ಬಿಜೆಪಿ ಕರೆಯಬೇಕು, ಕೆಜೆಪಿ ಹೋಗಬೇಕು!
ಬೆಂಗಳೂರು, ಸೆ.19 : ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಬರಲಿ ಎಂದು ಪಕ್ಷದ ನಾಯಕರು ನಿರೀಕ್ಷಿಸುತ್ತಿದ್ದಾರೆ. ಮೋದಿಗೆ ಬೆಂಬಲ ಸೂಚಿಸಿರುವ ಯಡಿಯೂರಪ್ಪ ಬಿಜೆಪಿಗೆ ಹೋಗಲು ಸಿದ್ದರಿದ್ದಾರೆ. ಆದರೆ, ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಆಹ್ವಾನಿಸುವವರು ಯಾರು? ಎಂಬ ಪ್ರಶ್ನೆ ಕಗ್ಗಂಟಾಗಿದೆ.
ಬಿಜೆಪಿ ಮತ್ತು ಕೆಜೆಪಿ ಪಕ್ಷಗಳ ವಿಲೀನ ಕುರಿತು ನಡೆಯುತ್ತಿರುವ ಬೆಳವಣಿಗೆ ವಿಳಂಬವಾಗಲು ಪ್ರತಿಷ್ಠೆಯ ಪ್ರಶ್ನೆ ಅಡ್ಡಿಯಾಗುತ್ತಿದೆ. ಯಡಿಯೂರಪ್ಪ ಬಿಜೆಪಿಗೆ ಹೋಗಲು ತಯಾರಿದ್ದಾರೆ. ಆದರೆ, ಅದಕ್ಕೆ ಬಿಜೆಪಿಯ ನಾಯಕರು ಅಧಿಕೃತ ಆಹ್ವಾನ ನೀಡಬೇಕು.
ಯಡಿಯೂರಪ್ಪ ಪರಮಾಪ್ತ ಲೆಹರ್ ಸಿಂಗ್ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ, ಪಕ್ಷದ ನಾಯಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಬಿಜೆಪಿಗೆ ಮರಳುವಂತೆ ಆಹ್ವಾನ ನೀಡಿ ಎಂದು ಮನವಿ ಮಾಡಿದ್ದಾರೆ.
ಇತ್ತ ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್, ಕೆಜೆಪಿ ತನ್ನ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಲಿದೆ ಎಂಬ ಹೇಳಿಕೆಯನ್ನು ನೀಡುವ ಮೂಲಕ ಕೆಜೆಪಿ, ಬಿಜೆಪಿ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟು ಮಾಡಿದ್ದಾರೆ. ಒಟ್ಟಾರೆ ಎಲ್ಲವೂ ಗೊಂದಲಮಯವಾಗಿದ್ದು, ಸ್ಪಷ್ಟವಾದ ಚಿತ್ರಣ ದೊರಕುತ್ತಿಲ್ಲ.

ಜೇಟ್ಲಿ ಸಕಾರಾತ್ಮಕ ಸ್ಪಂದನೆ
ಯಡಿಯೂರಪ್ಪ ಆಪ್ತ ಲೆಹರ್ ಸಿಂಗ್ ಬಿಜೆಪಿ ರಾಷ್ಟ್ರೀಯ ನಾಯಕ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ, ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಆಹ್ವಾನಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಅವರು ಈ ಬಗ್ಗೆ ರಾಷ್ಟ್ರೀಯ ನಾಯಕರೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಅವರು ಆಹ್ವಾನಿಸಬೇಕು
ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳಲು ಸಿದ್ದರಾಗಿದ್ದಾರೆ. ಅದರೆ, ಅದಕ್ಕಾಗಿ ಬಿಜೆಪಿಯವರು ಯಡಿಯೂರಪ್ಪ ಅವರಿಗೆ ಅಧಿಕೃತ ಆಹ್ವಾನ ನೀಡಬೇಕು. ಅದರೆ, ಅದನ್ನು ಯಾರು ಮಾಡುತ್ತಾರೆ? ಎಂಬುದು ಬಗೆಹರಿಯದ ಪ್ರಶ್ನೆಯಾಗಿದೆ.

ಮೂರು ಷರತ್ತು
ಯಡಿಯೂರಪ್ಪ ಬಿಜೆಪಿಗೆ ಬಂದರೆ, ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಬೇಕು, ಅನಂತ್ ಕುಮಾರ್ ಅವರು ದೆಹಲಿ ರಾಜಕಾರಣಕ್ಕೆ ಸೀಮಿತವಾಗಬೇಕು ಮತ್ತು ಬಿಜೆಪಿಯವರು ಅಧಿಕೃತವಾಗಿ ಆಹ್ವಾನ ನೀಡಿ ಪಕ್ಷಕ್ಕೆ ಬರಮಾಡಿಕೊಳ್ಳಬೇಕು ಎಂದು ಯಡಿಯೂರಪ್ಪ ಷರತ್ತು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಅಡ್ವಾಣಿ ಒಪ್ಪಿಗೆ ಮುಖ್ಯ
ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಗೆ ಆಹ್ವಾನಿಸಲು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಒಪ್ಪಿಗೆ ನೀಡುತ್ತಾರೆಯೇ? ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಲೆಹರ್ ಸಿಂಗ್ ಅಡ್ವಾಣಿ ಅವರನ್ನು ಬುಧವಾರ ಭೇಟಿ ಮಾಡಲು ಇಚ್ಛಿಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಆದ್ದರಿಂದ ಅರುಣ್ ಜೇಟ್ಲಿ ಬಳಿ ಮಾತುಕತೆ ನಡೆಸಿದ್ದಾರೆ.

ಕೋರ್ ಕಮಿಟಿ ಸಭೆಯಲ್ಲಿ ಏನಾಯ್ತ?
ಬುಧವಾ ಯಡಿಯೂರಪ್ಪ ನಿವಾಸದಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಿತು. ಪಕ್ಷದ ಎಲ್ಲಾ ನಾಯಕರು ಯಡಿಯೂರಪ್ಪ ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಷರತ್ತುಗಳೊಡನೆ ವಿಲೀನ ಪ್ರಕ್ರಿಯೆಮಾಡಲು ನಾಯಕರು ಸೂಚಿಸಿದ್ದಾರೆ. ಇಂದು ಪದಾಧಿಕಾರಿಗಳ ಸಭೆ ನಡೆಯಲಿದ್ದು, ನಂತರ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಗುರುವಾರ ಬಿಜೆಪಿ ಸಭೆ
ಲೋಕಸಭೆ ಚುನಾವಣೆ ಕುರಿತು ಚರ್ಚಿಸಲು ಗುರುವಾರ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಯಡಿಯೂರಪ್ಪ ವಾಪಸ್ ಆಗುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ರಾಷ್ಟ್ರೀಯ ನಾಯಕರು ಸೂಚಿಸಿದರೆ, ಸಭೆಯಲ್ಲಿ ಯಡಿಯೂರಪ್ಪ ಅವರಿಗೆ ಅಧಿಕೃತ ಆಹ್ವಾನ ನೀಡುವ ಕುರಿತು ಚರ್ಚೆ ನಡೆಯಬಹುದು ಎಂದು ತಿಳಿದು ಬಂದಿದೆ.











Click it and Unblock the Notifications