ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹೈವೇಯಂತೆ, ಎಣ್ಣೆ ಸೇಲ್ ಬಂದ್!
ಬೆಂಗಳೂರು, ಜೂನ್ 24: ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳಾ ಎಂಬ ಬಗ್ಗೆ ಗೊಂದಲ ಶುರುವಾಗಿದೆ. ಆ ಕಾರಣಕ್ಕೆ ಜುಲೈ ಒಂದರಿಂದ ಈ ರಸ್ತೆಗಳಲ್ಲಿ ಮದ್ಯ ಮಾರಾಟವನ್ನು ನಿಲ್ಲಿಸುವ ಸಾಧ್ಯತೆ ಇದೆ.
ಸರಕಾರವೇನೋ ಇವುಗಳನ್ನು ರಾಷ್ಟ್ರೀಯ ಹೆದ್ದಾರಿ ಅಂತ ಹೇಳುತ್ತಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇನೋ ಇದು ನಮ್ಮ ಸುಪರ್ದಿಗೆ ಬರೋದಿಲ್ಲ ಎನ್ನುತ್ತಿದೆ. ಪ್ರಾಧಿಕಾರದಿಂದ ಏಪ್ರಿಲ್ ಆರರಂದು ಅಶೋಕ್ ನಗರ ವ್ಯಾಪ್ತಿಯ ಅಬಕಾರಿ ನಿರೀಕ್ಷಕರಿಗೆ ಪತ್ರ ಬರೆದು, ಈ ರಸ್ತೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಲಾಗಿದೆ.
ಒಂದು ಕಡೆ ಪ್ರಾಧಿಕಾರವೇ ಹೀಗೆ ಪತ್ರ ಬರೆದು ಹೇಳಿದರೂ ರಾಜ್ಯ ಸರಕಾರ ಮಾತ್ರ, ಈ ರಸ್ತೆಗಳನ್ನು ಡಿನೋಟಿಫೈ ಮಾಡಿ ಎಂದು ಕೇಂದ್ರವನ್ನು ಕೇಳಿಕೊಳ್ಳುವ ಮೂಲಕ ಗೊಂದಲವನ್ನು ಮತ್ತಷ್ಟು ಹೆಚ್ಚು ಮಾಡಿದೆ. ನಗರದ ಹೃದಯ ಭಾಗವಾಗಿರುವ ಇಲ್ಲಿ ನೂರರಷ್ಟು ಪಬ್ ಗಳಿವೆ. ಬಾರ್ ಹಾಗೂ ಮದ್ಯ ಮಾರಾಟ ಮಳಿಗೆಗಳಿವೆ.

ಈ ನಾಲ್ಕು ರಸ್ತೆಗಳು ರಾಷ್ಟ್ರೀಯ ಹೆದ್ದಾರಿ
ನಗರದ ಉಳಿದ ಕಡೆಯೆಲ್ಲ ಅಬಕಾರಿ ಪರವಾನಗಿ ನವೀಕರಣವನ್ನು ಮಾಡಲಾಗಿದೆ. ಆದರೆ ಈ ನಾಲ್ಕು ರಸ್ತೆಯ ವ್ಯಾಪ್ತಿಯಲ್ಲಿ ಬರುವ ಮಳಿಗೆಗಳ, ಪಬ್-ಬಾರ್ ಗಳ ಪರವಾನಗಿಯನ್ನು ನವೀಕರಣವನ್ನು ಮಾಡಲು ಹಿಂದೇಟು ಹಾಕಿದ್ದಾರೆ. ಹೆದ್ದಾರಿಗಳ ಐನೂರು ಮೀಟರ್ ಫಾಸಲೆಯಲ್ಲಿ ಮದ್ಯ ಮಾರಾಟ ಮಾಡುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.ಗೆ

ಬಿಬಿಎಂಪಿ ದಾಖಲೆಗಳಲ್ಲಿದೆ
ಆದರೆ, ನಗರದ ವ್ಯಾಪ್ತಿಯೊಳಗೆ ಬಂದರೂ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆಗಳು ರಾಷ್ಟ್ರೀಯ ಹೆದ್ದಾರಿ ಎಂದು ಬಿಬಿಎಂಪಿ ದಾಖಲೆಗಳಲ್ಲಿದೆ. ಬಿಬಿಎಂಪಿ ಹಾಗೂ ಅಬಕಾರಿ ಇಲಾಖೆ ಪ್ರಕಾರ ಈ ರಸ್ತೆಗಳು ರಾಷ್ಟ್ರೀಯ ಹೆದ್ದಾರಿ. ಇರುವುದೊಂದೇ ಭರವಸೆ ಅಂದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿದ ಸ್ಪಷ್ಟೀಕರಣ ಪತ್ರ ಮಾತ್ರ.

ದಿನಕ್ಕೆ ಸರಾಸರಿ ಐದು ಕೋಟಿ ರುಪಾಯಿ ಮದ್ಯ ಮಾರಾಟ
ಈ ಪ್ರದೇಶದಲ್ಲಿ ದಿನಕ್ಕೆ ಸರಾಸರಿ ಐದು ಕೋಟಿ ರುಪಾಯಿ ಮದ್ಯ ಮಾರಾಟ ಆಗುತ್ತದೆ. ಕಳೆದ ಸಾಲಿನಲ್ಲಿ ಅಬಕಾರಿ ಇಲಾಖೆಗೆ ಬೆಂಗಳೂರು ನಗರ ಹಾಗೂ ಈ ಕೇಂದ್ರ ಜಿಲ್ಲಾ ಪ್ರದೇಶದಿಂದ ಏಳು ಸಾವಿರ ಕೋಟಿಗೂ ಹೆಚ್ಚು ಆದಾಯ ಬಂದಿದೆ.

ಟೌನ್ ಹಾಲ್ ನಿಂದ ಹೊಸೂರು ರಸ್ತೆವರೆಗೆ ಮತ್ತೊಂದು ಹೆದ್ದಾರಿ
ಬಿಬಿಎಂಪಿ ದಾಖಲೆ ಪ್ರಕಾರ, ಬಸವೇಶ್ವರ ವೃತ್ತದಿಂದ ರಾಜಭವನ್ ಮಾರ್ಗವಾಗಿ ಎಂಜಿ ರಸ್ತೆಯ ಟ್ರಿನಿಟಿ ವೃತದವರೆಗೂ ಅಂದರೆ ಓಲ್ಡ್ ಮದ್ರಾಸ್ ರಸ್ತೆ ತಲುಪುವ ಮುಂಚಿನವರೆಗೂ ರಾಷ್ಟ್ರೀಯ ಹೆದ್ದಾರಿ ಎಂದಿದೆ. ಇನ್ನು ಟೌನ್ ಹಾಲ್ ನಿಂದ ಹೊಸೂರು ರಸ್ತೆವರೆಗೆ ಅದು ಜೆಸಿ ರಸ್ತೆ ಮೂಲಕ ಸಾಗುತ್ತದೆ. ಅದು ಕೂಡ ಹೆದ್ದಾರಿ ಎಂದಿದೆ.

ಒಂದೊಂದು ದಾಖಲೆಗಳು ಒಂದೊಂದು ರೀತಿ
ಒಂದೊಂದು ದಾಖಲೆಗಳು ಒಂದೊಂದು ರೀತಿಯ ಮಾಹಿತಿ ನೀಡುತ್ತಿದ್ದು, ಈ ವ್ಯಾಪ್ತಿಯಲ್ಲಿ ಬರುವ ಬಾರ್, ಪಬ್ ಮಾಲೀಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಲೈಸನ್ಸ್ ನವೀಕರಣಕ್ಕೆ ಜುಲೈ ಒಂದರ ತನಕ ಅವಕಾಶ
ಕರ್ನಾಟಕದಲ್ಲಿ ಲೈಸನ್ಸ್ ನವೀಕರಣವನ್ನು ಜೂನ್ ಒಂದರಿಂದ ಜುಲೈ ಒಂದರ ಮಧ್ಯೆ ಮಾಡಿಸಬೇಕು. ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ತುಂಬ ಕಡಿಮೆ ಸಮಯ ಇರುವುದರಿಂದ, ಮಾಲೀಕರು ಮಳಿಗೆ ಮುಚ್ಚುವ ಆತಂಕದಲ್ಲಿದ್ದಾರೆ.












Click it and Unblock the Notifications