ಶಾಸಕ ಮುನಿರತ್ನ ಮತ್ತು ಕುಸುಮಾ ಹನುಮಂತರಾಯಪ್ಪ ನಡುವೆ ಫೈಟ್
ಬೆಂಗಳೂರು, ಏ.08: ಸಚಿವ ಮುನಿರತ್ನ ಅವರ ಕೈಯಾಳುಗಂತೆ ಕಾರ್ಯನಿರ್ವಹಿಸಿ ಸುಳ್ಳು ಕೇಸುಗಳನ್ನು ದಾಖಲಿಸುತ್ತಿರುವ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೋರಿ ಕಾಂಗ್ರೆಸ್ ಮುಖಂಡರಾದ ಕುಸುಮಾ ಹನುಮಂತರಾಯಪ್ಪ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಮುನಿರತ್ನ ಅವರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿರುವ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ಪೊಲೀಸ್ ಅಧಿಕಾರಿಗಳು ದಾಖಲಿಸಿರುವ ಸುಳ್ಳು ಕೇಸುಗಳ ವಿವರಗಳನ್ನು ಉಲ್ಲೇಖಿಸಿದ್ದು, ಕೂಡಲೇ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ನಡೆದಿರುವ ಪೊಲೀಸ್ ದೌರ್ಜನ್ಯ ಕುರಿತು ಸಾರ್ವಜನಿಕರ ಅಹವಾಲು ಸಭೆ ಕರೆಯಲು ಕುಸುಮಾ ಮನವಿ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಾಖಲಿಸಿರುವ ಸುಳ್ಳು ಕೇಸುಗಳನ್ನು ವಜಾ ಮಾಡುವಂತೆ ಕುಸುಮಾ ಒತ್ತಾಯಿಸಿದ್ದಾರೆ.

ಕುಸುಮಾ ದೂರಿನ ಸಾರಾಂಶ:
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕರ ಹಣತಿ ಮೇರೆಗೆ ಸ್ಥಳೀಯ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮಾತು ಕೇಳಿಕೊಂಡು ಪೊಲೀಸರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ. ಕೆಲವು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕರ್ತವ್ಯಲೋಪ ಎಸಗುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳಲು ಮತ್ತು ಸಂಘಟನೆ ಮಾಡಲು ಅವಕಾಶವಿದೆ. ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಹಾಲಿ ಶಾಸಕರ ವಿರುದ್ಧವಾಗಿ ಯಾವುದೇ ಸಾರ್ವಜನಿಕ ಸಭೆ, ಸಮಾರಂಭ ಮಾಡಲು ಅವಕಾಶ ಕೊಡುತ್ತಿಲ್ಲ.

ಪೊಲೀಸ್ ಅಧಿಕಾರಿಗಳನ್ನು ತಮ್ಮ ಒತ್ತೆಯಾಳುಗಳಂತೆ ಇಟ್ಟುಕೊಂಡು, ರಾಜರಾಜೇಶ್ವರಿನಗರ , ನಂದಿನಿ ಬಡಾವಣೆ, ರಾಜಗೋಪಾಲನಗರ, ಅನ್ನಪೂರ್ಣೇಶ್ವರಿನಗರ, ಯಶವಂತಪುರ, ಆರ್ಎಂಸಿ ಯಾರ್ಡ್, ಜಾಲಹಳ್ಳಿ, ಪೀಣ್ಯಾ, ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಚಿವ ಮುನಿರತ್ನ ಅವರ ಮಾತು ಕೇಳಿಕೊಂಡು ಸುಳ್ಳು ಕೇಸು ದಾಖಲಿಸುತ್ತಿದ್ದಾರೆ. ಮುನಿರತ್ನ ಅನುಯಾಯಿ ಅಧಿಕಾರಿಗಳು ಅವರ ವಲಯ ಮೀರಿ ವರ್ಗಾವಣೆ ಆಗಿರುವುದಿಲ್ಲ.

ಕ್ಷುಲ್ಲಕ ಕಾರಣಗಳಿಗೆ ಕಾಂಗ್ರೆಸ್ ಸದಸ್ಯರ ಮತ್ತು ಕಾರ್ಯಕರ್ತರ ಮೇಲೆ ಕ್ರಿಮಿನಲ್ ದಾವೆ ಹೂಡಿ ದೋಷಾರೋಪ ಪಟ್ಟಿ ಸಲ್ಲಿಸುತ್ತಾರೆ. ಆದರೆ ನಾವು ಸಲ್ಲಿಸುವ ದೂರುಗಳನ್ನು ಎನ್‌ಸಿಅರ್ ಮಾಡಿಕೊಂಡು ಬಿ ವರದಿ ಸಲ್ಲಿಸುತ್ತಾರೆ. ಮುನಿರತ್ನ ಗೂಂಡಾಗಿರಿಯಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತಿದೆ. ಉಪ ಚುನಾವಣೆ ವೇಳೆ ಪಂಡರಿ ಬಾಯಿ ಎಂಬ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ ಬಿಬಿಎಂಪಿ ಮಾಜಿ ಸದಸ್ಯ ವೇಲೂ ನಾಯ್ಕರ್ ಮೇಲೆ ಕೇಸು ನೀಡಿದರೂ ದಾಖಲಿಸಿಕೊಂಡಿಲ್ಲ. ಬದಲಿಗೆ ವೇಲೂ ನಾಯ್ಕರ್ ಕೊಟ್ಟ ದೂರು ಆಧರಿಸಿ ಹದಿಮೂರು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಯಶವಂತಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ.

Recommended Video
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುನಿರತ್ನ ಅಣತಿ ಮೇರೆಗೆ ದಾಖಲಿಸಿರುವ ಸುಳ್ಳು ಪ್ರಕರಣಗಳ ಬಗ್ಗೆ ಡಿಸಿಪಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿಲ್ಲ. ಪ್ರತಿ ನಿತ್ಯ ಸುಳ್ಳು ಕೇಸುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಗಮನ ಹರಿಸಿ ಕೂಡಲೇ ಕ್ರಮ ಜರುಗಿಸುವಂತೆ ಕುಸುಮಾ ಹನುಮಂತರಾಯಪ್ಪ ದೂರಿನಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications