ದಸರಾ ಪ್ರಯುಕ್ತ ಬೆಂಗಳೂರಲ್ಲಿ ಬಾರ್ ಪಬ್ ಕ್ಲೋಸ್
ಬೆಂಗಳೂರು, ಅ. 3 : ಅಶೋಕನಗರ ಮತ್ತು ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಸರಾ ಹಬ್ಬದ ಆಚರಣೆ ಅಂಗವಾಗಿ ಪಲ್ಲಕ್ಕಿ ಉತ್ಸವ ಆಯೋಜಿಸಿರುವ ಕಾರಣ ಶನಿವಾರ ಎಲ್ಲಾ ಬಾರ್, ಪಬ್, ವೈನ್ ಶಾಪ್ ಮುಚ್ಚಬೇಕೆಂದು ಬೆಂಗಳೂರು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಶುಕ್ರವಾರ ಆದೇಶ ನೀಡಿದ್ದಾರೆ.
ಪಲ್ಲಕ್ಕಿ ಮೆರವಣಿಗೆಯು ರಾತ್ರಿಯಿಡಿ ನೀಲಸಂದ್ರ, ಬಜಾರ್ ಸ್ಟ್ರೀಟ್, ಆನೇಪಾಳ್ಯ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಸಂಚರಿಸಲಿದ್ದು, ಮೆರವಣಿಗೆಯು ಸಾಗುವ ಮಾರ್ಗವು ಸೂಕ್ಷ್ಮ ಪ್ರದೇಶವಾಗಿದ್ದು, ಈ ಮೆರವಣಿಗೆಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆಯುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆ ಘಟಿಸಬಾರದೆಂದು ಈ ಕ್ರಮ ತೆಗೆದುಕೊಳ್ಳಲಾಗಿದೆ. ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಈ ಸಮಯದಲ್ಲಿ ಕಿಡಿಗೇಡಿಗಳು/ಸಮಾಜಘಾತಕ ವ್ಯಕ್ತಿಗಳು ಕುಡಿದ ಅಮಲಿನಲ್ಲಿ ದೇವರ ಪಲ್ಲಕ್ಕಿ ಉತ್ಸವ, ಮೆರವಣಿಗೆ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವುಂಟು ಮಾಡುವ ಸಾಧ್ಯತೆಗಳಿವೆ ಎಂದು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರು ನೀಡಿರುವ ವರದಿಯಿಂದ ಹಾಗೂ ಉಪ ಪೊಲೀಸ್ ಆಯುಕ್ತರು, ಗುಪ್ತವಾರ್ತಾ ವಿಭಾಗ ಮಾಹಿತಿ ನೀಡಿದೆ.
ಈ ವರದಿಯಲ್ಲಿ ಸಾಕಷ್ಟು ಸತ್ಯಾಂಶಗಳಿರುವುದರಿಂದ ದಸರಾ ಉತ್ಸವ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶದಿಂದ ಮತ್ತು ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವುಂಟಾಗಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ-ಪಾಸ್ತಿಗಳಿಗೆ ನಷ್ಟವನ್ನುಂಟುಮಾಡುವ ಘಟನೆಗಳನ್ನು ತಡೆಯುವ ಅವಶ್ಯಕತೆ ಇರುವುದರಿಂದ ಈ ಆದೇಶ ಹೊರಡಿಸಿದ್ದಾರೆ.












Click it and Unblock the Notifications