ಕಪ್ಪು ಬಣ್ಣಕ್ಕೆ ತಿರುಗಿದ ಕೆರೆ ನೀರು; ಗ್ರಾಮಸ್ಥರ ನಿರೀಕ್ಷೆಗೆ ತಣ್ಣೀರು
ಬೆಂಗಳೂರು, ಫೆಬ್ರವರಿ 17; ದೇವನಹಳ್ಳಿ ತಾಲ್ಲೂಕಿನಲ್ಲಿ ಸುಮಾರು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದೆ ಕೆರೆಗಳಲ್ಲಿ ನೀರಿಲ್ಲದೆ ಜನರು ತೊಂದರೆ ಅನುಭವಿಸಿದ್ದರು. ಆದರೆ ಕಳೆದ ವರ್ಷ ಸುರಿದ ಹೆಚ್ಚಿನ ಮಳೆಯಿಂದಾಗಿ ಕೆರೆಗಳು ತುಂಬಿತ್ತು, ಜನರಲ್ಲಿ ಸಂತಸ ಮನೆ ಮಾಡಿತ್ತು.
ತಾಲ್ಲೂಕಿನ ಇಲತೊರೆ ಗ್ರಾಮದ ಕರೆಯ ನೀರು ಈಗ ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಚೌಡನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾದಹಳ್ಳಿ ಸಮೀಪ ಇರುವ ರೋನಾಲ್ಡೋ ಕೊಲಾಸೋ ಎಂಬುವವರಿಗೆ ಸೇರಿದ ಹಾಲಿವುಡ್ ಟೌನ್‌ನಲ್ಲಿನ ತ್ಯಾಜ್ಯ ನೀರನ್ನು ನೇರವಾಗಿ ಕೆರೆಗೆ ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಾಲಿವುಡ್ ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಉಪಯೋಗಿಸಿದ ನೀರನ್ನು ಮತ್ತೆ ಶುದ್ಧೀಕರಣ ಮಾಡಿ ಹೊರಗೆ ಬಿಡುವ ಬದಲು ನೇರವಾಗಿ ಕೆರೆಯ ರಾಜಕಾಲುವೆಗೆ ಬಿಡುತ್ತಿದ್ದಾರೆ. ಇದರಿಂದ ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ ಮತ್ತು ಗಬ್ಬು ವಾಸನೆ ಬರುತ್ತಿದೆ.

ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಕೆರೆಯ ಸುತ್ತಮುತ್ತಲಿನ ಜಾಗದಲ್ಲಿ ಜನಸಾಮಾನ್ಯರು ಓಡಾಡಲೂ ಸಾಧ್ಯವಾಗದ ರೀತಿ ವಾಸನೆ ಹಬ್ಬಿದೆ. ದನಕರುಗಳು ಸಹ ಕೆರೆಯ ನೀರು ಕುಡಿಯಲಿಕ್ಕೆ ಸಾಧ್ಯವಾಗುತ್ತಿಲ್ಲ.
ಕೆರೆಯಲ್ಲಿಯೇ ಗ್ರಾಮ ಪಂಚಾಯಿತಿಯಿಂದ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸಿದ್ದಾರೆ. ಈ ಕೊಳವೆಬಾವಿಯಿಂದಲೇ ಜನರಿಗೆ ಕುಡಿಯುವ ಪೂರೈಕೆಯಾಗುತ್ತಿದೆ. ಆದರೆ ಈಗ ಕೆರೆಯ ನೀರು ಕೆಟ್ಟಿರುವುದರಿಂದ ಬಾವಿಯಲ್ಲಿನ ನೀರೂ ಕೂಡಾ ಕಲುಷಿತವಾಗುವ ಸಾಧ್ಯತೆ ಇದೆ.

"ಕೆರೆಯಲ್ಲಿ ನೀರು ಸಂಗ್ರಹವಿದ್ದರೂ ಮೀನುಗಾರಿಕೆ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಒತ್ತಾಯಿಸಿದ್ದಾರೆ.
ಚೌಡನಹಳ್ಳಿ ಗ್ರಾಮದ ನಾರಾಯಣಮ್ಮ ಮಾತನಾಡಿ, "ನಾವು ಪ್ರತಿ ನಿತ್ಯವೂ ಇಲ್ಲಿ ಓಡಾಡಬೇಕಾದರೆ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಈ ಕೆರೆಯ ನೀರನ್ನು ಕುಡಿದು ಎಷ್ಟೋ ದನಕರುಗಳು ಸತ್ತಿವೆ, ಕೆಲವು ದನಗಳು ಕಾಯಿಲೆಗೆ ಒಳಗಾಗಿವೆ. ಈ ಬಗ್ಗೆ ಅಪಾರ್ಟ್‌ಮೆಂಟ್ ಅವರನ್ನು ಕೇಳಿದರೆ ನೀರು ಕಾಲುವೆಯಲ್ಲಿ ಹರಿದುಕೊಂಡು ಹೋಗುತ್ತದೆ ನಿಮಗೇನು ಸಮಸ್ಯೆ? ಎಂದು ಪ್ರಶ್ನಿಸಿದರು" ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಎಚ್. ಡಿ. ವಸಂತ್ ಕುಮಾರ್ ಮಾತನಾಡಿ, "ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿ, ಮಳೆ ನೀರು ಹೊರತು ಪಡಿಸಿ, ಹಾಲಿವುಡ್ ಟೌನ್‌ನಲ್ಲಿ ಉಪಯೋಗವಾಗುತ್ತಿರುವ ನೀರು ಶುದ್ಧೀಕರಿಸದೇ ಹೊರಗೆ ಬಿಡುತ್ತಿದ್ದರೆ ಅವರಿಗೆ ನೊಟೀಸ್ ಜಾರಿ ಮಾಡುವಂತೆ ಸೂಚನೆ ನೀಡಲಾಗಿದೆ" ಎಂದರು.
ಇನ್ನೂ ಈ ವಿಚಾರವಾಗಿ ಕನ್ನಮಂಗಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆದರ್ಶ," ಸಾರ್ವಜನಿಕರು ನೀಡಿರುವ ದೂರನ್ನು ಈ ಕೂಡಲೇ ಪರಿಶೀಲಿಸುತ್ತೇವೆ. ಹಾಲಿವುಡ್ ಟೌನ್ ಸ್ಥಳಕ್ಕೆ ಭೇಟಿನೀಡಿ , ಪರಿಶೀಲನೆ ನಡೆಸುವೆವು. ನೀರನ್ನು ಒಂದು ವೇಳೆ ಶುದ್ಧೀಕರಣ ಮಾಡದೇ ನೇರವಾಗಿ ಕೆರೆಗೆ ಬಿಟ್ಟರೆ, ನೊಟೀಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗುತ್ತೇವೆ" ಎಂದು ಎಚ್ಚರಿಕೆ ನೀಡಿದರು.












Click it and Unblock the Notifications