ಸಂಸದ ಪ್ರತಾಪ್ ಸಿಂಹ ವಿರುದ್ಧ ಕುರುಬ ಸಮುದಾಯದ ಪ್ರತಿಭಟನೆ
ಬೆಂಗಳೂರು, ನ.19: ಮೈಸೂರು-ಕೊಡುಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಕುರುಬ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ನಂತರ ಕ್ಷಮೆಯಾಚನೆ ಮಾಡಿದ್ದಾರೆ. ಅದರೆ, ಕುರುಬ ಸಮಾಜದ ಕೋಪ ತಣ್ಣಗಾಗಿಲ್ಲ. ಪ್ರತಾಪ್ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ರಾಜ್ಯದ ಕುರುಬ ಸಮುದಾಯವನ್ನು ನಿಂದಿಸಿರುವುದು ಸರಿಯಲ್ಲ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಜಾತಿಯಲ್ಲಿ ಹುಟ್ಟಿದ್ದಾರೆ ಎನ್ನುವ ಒಂದೇ ಕಾರಣಕ್ಕಾಗಿ ರಾಜ್ಯದ ಮೂರನೇ ಬಹು ಸಂಖ್ಯಾತ ಸಮುದಾಯದ ವಿರುದ್ಧ ಟೀಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಧರಣಿ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಯಮನಪ್ಪ ಸಣ್ಣಕ್ಕಿ ಪ್ರಶ್ನಿಸಿದ್ದಾರೆ.

ಕುರುಬ ಸಮುದಾಯವು ಹಾಲು ಮತ ಸಮಾಜವಾಗಿದ್ದು, ನಾಡಿನ ಎಲ್ಲ ಜನಾಂಗದೊಂದಿಗೆ ಹಾಲಿನಂತೆ ಬೆರೆತು ಸಹಿಷ್ಣುತೆಯ ಹಾದಿಯಲ್ಲಿ ಸಾಗುತ್ತಿದೆ. ಆದರೆ, ಸಂಸದ ಪ್ರತಾಪ್ ಸಿಂಹ ನೀಡಿರುವ ಮೂರ್ಖತನದ ಹೇಳಿಕೆಯನ್ನು ಪ್ರತಿಯೊಬ್ಬ ನಾಗರಿಕ ಖಂಡಿಸಬೇಕು ಎಂದರು.
ಸಂಸದ ಪ್ರತಾಪಸಿಂಹ ಅವರು ಇತ್ತೀಚೆಗೆ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ 'ಟಿಪ್ಪು ಸುಲ್ತಾನ್ ಕುರುಬರನ್ನು ಕೊಂದಿದ್ದರೆ, ಟಿಪ್ಪು ಜಯಂತಿ ಆಚರಿಸುತ್ತಿದ್ದರೇ' ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.
ಈ ಹಿಂದೆಯೂ ಭಗವದ್ಗೀತೆ ವಿಷಯದಲ್ಲಿ ಯಾವುದೋ ಸಮುದಾಯವನ್ನು ಹಂದಿಗೆ ಹೋಲಿಸಿದ್ದರು. ಒಬ್ಬ ಜನಪ್ರತಿನಿಧಿಯಾಗಿ ಈ ರೀತಿಯ ಹೇಳಿಕೆ ನೀಡುವುದು ಶೋಭೆ ತರುವ ವಿಷಯವಲ್ಲ.
ಇತ್ತೀಚೆಗಷ್ಟೇ ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವ ಅವರು, ಸಾರ್ವಜನಿಕ ಸೇವೆ ಮಾಡುವತ್ತ ಗಮನ ಹರಿಸಲಿ ಎಂದು ಸಲಹೆ ನೀಡಿದೆ. ಯಾರದೋ ಓಲೈಕೆಗೆ ಇಂತಹ ಹೇಳಿಕೆಗಳನ್ನು ನೀಡುವ ಕುಚೇಷ್ಟೆಗಳನ್ನು ನಿಲ್ಲಿಸಿ, ಜನಪ್ರತಿನಿಧಿಯಾಗಿ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಬಿಟ್ಟು, ಸಾಮರಸ್ಯ ಮೂಡಿಸಲಿ ಎಂದು ಮಹಾಸಭಾ ಅಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದ್ದಾರೆ.












Click it and Unblock the Notifications