ಕ್ಯಾರ್ ಚಂಡಮಾರುತ ಪ್ರಭಾವ, ಬೆಂಗಳೂರಲ್ಲೂ ಶುರುವಾಯ್ತು ಮಳೆ
ಬೆಂಗಳೂರು, ಅಕ್ಟೋಬರ್ 25: ಕ್ಯಾರ್ ಚಂಡಮಾರುತ ಪ್ರಭಾವ ಬೆಂಗಳೂರಲ್ಲೂ ಭಾರಿ ಮಳೆ ಶುರುವಾಗಿದೆ.
ಜಯನಗರ, ಬನಶಂಕರಿ, ವಿಧಾನಸೌಧ, ಮಲ್ಲೇಶ್ವರ, ಕೆಂಗೇರಿ, ಉತ್ತರ ಹಳ್ಳಿ, ಮೈಸೂರು ರಸ್ತೆ, ಯಲಹಂಕ , ಹೆಬ್ಬಾಳ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಇಂದು ಸಂಜೆಯೂ ಕೂಡ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಚಂಡ ಮಾರುತವಾಗಿ ಪರಿವರ್ತನೆಗೊಂಡಿದ್ದು, ಗೋವಾ, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ಬರುತ್ತಿದೆ.

ಜೊತೆಗೆ ಕಡಲ ತೀರದಲ್ಲಿ ಗಂಟೆಗೆ 45-60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರಿಗೆ ಸಮುದ್ರದ ಬಳಿ ಬಾರದಂತೆ ಎಚ್ಚರಿಕೆ ನೀಡಲಾಗಿದೆ.
ಕರಾವಳಿ ಹೊರತುಪಡಿಸಿದರೆ ಘಟ್ಟ ಪ್ರದೇಶದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.
ಉಡುಪಿ , ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಅ. 25 ಹಾಗೂ 26 ಎರಡು ದಿನ 115ರಿಂದ 205 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಮುಂದಿನ 48 ಗಂಟೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications