Bengaluru Weather: ನಗರದಲ್ಲಿ ಭಾನುವಾರ ತಂಪೆರೆದ ಮಳೆ, ಜೂನ್ 11ರವರೆಗೆ ಮಳೆ ಮುನ್ಸೂಚನೆ
ಬೆಂಗಳೂರು, ಜೂನ್ 08: ರಾಜಧಾನಿ ಬೆಂಗಳೂರಿನಲ್ಲಿ ಕೆಲವು ದಿನ ಮರೆಯಾಗಿದ್ದ ಮಳೆ ಮತ್ತೆ ಅಬ್ಬರಿಸಲು ಶುರು ಮಾಡಿದೆ. ಭಾನುವಾರ ಮಧ್ಯಾಹ್ನವೇ ಇಳಿ ಸಂಜೆಯ ವಾತಾವರಣ ನಿರ್ಮಾಣವಾಯಿತು. ನೋಡು ನೋಡುತ್ತಿದ್ದಂತೆ ಜೋರು ಮಳೆ ಸುರಿಯಿತು. ನಗರದ ವಿವಿಧ ಪ್ರದೇಶಗಳಲ್ಲಿ ಭಾನುವಾರದ ಮೋಜು ಮಸ್ತಿಗೆ, ಹೊರಾಂಗಣ ಚುವಟಿಕೆಗೆ ಮುಂಗಾರು ಮಳೆ ಬ್ರೇಕ್ ನೀಡಿತು. ಬೀದಿ ವ್ಯಾಪಾರಿಗಳಿಗೆ ಕಿರಿ ಕಿರಿ ಉಂಟು ಮಾಡಿತು.
ನಗರದ ಕೋರಮಂಗಲ, ಬಾಣಸವಾಡಿ, ಹೆಬ್ಬಾಳ, ಎಲೆಕ್ಟ್ರಾನಿಕ್ ಸಿಟಿ, ಲಾಲ್ ಬಾಗ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸುಮಾರು 20 ನಿಮಿಷಗಳ ಕಾಲ ಜೋರು ಮಳೆ ಬಂದಿದೆ. ಶಂಕರಮಠ, ಚಾಮರಾಜಪೇಟೆ, ಮಹಾದೇವಪುರ, ಬೆಳ್ಳಂದೂರು, ಹೊರಮಾವು ಸೇರಿದಂತೆ ಕೆಲವು ಕಡೆಗಳಲ್ಲಿ ಹಗುರ ಮಳೆ ಆಯಿತು. ನಗರವಾಸಿಗಳು ಮಧ್ಯಾಹ್ನ ಕೊಡೆ ಹಿಡಿದು ಓಡಾಡಬೇಕಾಯಿತು.

ಬೆಂಗಳೂರಿಗೆ ಭಾರೀ ಮಳೆ ಮುನ್ಸೂಚನೆ ಇದಿಯಾ?
ಇಂದಿನಿಂದ (ಜೂನ್ 08) ಜೂನ್ 11ರವರೆಗೆ ಲಘು ಮಳೆ ಇಲ್ಲವೇ ತುಂತುರುವಿನಿಂದ ಹಗುರ ಮಳೆ ಆಗುವ ನಿರೀಕ್ಷೆಗಳು ಇವೆ. ತಾಪಮಾನ ಕೊಂಚ ಹೆಚ್ಚಾಗಿ ಇರುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಕೇಂದ್ರವು ಮುನ್ಸೂಚನೆ ನೀಡಿದೆ. ಮುಂದಿನ ಮೂರು ದಿನ ನಗರದ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ಈ ವೇಳೆ ಆಗಾಗ ಮಬ್ಬು ವಾತಾವರಣ ಸೃಷ್ಟಿಯಾಗುವುದು, ಕೆಲವು ಬಡಾವಣೆಗಳ ಅಲ್ಲಲ್ಲಿ ಹಗುರ ಮಳೆ ಆಗುವ ಸಂಭವವಿದೆ. ಇದರ ಹೊರತು ಬೆಂಗಳೂರಿಗೆ ಭಾರೀ ಮಳೆ ಮುನ್ಸೂಚನೆ ಇಲ್ಲ ಎಂದು ಐಎಂಡಿ ಮುನ್ಸೂಚನೆ ಸ್ಪಷ್ಟಪಡಿಸಿದೆ.
ನಗರಾದ್ಯಂತ ತಂಪು ವಾತಾವರಣ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ ಒಂದೆರಡು ದಿನ ತುಂತುರು ಮಳೆ ಸಂಭವವಿದೆ. ಕಳೆದೊಂದು ವಾರದಿಂದ ಬೆಂಗಳೂರು ಸೇರಿದಂತೆ ನಾಡಿನಾದ್ಯಂತ ಮತ್ತೆ ಬೇಸಿಗೆ ಆರಂಭವಾಯಿತೇನೋ ಎಂಬಂತಹ ವಾತಾವರಣ ನಿರ್ಮಾಣವಾಗಿತ್ತು. ಭಾನುವಾರ ಬಂದ ಮಳೆಗೆ ಇಳೆ ತಂಪಾಗಿದೆ. ತಾಪಮಾನ ಕಡಿಮೆ ಆಗಿ, ತಂಪು ಗಾಳಿ ಬೀಸತೊಡಗಿದೆ. ಬೆಂಗಳೂರು ಹೊರತಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ವಾರ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆಯ ಭಾನುವಾರದ ಮುನ್ಸೂಚನೆ ಖಚಿತಪಡಿಸಿದೆ.
ಇಂದು ಅಧಿಕ ಮಳೆ ಆಗಿದ್ದೆಲ್ಲಿ?
ಬಿಬಿಎಂಪಿ ವ್ಯಾಪ್ತಿಯ ಪೂರ್ವ ವಲಯ ವ್ಯಾಪ್ತಿಯಗೆ ಬರುವ ಕೋರಮಂಗಳದಲ್ಲಿ ಭಾನುವಾರ ಜಿಟಿ ಜಿಟಿ ಮಳೆ ಮುಂದುವರಿದಿದೆ. ಸಂಜೆ 04 ಗಂಟೆ ಹೊತ್ತಿಗೆ 2.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಒಂದೆಡೆರು ಕಡೆ 1 ಮಿಲಿ ಮೀಟರ್ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.












Click it and Unblock the Notifications