ರೌಡಿ "ಗುಂಡ'ನಿಗೆ ಗುಂಡೇಟು ನೀಡಿ ಬಂಧಿಸಿದ ಇನ್ಸ್‌ಪೆಕ್ಟರ್ ಪಾರ್ವತಮ್ಮ
ಬೆಂಗಳೂರು ಫೆಬ್ರವರಿ 22: ಪೊಲೀಸರು ಬಂಧಿಸಲು ಮುಂದಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಯೊಬ್ಬನಿಗೆ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.
ಕೊಲೆ, ಕೊಲೆಯತ್ನ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಬೆಂಗಳೂರು ಹಾಗೂ ತುಮಕೂರು ಪೊಲೀಸರಿಗೆ ಬೇಕಾಗಿದ್ದ ರೌಡಿ ಸ್ಟೀಫನ್ ಫರ್ನಾಂಡಿಸ್ ಅಲಿಯಾಸ್ ಗುಂಡ ಎನ್ನುವ ರೌಡಿಯೇ ಗುಂಡೇಟು ತಿಂದು ಪೊಲೀಸರ ವಶದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತುಮಕೂರಿನ ತಿಲಕ್ ಪಾರ್ಕ್ ಸರ್ಕಲ್ ಇನ್ಸ್ಪೆಕ್ಟರ್ ಪಾರ್ವತಮ್ಮ ರೌಡಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ.
ಈಗಾಗಲೇ ತುಮಕೂರಿನಲ್ಲಿ ರೌಡಿಗಳಿಗೆ ದುಸ್ವಪ್ನವಾಗಿರುವ ತಿಲಕ್ ಪಾರ್ಕ್ ಸರ್ಕಲ್ ಇನ್ಸ್ಪೆಕ್ಟರ್ ಪಾರ್ವತಮ್ಮ ಅವರ ಈ ಕಾರ್ಯಕ್ಕೆ ಸರ್ವಜನಿಕರ ಪ್ರಶಂಸೆ ವ್ಯಕ್ತವಾಗುತ್ತಿದೆ.

ಆರು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ
ರೌಡಿ ಸ್ಟೀಫನ್ ಫರ್ನಾಂಡಿಸ್ ಆರು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ. ತುಮಕೂರಿನ ಜಯನಗರ ಠಾಣೆಯ ರೌಡಿಪಟ್ಟಿಯಲ್ಲಿ ಈತನ ಹೆಸರಿದೆ. ಆರೋಪಿಯು ತುಮಕೂರು ಜಿಲ್ಲಾ ವ್ಯಾಪ್ತಿಯ ಬೆಂಗಳೂರು ಬಳಿಯ ಮಲ್ಲಸಂದ್ರದಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಆ ಮಾಹಿತಿ ಆಧರಿಸಿ ಪಾರ್ವತಮ್ಮ ನೇತೃತ್ವದಲ್ಲಿ ತಿಲಕ್ ಪಾರ್ಕ್ ಪೊಲೀಸರ ತಂಡ ನಗರಕ್ಕೆ ಬಂದಿತ್ತು.

ಪೊಲೀಸರ ಜಂಟಿ ಕಾರ್ಯಾಚರಣೆ
ಬೆಂಗಳೂರಿನ ಸೋಲದೇವನಹಳ್ಳಿ ಇನ್‌ಸ್ಪೆಕ್ಟರ್ ಶಿವಸ್ವಾಮಿ ಜೊತೆ ತುಮಕೂರಿನ ತಿಲಕ್ ಪಾರ್ಕ್ ಸರ್ಕಲ್ ಇನ್ಸ್ಪೆಕ್ಟರ್ ಪಾರ್ವತಮ್ಮ ನೇತೃತ್ವದಲ್ಲಿ ಪೊಲೀಸರ ತಂಡ ಶುಕ್ರವಾರ ಸಂಜೆ ಆರೋಪಿಯ ಬಂಧನಕ್ಕೆ ಮಲ್ಲಸಂದ್ರಕ್ಕೆ ತೆರಳಿತ್ತು. ಬಂಧಿಸಲು ಮುಂದಾದ ಕಾನ್‌ಸ್ಟೆಬಲ್ ಶ್ರೀನಿವಾಸ್ ಮತ್ತು ಮಂಜುನಾಥ ಎಂಬುವರಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಗುಂಡ ಯತ್ನಿಸಿದ್ದ.

ತುಮಕೂರಿನಲ್ಲಿ ಕೊಲೆ ಮಾಡಿದ್ದ
ಕಳೆದ ಕೆಲ ವರ್ಷಗಳ ಹಿಂದೆ ತುಮಕೂರಿನಲ್ಲಿ ವ್ಯಕ್ತಿಯೊಬ್ಬನ ಕೊಲೆಯ ಬಳಿಕ ಕೊಲೆಯತ್ನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಗುಂಡ ಭಾಗಿಯಾಗಿದ್ದ. ಜೈಲಿಗೂ ಹೋಗಿದ್ದ ಈತ, ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ. ಆತನ ಬಂಧನಕ್ಕೆ ವಾರೆಂಟ್ ಜಾರಿಯಾಗಿತ್ತು.

ಗಾಳಿಯಲ್ಲಿ ಒಂದು ಸುತ್ತು ಗುಂಡು
ಶುಕ್ರವಾರ ಸಂಜೆ ನಡೆದ ಕಾರ್ಯಾಚರಣೆಯಲ್ಲಿ ಮಲ್ಲಸಂದ್ರ ಬಳಿ ನಿರ್ಜನ ಪ್ರದೇಶವೊಂದರಲ್ಲಿ ತಕ್ಷಣ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಆತನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೆ ಹಲ್ಲೆ ಮಾಡಲು ಮುಂದಾದಾಗ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಯಿತು. ಆರೋಪಿ ಮತ್ತು ಗಾಯಾಳು ಪೊಲೀಸರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications