Liquor Ban: ಮದ್ಯಪ್ರಿಯರಿಗೆ ಸಿಹಿ ಸುದ್ದಿ: ಮದ್ಯ ನಿಷೇಧ 2 ದಿನಕ್ಕೆ ಸೀಮಿತಗೊಳಿಸಿ ಹೈಕೋರ್ಟ್ ಆದೇಶ
ಬೆಂಗಳೂರು, ಫೆಬ್ರವರಿ 14: ಬೆಂಗಳೂರಿನಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ನಗರದಲ್ಲಿ ಮದ್ಯ ನಿಷೇಧ ಕುರಿತು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಮಾರ್ಪಡಿಸಿ ಆದೇಶ ಹೊರಡಿಸಿದೆ.
ವಿಧಾನಪರಿಷತ್ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಸಂಬಂಧ ಇಂದಿನಿಂದ ಫೆ.14 ರಿಂದ 16 ಹಾಗೂ ಫೆ.20ಕ್ಕೆ ಒಟ್ಟು ನಾಲ್ಕು ದಿನ ಮದ್ಯ ಮಾರಾಟ ನಿಷೇಧಿಸಿ ಚುನಾವಣಾಧಿಕಾರಿಗಳು ನಿರ್ಧಾರ ಪ್ರಕಟಿಸಿದ್ದರು. ಇದನ್ನು ಮಾರ್ಪಡಿಸಿರುವ ಹೈಕೋರ್ಟ್ ಮತದಾನ ದಿನ ಮತ್ತು ಮತ ಎಣಿಕೆ ದಿನದಂದು ಮಾತ್ರ ಮದ್ಯ ಮಾರಾಟದ ಮೇಲಿನ ನಿಷೇಧ ಸಿಮೀತಗೊಳಿಸಿ ಆದೇಶ ಹೊರಡಿಸಿದೆ.

ಇದೇ ಫೆಬ್ರವರಿ 16 ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಎಂಎಲ್‌ಸಿ ಉಪಚುನಾವಣೆ ನಡೆಯಲಿದೆ. ಈ ಸಂಬಂಧ ನಾಲ್ಕು ದಿನ ಮದ್ಯ ಮಾರಾಟ ನಿಷೇಧಿಸಿತ್ತು. ಇದರಿಂದ ಉದ್ಯಮಕ್ಕೆ ನಷ್ಟವಾಗಲಿದೆ. ಪ್ರೇಮಿಗಳ ದಿನಾಚರಣೆ ಇರುವ ಪ್ರಯುಕ್ತ ಅತ್ಯಧಿಕ ವಹೀವಾಟು, ಲಾಭದ ನಿರೀಕ್ಷೆಯಲ್ಲಿದ್ದೇವೆ. ಹೀಗಾಗಿ ನಿರ್ಧಾರ ಮರು ಪರಿಶೀಲಿಸುವಂತೆ ಬೆಂಗಳೂರು ಹೋಟೆಲು ಮಾಲೀಕರ ಸಂಘವು ಮನವಿ ಮಾಡಿತ್ತು.
ಆದರೆ ಈ ಮನವಿಗೆ ಯಾವುದೇ ಸ್ಪಂದನೆ ವ್ಯಕ್ತವಾಗದ ಕಾರಣ ಸಂಘವು ಹೈಕೋರ್ಟ್ ಮೆಟ್ಟಿಲೇರಿತ್ತು. ಸದರಿ ಚುನಾವಣೆಯಲ್ಲಿ ಕೇವಲ 16,000 ಮತದಾರರಿದ್ದಾರೆ. ಇಡಿ ಬೆಂಗಳೂರಿಗೆ ಅನ್ವಯವಾಗುವಂತೆ ಹೊರಡಿಸಿರುವ ಈ ಮದ್ಯ ನಿಷೇಧದ ಆದೇಶ ಅವೈಜ್ಞಾನಿಕವಾಗಿದೆ ಎಂದು ಹೋಟೆಲ್ ಮಾಲೀಕರು ಮನವಿಯಲ್ಲಿ ತಿಳಿಸಿದ್ದರು. ಈ ನಿಷೇಧಾಜ್ಞೆಯಿಂದ 300 ಕೋಟಿಗೂ ಅಧಿಕ ನಷ್ಟ ಉಂಟಾಗಲಿದೆ ಎಂದು ಸಂಘವೂ ಕಳವಳ ವ್ಯಕ್ತಪಡಿಸಿತ್ತು.

ಹೋಟೆಲ್ ಸಂಘದ ಅರ್ಜಿ ಆಲಿಸಿದ ಬಳಿಕ ಹೈಕೋರ್ಟ್ ನಿಷೇಧವನ್ನು ಉಪಚುನಾವಣೆ ಮತದಾನ ದಿನ (ಫೆಬ್ರವರಿ 16) ಮತ್ತು ಎಣಿಕೆ ದಿನಕ್ಕೆ (ಫೆಬ್ರವರಿ 20) ಸಿಮೀತಗೊಳಿಸಿ ತೀರ್ಪು ನೀಡಿದೆ. ಫೆಬ್ರವರಿ 16 ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ ಹಾಗೂ ಫೆಬ್ರವರಿ 20 ರಂದು ಅದೇ ರೀತಿ ಮದ್ಯ ಮಾರಾಟ ನಿಷೇಧಿಸಲಾಗುವುದು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಕಾಂಗ್ರೆಸ್ ವಿರುದ್ಧ ಮೈತ್ರಿ ಅಭ್ಯರ್ಥಿ ಕಣಕ್ಕೆ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ಉಪಚುನಾವಣೆಗೆ ಮತದಾನ ಫೆಬ್ರವರಿ 16 ರಂದು ನಿಗದಿಯಾಗಿದೆ. ರಾಜಾಜಿನಗರದಿಂದ ಎಂಎಲ್‌ಸಿ ಪುಟ್ಟಣ್ಣ ರಾಜೀನಾಮೆ ನೀಡಿದ ಬಳಿಕ ಉಪಚುನಾವಣೆ ಅನಿವಾರ್ಯವಾಯಿತು.
ಸದ್ಯ JDS -BJP ಮೈತ್ರಿ ಅಭ್ಯರ್ಥಿಯಾಗಿ ಎಪಿ ರಂಗನಾಥ್ ವಿರುದ್ಧ ಕಾಂಗ್ರೆಸ್ ನಿಂದ ಪುಟ್ಟಣ್ಣ ಅವರು ಕಣಕ್ಕಿಳಿದಿದ್ದಾರೆ.
ಫೆಬ್ರವರಿ 20ರಂದು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಸರ್ಕಾರ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಅರ್ಹ ಶಿಕ್ಷಕರ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಿಸಿದೆ.












Click it and Unblock the Notifications