HDK & ಮತ್ತಿತರಿಂದ ಭೂ ಕಬಳಿಕೆ: ಜುಲೈ 7ರೊಳಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜೂನ್, 17: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮದ್ಧೂರಿನ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಸೇರಿಂದಂತೆ ಮತ್ತಿತರ ವಿರುದ್ಧ ಭೂಕಬಳಿಕೆ ಆರೋಪವೊಂದು ಎದುರಾಗಿದ್ದು, ಹಾಗೆಯೇ ಕಬಳಿಕೆಯಾದ ಭೂಮಿಯನ್ನು ವಶಕ್ಕೆ ಪಡೆಯಲು ಕೋರ್ಟ್ ಆದೇಶ ನೀಡಿದೆ. ಹಾಗಾದರೆ ಯಾವ ಜಿಲ್ಲೆಯಲ್ಲಿ ಭೂಕಬಳಿಕೆ ಆಗಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಕಬಳಿಕೆಯಾದ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯಲು ನ್ಯಾಯಾಲಯ ಸೂಚಿಸಿದ್ದು, ಅನುಪಾಲನಾ ವರದಿಯನ್ನು ಸಲ್ಲಿಸಲು ಸರ್ಕಾರಕ್ಕೆ ಜುಲೈ 7ರ ವರೆಗೆ ಹೈಕೋರ್ಟ್ ಕಾಲಾವಕಾಶ ನೀಡಿದೆ.

ಪ್ರಕರಣದಲ್ಲಿ ಒತ್ತುವರಿ ಜಮೀನು ವಶಕ್ಕೆ ಪಡೆಯಲು ಸೂಚಿಸಿದ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಲು ಸರ್ಕಾರ ವಿಫಲವಾಗಿದೆ ಎಂದು ಪರಿವರ್ತನಾ ಸಮುದಾಯ ಆರೋಪಿಸಿತ್ತು. ಇನ್ನು ನ್ಯಾಯಾಂಗ ನಿಂದನೆಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ಸರ್ಕಾರಕ್ಕೆ ಕಾಲಾವಕಾಶ ನೀಡಿದೆ.
ಸರ್ಕಾರಿ ವಕೀಲರು ಹಾಜರಾಗಿ, ಒತ್ತುವರಿ ತೆರವು ಮಾಡುವಂತೆ ಸೂಚಿಸಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಆರೋಪಿಸ್ಥರು, ತಾವು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಲ್ಲ. ಭೂಮಿಯನ್ನು ಕೆಲವರಿಗೆ ಸರ್ಕಾರ ಮಂಜೂರು ಮಾಡಿದೆ. ಅವರಿಂದ ತಾವು ಖರೀದಿ ಮಾಡಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ.

ಅಲ್ಲದೆ ಆ ಕುರಿತು ದಾಖಲೆಗಳನ್ನು ಪರಿಶೀಲನೆ ನಡೆಸಲು ಸರ್ಕಾರ ಮುಂದಾಯಿತು. ಆದರೆ, ದಾಖಲೆಗಳು ಸದ್ಯ ನಾಶವಾಗಿವೆ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ಮತ್ತು ಹೈಕೋರ್ಟ್‌ನ ಹಿಂದಿನ ಆದೇಶಗಳ ಅನುಪಾಲನಾ ವರದಿ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಈ ಹೇಳಿಕೆಯನ್ನು ಒಪ್ಪದ ನ್ಯಾಯಪೀಠ, ದಾಖಲೆಗಳು ನಾಶವಾಗಿವೆ ಎಂದರೆ ಏನರ್ಥ? ಸರ್ಕಾರಿ ಭೂಮಿ ಮತ್ತು ದಾಖಲೆಗಳಿಗೆ ಸರ್ಕಾರವೇ ಜವಾಬ್ದಾರಿ ಆಗಿರುತ್ತದೆ. ದಾಖಲೆಗಳು ನಾಶವಾಗಿವೆ ಎಂಬುದನ್ನು ಒಪ್ಪಲಾಗದು ಎಂದು ಖಾರವಾಗಿಯೇ ತರಾಟೆ ತೆಗೆದುಕೊಂಡಿತು.
ಅಲ್ಲದೆ, ಸರ್ಕಾರದ ಎಷ್ಟು ಜಮೀನು ಒತ್ತುವರಿಯಾಗಿದೆ. ಅದರಲ್ಲಿ ಎಷ್ಟು ಜಮೀನನ್ನು ಸರ್ಕಾರ ಮತ್ತೆ ವಶಕ್ಕೆ ಪಡೆದಿದೆ ಎಂಬುದರ ಕುರಿತು ವರದಿ ಸಲ್ಲಿಸುವಂತೆ ಹೈಕೋರ್ಟ್ ಈ ಹಿಂದೆಯೇ ನಿರ್ದೇಶಿಸಿದೆ. ಅದರಂತೆಯೇ ಹೈಕೋರ್ಟ್ ಆದೇಶದ ಅನುಪಾಲನಾ ವರದಿ ಸಲ್ಲಿಸಬೇಕು. ಪ್ರಕರಣದಲ್ಲಿ ಏನೆಲ್ಲಾ ಕ್ರಮ ಜರುಗಿಸಬೇಕು ಎಂಬ ಬಗ್ಗೆ ಸರ್ಕಾರ ಪರಿಶೀಲಿಸಬೇಕು. ಇಲ್ಲವಾದರೆ ನ್ಯಾಯಾಲಯವೇ ಅಗತ್ಯ ಕ್ರಮ ಜರುಗಿಸಲಿದೆ ಎಂದು ಮೌಖಿಕವಾಗಿ ತಿಳಿಸಿ ಅನುಪಾಲನಾ ವರದಿ ಸಲ್ಲಿಸಲು ಜುಲೈ 7ರವರೆಗೆ ಕಾಲಾವಕಾಶ ನೀಡಿದೆ.
ಅರ್ಜಿಯು 2023ರ ಏಪ್ರಿಲ್ 11ರಂದು ವಿಚಾರಣೆಗೆ ಬಂದಾಗ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿ, ಕೇತಗಾನಹಳ್ಳಿಯ ಸರ್ವೇ ನಂ 8, 9, 10, 16/1, 16/8, 16/24 ಮತ್ತು 79ರಲ್ಲಿನ ಒಟ್ಟು 14 ಹೆಕ್ಟೇರ್ 4 ಗುಂಟೆ ಜಾಗವನ್ನು ಸರ್ಕಾರ ವಶಕ್ಕೆ ಪಡೆದಿದೆ. ಇಡೀ ಜಾಗಕ್ಕೆ ತಂತಿಬೇಲಿಯನ್ನು ಅಳವಡಿಸಲಾಗಿದೆ. ಉಳಿದಂತೆ ಸಂಬಂಧಪಟ್ಟವರಿಗೆ ಒತ್ತುವರಿ ತೆರವು ನೋಟಿಸ್ ನೀಡಲಾಗಿತ್ತು. ತಾವು ಯಾವುದೇ ಸರ್ಕಾರಿ ಜಮೀನಿನ ಭಾಗ ಒತ್ತುವರಿ ಮಾಡಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ ಎಂದರು.
ಇನ್ನು ಇದಕ್ಕೆ ಆಕ್ಷೇಪ ಮಾಡಿದ್ದ ಅರ್ಜಿದಾರರ ವಕೀಲರು, ಪ್ರಕರಣದಲ್ಲಿ ಒಟ್ಟು 71 ಹೆಕ್ಟೇರ್ ಸರ್ಕಾರಿ ಜಮೀನು ಒತ್ತುವರಿ ಆಗಿದೆಯೇ ಹೊರತು 14 ಹೆಕ್ಟೇರ್ 14 ಗುಂಟೆಯಲ್ಲ. ಈ ಕುರಿತು 2014ರ ಆಗಷ್ಟ್ 4ರಂದು ನೀಡಿದ ಲೋಕಾಯುಕ್ತ ಸಂಸ್ಥೆಯ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ಆಗಿನಿಂದ ಲೋಕಾಯುಕ್ತ ವರದಿ ಜಾರಿಗೊಳಿಸಲಾಗುವುದು ಎಂಬುದಾಗಿ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ, ಈವರೆಗೂ ಒತ್ತುವರಿಯಾದ ಜಮೀನು ಸರ್ಕಾರ ವಶಕ್ಕೆ ಪಡೆದಿಲ್ಲ ಎಂದು ವಾದ ಮಾಡಿದ್ದರು.












Click it and Unblock the Notifications