ಬೆಂಗಳೂರು ಬಿಟ್ಟು ಹೋಗುವವರು ಹೋಗಲಿ ಎಂದ ಕನ್ನಡಿಗ: ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ!
ಬೆಂಗಳೂರಿನ ರಸ್ತೆಗುಂಡಿ ಹಾಗೂ ಮೂಲಸೌಕರ್ಯ ಸಮಸ್ಯೆಯಿಂದ ಹಲವು ಪ್ರತಿಷ್ಠಿತ ಐಟಿ - ಬಿಟಿ ಕಂಪನಿಗಳು ಬೆಂಗಳೂರು ಬಿಡುವುದಾಗಿ ಹೇಳುತ್ತಿವೆ. ಈ ಚರ್ಚೆ ಜೋರಾಗುತ್ತಿರುವಾಗಲೇ ಕೆಲವು ಕನ್ನಡಿಗರು ಬೆಂಗಳೂರು ಬಿಡುವವರು ಬಿಡಲಿ ಬಿಡಿ. ಬೆಂಗಳೂರಿನ ಮೇಲೆ ಭಾರ ಕಡಿಮೆ ಆಗಲಿದೆ. ಅಲ್ಲದೇ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆ ಆಗಲಿದೆ. ಅಲ್ಲದೇ ವಲಸಿಗರ ಹಾವಳಿಯೂ ಕಡಿಮೆ ಆಗಲಿದೆ ಎನ್ನುತ್ತಿದ್ದಾರೆ. ಈ ವಿಷಯವಾಗಿ ಕನ್ನಡಿಗರೊಬ್ಬರು ಮಾಡಿರುವ ಪೋಸ್ಟ್ ಇದೀಗ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಇಷ್ಟಕ್ಕೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಏನು ಎನ್ನುವ ವಿವರ ಇಲ್ಲಿದೆ.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಕನ್ನಡಿಗ ಜನಾರ್ಧನ್ ಎನ್ನುವವರು ಪೋಸ್ಟ್‌ವೊಂದನ್ನು ಮಾಡಿದ್ದು, ಇದು ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಮೂಲಸೌಕರ್ಯ ಸಮಸ್ಯೆ ಹಾಗೂ ರಸ್ತೆಗುಂಡಿಗಳ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಬೆಂಗಳೂರು ಬಿಡಲು ನಿರ್ಧರಿಸಿದ್ದೇವೆ ಎಂದು ಬ್ಲ್ಯಾಕ್‌ಬಕ್ ಸಿಇಒ ಅವರು ಮಾಡಿರುವ ಪೋಸ್ಟ್ ಇದೀಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ವಿಚಾರವನ್ನು ಜನಾರ್ಧನ್ ಸೋಷಿಯಲ್ ಮೀಡಿಯಾದಲ್ಲಿ ವಿವರಿಸಿದ್ದಾರೆ.

ಬ್ಲ್ಯಾಕ್‌ಬಕ್ ಸಿಇಒ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಹಂಚಿಕೊಂಡಿರುವ ಅವರು, ತೆಲುಗು ವ್ಯಕ್ತಿಯೊಬ್ಬರು ತಮ್ಮ ಸ್ವಂತ ರಾಜ್ಯದಲ್ಲಿ ಕೆಲಸವಿಲ್ಲದೆ, ಭಾರತದಾದ್ಯಂತ ಪ್ರಯಾಣಿಸಿ ಕೆಲಸ ಮಾಡುತ್ತಾರೆ. ಬೆಂಗಳೂರಿನಲ್ಲಿ ತಮ್ಮ ಕಂಪನಿಯನ್ನು ಸ್ಥಾಪಿಸುತ್ತಾರೆ. 10 ವರ್ಷಗಳ ಕಾಲ ಸಂಪಾದಿಸುತ್ತಾರೆ, ಈಗ ರಸ್ತೆಗಳು / ಅಭಿವೃದ್ಧಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಮತ್ತು ORR ನಿಂದ ಹೊರಹೋಗುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಗೊಂದಲವನ್ನುಂಟು ಮಾಡುತ್ತಾರೆ.
ನೋಯ್ಡಾದ ಚಾನೆಲ್‌ಗಳು ಇದನ್ನು ದೊಡ್ಡ ಸಮಸ್ಯೆಯನ್ನಾಗಿ ಮಾಡುವಲ್ಲಿ ನಿರತವಾಗಿವೆ. ತೆಲುಗು ಸಚಿವರೊಬ್ಬರು ಈ ತೆಲುಗು ಸಿಇಒ ವ್ಯಕ್ತಿಯನ್ನು ತಮ್ಮ ಸ್ಥಳೀಯ ರಾಜ್ಯಕ್ಕೆ ಸ್ಥಳಾಂತರಿಸಲು ಕೇಳುತ್ತಾರೆ. ಇತರ ರಾಜ್ಯ ವ್ಯವಹಾರಗಳನ್ನು ಕೆಣಕಲು ಉದ್ದೇಶಪೂರ್ವಕವಾಗಿ ಮಾಡಿದ ಶುದ್ಧ ನಾಟಕ ಮತ್ತು ಹಂಗಾಮ ಇದು ಎಂದು ಅವರು ದೂರಿದ್ದಾರೆ.
ಮುಂದುವರಿದು ಕನ್ನಡಿಗರು ಮತ್ತು ಕನ್ನಡ ಸಾಮಾಜಿಕ ಮಾಧ್ಯಮ ನಿರ್ವಹಿಸುವವರು ಭಯಭೀತರಾಗಬೇಕಿಲ್ಲ. ಅವರನ್ನು ಬಿಟ್ಟುಬಿಡಿ.. ಯಾರು ಉಳಿಯಲು ಬಯಸುತ್ತಾರೆ, ಉಳಿಯುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸುದರ್ಶನ್ ಎನ್ನುವವರು ಬೆಂಗಳೂರಿನಲ್ಲಿ ರಸ್ತೆ ಮೂಲಸೌಕರ್ಯದ ಸ್ಥಿತಿ ಶೋಚನೀಯವಾಗಿದೆ ಎಂಬುದು ನಿಜ. ಪ್ರತಿಯೊಂದು ಟೀಕೆಯನ್ನು ಅವಮಾನವೆಂದು ಪರಿಗಣಿಸಿದರೆ, ಸುಧಾರಣೆಗೆ ಅವಕಾಶವಿರುವುದಿಲ್ಲ. ಸರ್ಕಾರವು ಎಚ್ಚೆತ್ತುಕೊಂಡು ಗುಂಡಿಗಳಿಂದ ತುಂಬಿರುವ ಬೆಂಗಳೂರು/ಕರ್ನಾಟಕ ರಸ್ತೆಗಳನ್ನು ಸುಧಾರಿಸುವ ಕೆಲಸ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗುರುಪ್ರಸಾದ್ ಎನ್ನುವ ವ್ಯಕ್ತಿ, ಗೆಳೆಯಾ.. ನಾನು ಕೂಡ ಕನ್ನಡಿಗ, ಬ್ಲ್ಯಾಕ್‌ಬಕ್ ಕಂಪನಿ ಇರುವ ಪಾಣತ್ತೂರು ಮುಖ್ಯ ರಸ್ತೆಯಲ್ಲೇ ಇದ್ದೇನೆ. ಇಲ್ಲಿ 1 ಕಿಮೀ ಸಂಚರಿಸುವುದಕ್ಕೆ 1 ಗಂಟೆ ಬೇಕಾಗುತ್ತದೆ. ಮೊದಲು ಸರ್ಕಾರಕ್ಕೆ ರಸ್ತೆಗಳನ್ನು ಸರಿಪಡಿಸಲು ಹೇಳಿ ನಂತರ ನಿಮ್ಮ ಭಾಷಾ/ರಾಜ್ಯ ಪ್ರೀತಿಯನ್ನು ತೋರಿಸಿ ಎಂದಿದ್ದಾರೆ.
ಅಮರನಾಥ್ ಶಿವಶಂಕರ್ ಅವರು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತು ಕೆಟ್ಟ ರಸ್ತೆಗಳು, ಧೂಳು ಇದರಲ್ಲೆಲ್ಲಾ ಒದ್ದಾಡುವವರಲ್ಲಿ ಕನ್ನಡಿಗರೂ ಇದ್ದೇವೆ. ಪರಭಾಷಿಕರು ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಅವರೆಲ್ಲರನ್ನೂ ದೂಷಿಸುವುದು ಸರಿಯಲ್ಲ. ನಮ್ಮೂರು ಸರಿ ಹೋದರೆ ನಮಗೆಲ್ಲರಿಗೂ ಒಳ್ಳೆಯದೇ ಅಲ್ಲವೇ. ಎಲ್ಲವನ್ನೂ We vs Them ಅಂತ ಮಾಡುವುದು ಸಮಸ್ಯೆಗೆ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ.












Click it and Unblock the Notifications