CM Siddaramaiah: ಕಾಂಗ್ರೆಸ್ ಪಾಳಯದಲ್ಲಿ ಭಿನ್ನರಾಗ ಸ್ಫೋಟ: ಸಿದ್ದು ಹಾಸನ ಸಮಾವೇಶಕ್ಕೆ ಸ್ವಪಕ್ಷದಲ್ಲೇ ಅಪಸ್ವರ
ಬೆಂಗಳೂರು ನವೆಂಬರ್ 29: ಬೈ ಎಲೆಕ್ಷನ್ ಗೆಲುವಿನ ಬಳಿಕ ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಮೂರು ಕ್ಷೇತ್ರಗಳಲ್ಲಿನ (ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ) ಫಲಿತಾಂಶ ಕಾಂಗ್ರೆಸ್ ಒಳಮನೆಯಲ್ಲಿ ಹೊಸ ಲೆಕ್ಕಾಚಾರಕ್ಕೆ ಬುನಾದಿ ಹಾಕಿದೆ. ಮುಡಾ ನಿವೇಶನ, ವಾಲ್ಮೀಕಿ ಹಗರಣ, ವಕ್ಫ್ ವಿವಾದದಿಂದ ಕುಗ್ಗಿ ಮುಂದೇನು ಎಂಬತ್ತಿದ್ದ ಸಿದ್ದರಾಮಯ್ಯ ಅವರಿಗೆ ಈ ಚುನಾವಣೆ ಹೊಸ ಹುಮ್ಮಸ್ಸು ನೀಡಿದೆ. ಇದೇ ಸಂತಸದಲ್ಲಿ ಜೆಡಿಎಸ್ ಭದ್ರಕೋಟೆಯಾದ ಹಾಸನದಲ್ಲಿ ಕಾಂಗ್ರೆಸ್ ಗೆಲುವಿನ ಪತಾಕೆಯನ್ನು ಹಾರಿಸಿ ಸಂಭ್ರಮಿಸಲು ಸಿದ್ಧವಾಗಿದ್ದು ಇದಕ್ಕೆ ಸ್ವಪಕ್ಷದಿಂದಲೇ ಅಪಸ್ವರ ಕೇಳಿ ಬಂದಿದೆ.
ಹೌದು... ಕಾಂಗ್ರೆಸ್ ಮೂರಕ್ಕೆ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಕರ್ನಾಟಕದಲ್ಲಿ ಕೈ ಬೇರು ಗಟ್ಟಿಗೊಳಿಸಿದೆ. ಇದರಿಂದಾಗಿ ಕೈ ಕಾರ್ಯಕರ್ತರಲ್ಲಿ, ಪಕ್ಷದ ಸಚಿವ ಶಾಸಕರಲ್ಲಿ ಹೊಸ ಉತ್ಸಾಹ ಹೆಚ್ಚಾಗಿದೆ. ಈ ಸಮಾವೇಶದ ಮೂಲಕ ಸಿದ್ದರಾಮಯ್ಯ ತಮ್ಮ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿರುವ ಅಹಿಂದ ಅಂದರೆ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸಮೀಕರಣವನ್ನು ಇನ್ನಷ್ಟು ಗಟ್ಟಿಗೊಳಿಸಿ ಆ ಮೂಲಕ ಸಕ್ರಿಯ ರಾಜಕಾರಣದಲ್ಲಿ ಇರುವಷ್ಟು ಕಾಲ ಅದರ ಪ್ರಭಾವ ಕಾದಿಷ್ಟುಕೊಳ್ಳಲು ಬಯಸಿದಂತೆ ಕಾಣಿಸುತ್ತಿದೆ.

ಈ ಉದ್ದೇಶದ ಭಾಗವಾಗಿ ಅವರ ಆಪ್ತ ಬಣ ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಭೂಮಿಕೆ ಸಜ್ಜು ಮಾಡಿದೆ. ಈ ಸಮಾವೇಶದ ಮೂಲಕ ಸಿದ್ದರಾಮಯ್ಯ ಯಾವುದೇ ಕುತಂತ್ರಗಳಿಗೆ ಹಿಗ್ಗಿಲ್ಲ, ಕುಗ್ಗಿಲ್ಲ, ಆಂತರಿಕವಾಗಿ ಅವರೆಷ್ಟು ಶಕ್ತಿಯುತ ಅನ್ನೋದನ್ನು ವಿಪಕ್ಷಗಳಿಗೆ ಸಂದೇಶ ಕಳುಹಿಸುವ ಲೆಕ್ಕಾಚಾರ ಇದ್ದಂತಿದೆ. ಆದರೆ ಇದಕ್ಕೀಗ ಕಾಂಗ್ರೆಸ್ ನಿಂದಲೇ ಅಪಸ್ವರ ಕೇಳಿ ಬಂದಿದೆ. ಇದರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರವೊಂದನ್ನು ಬರೆಯಲಾಗಿದ್ದು ಹೆಸರನ್ನು ಉಲ್ಲೇಖಿಸದೆ ಪತ್ರವನ್ನು ಬರೆಯಲಾಗಿದೆ.
ಡಿಸೆಂಬರ್ 5ರಂದು ಸಿಎಂ ಸಿದ್ದರಾಮಯ್ಯ ಹಾಸನದಲ್ಲಿ ಶಕ್ತಿ ಪ್ರದರ್ಶನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಸುತ್ತಲು ರಾಜ್ಯಗಳಿಂದ ಲಕ್ಷ ಲಕ್ಷ ಕಾರ್ಯಕರ್ತರು ಆಗಮಿಸಲಿದ್ದಾರೆ. ಸಚಿವರು, ಶಾಸಕರು ಅಭಿಮಾನಿಗಳು ಸೇರಿ ಸ್ವಾಭಿಮಾನಿ ಸಮಾವೇಶ ಆಯೊಜಿಸುತ್ತಿದ್ದಾರೆ. ಇದಕ್ಕಾಗಿ ಹಾಸನದ ಅರಸೀಕೆರೆ ರಸ್ತೆಯ ಕೆಎಸ್‌ಸಿಎಗೆ ಮೀಸಲಾದ ವಿಶಾಲ ಮೈದಾನದಲ್ಲಿ ಬೃಹತ್ ವೇದಿಕೆ ಕೂಡ ಸಜ್ಜಾಗುತ್ತಿದೆ.
ಆದರೆ ಈ ನಡುವೆ ಕಾಂಗ್ರೆಸ್ ವರಿಷ್ಠರಿಗೆ ಪತ್ರವೊಂದನ್ನು ಬರೆಯಲಾಗಿದ್ದು, ಈ ಪತ್ರದಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಬಿಟ್ಟು ಸಿದ್ದರಾಮಯ್ಯ ಹೆಸರಿನಲ್ಲಿ ಸ್ವಾಭಿಮಾನಿ ಸಮಾವೇಶ ಮಾಡಲಾಗುತ್ತಿದೆ. ಪಕ್ಷವನ್ನೂ ದೂರವಿಟ್ಟು ಸಮಾವೇಶ ಮಾಡುವ ಉದ್ದೇಶ ಏನು? ಸ್ವಾಭಿಮಾನ ಸಮಾವೇಶವನ್ನು ಪಕ್ಷದ ವೇದಿಕೆಯಲ್ಲಿಯೇ ಮಾಡಬೇಕು. ಪಕ್ಷದ ವೇದಿಕೆ ಬಿಟ್ಟು ಸಮಾವೇಶ ಮಾಡುವ ಉದ್ದೇಶ ಒಳ್ಳೆಯದಲ್ಲ. ಪಕ್ಷದ ಚಿಹ್ನೆ ಬಳಸಿಕೊಂಡೇ ಸಮಾವೇಶ ಆಯೋಜನೆ ಮಾಡಿ. ಸಿಎಂ ಹಾಗೂ ಸಚಿವರಿಗೆ ತಿಳಿ ಹೇಳಿ ಎಂದು ಪತ್ರದಲ್ಲಿ ಬರೆಯಲಾಗಿದೆ.
ತಮಗೆ ಅಧಿಕಾರ ಹಾಗೂ ಬಲವನ್ನು ಕೊಟ್ಟ ಪಕ್ಷವನ್ನು ದೂರವಿಟ್ಟು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಕಾಂಗ್ರೆಸ್ ಚಿಹ್ನೆಯಲ್ಲಿ ಆಯ್ಕೆಯಾಗಿರುವ ರಾಜ್ಯ ಸರ್ಕಾರದ ಕೆಲ ಮಂತ್ರಿಗಳು, ಶಾಸಕರುಗಳು ಸ್ವಾಭಿಮಾನಿ ಸಮಾವೇಶದ ಉಸ್ತುವಾರಿ ತೆಗೆದುಕೊಂಡಿದ್ದಾರೆ. ನಾಯಕರು ವೈಯಕ್ತಿಕ ಲಾಭಕ್ಕಾಗಿ ಪಕ್ಷವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹೀಗಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯ ಏನಾಗಬಹುದು?ಈ ಬಗ್ಗೆ ಸೂಕ್ಷ್ಮವಾಗಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.












Click it and Unblock the Notifications