ತದೆ. ಮಲ್ಲಿಗೆಯಂತಹ ಬಿಸಿ ಬಿಸಿ ಇಡ್ಲಿ ಮೇಲೆ ತುಪ್ಪ ಸುರಿದು ಅದರ ಮೇಲೆ ಕಡಲೆಕಾಯಿ ಚಟ್ನಿ ಪುಡಿ ಹಾಕಿ ಕೊಡಲಾಗುತ್ತದೆ. ವಾರದ ಏಳು ದಿನವೂ ತೆರೆದಿರುವ ಈ ಹೋಟೆಲ್ ಬೆಳಗ್ಗೆ 7:30ರಿಂದ ರಾತ್ರಿ 11:45ರ ತನಕ ತೆರೆದಿರುತ್ತದೆ.
ತಾಜಾ ತಿಂಡಿ, ಜಯನಗರ
ಬೆಂಗಳೂರಿನ ಪ್ರತಿಯೊಬ್ಬ ಇಡ್ಲಿ ಅಭಿಮಾನಿಗಳಿಗೂ ಗೊತ್ತಿರುವ ಹೋಟೆಲ್ ಎಂದರೆ ಜಯನಗರದ ತಾಜಾ ತಿಂಡಿ. ಇಲ್ಲಿನ ಮೃದು ಹಾಗೂ ರುಚಿಕರವಾದ ಇಡ್ಲಿಯನ್ನು ಹಾಗೆಯೇ ಸವಿಯಬಹುದು. ಚಟ್ನಿ ಹಾಗೂ ಸಾಂಬರ್‌ನೊಂದಿಗೆ ತಾಜಾ ತಿಂಡಿಯ ಇಡ್ಲಿ ಇನ್ನೂ ಸೂಪರ್. ಸರಳ ವಿಧಾನದಲ್ಲಿ ತಯಾರಿಸಿ ನೀಡುವ ಈ ಇಡ್ಲಿ ಹಾಗೂ ಜೊತೆಗೆ ವಡೆ, ಚಟ್ನಿಯನ್ನು ಬೆಂಗಳೂರಿಗೆ ಬಂದಾಗ ಮಿಸ್ ಮಾಡದೇ ರುಚಿ ನೋಡಿ. ಬೆಳಗ್ಗೆ ಆರಂಭವಾಗುವ ಈ ಹೋಟೆಲ್ ರಾತ್ರಿ 9:30ರ ವರೆಗೆ ತೆರೆದಿರುತ್ತದೆ.
ಇನ್ನು ಬೆಂಗಳೂರಿನ ಶಂಕರಪುರದ ಬ್ರಾಹ್ಮಣ ಕಾಫಿ ಬಾರ್, ಬಸವನಗುಡಿ ಬೈ ಟು ಕಾಫಿ, ಶೇಷಾದ್ರಿಪುರಂನ ಅಮ್ಮ ಕ್ಯಾಂಟೀನ್, ಮಾವಳ್ಳಿ ಟಿಫನ್ ರೂಮ್(MTR) ಸೇರಿದಂತೆ ವಿವಿಧ ಹೋಟೆಲ್‌ಗಳಲ್ಲಿ ರುಚಿಕರವಾದ ಇಡ್ಲಿ ಸಿಗುತ್ತದೆ ಎನ್ನುವುದು ಬೆಂಗಳೂರು ಆಹಾರ ಪ್ರಿಯರ ಮಾತಾಗಿದೆ.












Click it and Unblock the Notifications