ರಾಜಧಾನಿ ಬೆಂಗಳೂರಿನಲ್ಲಿ ಗುಡುಗು, ಸಿಡಿಲು ಸಹಿತ ಕುಂಭದ್ರೋಣ ಮಳೆ
ಬೆಂಗಳೂರು, ಆಗಸ್ಟ್ 31: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ 8ರಿಂದ ಮೋಡ ಕವಿದ ವಾತಾವರಣವಿದ್ದು ರಾತ್ರಿ 9.30ರ ಸುಮಾರಿಗೆ ಉತ್ತಮ ಮಳೆಯಾಗುತ್ತಿದೆ. ಅಲ್ಲದೆ ಕರ್ನಾಟಕ ಹಲವೆಡೆ ಭಾರೀ ಮಳೆ ಸುರಿದಿದೆ.
ಕಳೆದ ಒಂದು ತಿಂಗಳಿಂದ ಮಳೆಯಿಲ್ಲದೆ ಬಸವಳಿದಿದ್ದ ಕರ್ನಾಟಕಕ್ಕೆ ಗುರುವಾರ ಸಂಜೆಯಾಗುತ್ತಿದ್ದಂತೆ ಭಾರೀ ಮಳೆ ಸುರಿದಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಆಗಸ್ಟ್‌ನಲ್ಲಿ ಇತಿಹಾಸದಲ್ಲೇ ಶುಷ್ಕ ತಿಂಗಳು ಆಗಿತ್ತು. ತಿಂಗಳ ಕೊನೆಯ ಈ ದಿನ ಸಂಜೆವರೆಗೂ ತಾಪಮಾನ ಏರಿಕೆಯು ಇತ್ತು. ಈಗ ಸಂಜೆ ಸುಮಾರಿಗೆ ವಿವಿಧ ಕಡೆ ಮಳೆ ಬರಲು ಶುರುವಾಯಿತು.

ಬೆಂಗಳೂರಿನ ಗಂಗೇನಹಳ್ಳಿ, ವಿದ್ಯಾಪೀಠ ಸರ್ಕಲ್, ನಾಗರಬಾವಿ, ವಿಜಯನಗರ, ಕೋರಮಂಗಲ, ಬಸವೇಶ್ವರ ನಗರ, ಲಗ್ಗೆರೆ, ಚಿಕ್ಕಬಾಣವಾರ, ಹಲಸೂರು, ಎಚ್ಎಎಲ್, ಲಿಂಗರಾಜಪುರಂ ಮತ್ತು ಸಂಜಯ್ ನಗರ, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು, ಗೊಟ್ಟಿಗೆರೆ, ಬಿಟಿಎಂ, ಎಚ್‌ಎಸ್‌ಆರ್, ಜೆಪಿ ನಗರ, ವಾಜರಹಳ್ಳಿ, ಸರ್ಜಾಪುರ, ಇಂದಿರ ನಗರ ಸೇರಿದಂತೆ ಹಲವಾರು ಕಡೆ ಗುಡುಗು ಸಹಿತ ಮಳೆಯಾಗಿದೆ. ಭಾರೀ ಮಳೆಯಿಂದ ಕೆಲವೆಡೆ ವಿದ್ಯುತ್ ಕಡಿತ ಉಂಟಾಗಿತ್ತು.
ಕರ್ನಾಟಕದ ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿ ರಾಜ್ಯದ ವಿವಿಧೆಡೆ ಇಂದು ಕೆಲವೇ ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಆಧರಿಸಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿತ್ತು. ಅದರಂತೆ ಈಗ ಮಳೆ ಬಂದ ತಂಪೆರೆದಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಗದಗ, ಕೋಲಾರ, ಕೊಪ್ಪಳ, ರಾಯಚೂರು, ವಿಜಯನಗರ ಸೇರಿದಂತೆ ಒಂದು ಅಥವಾ ಎರಡು ಕಡೆ ಸಿಡಿಲು ಸಹಿತ ಗುಡುಗು ಸಹಿತ ಮಳೆಯಾಗಿದೆ. ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದ ಮತ್ತು ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆ ಬಂದಿದೆ.
ಬೆಂಗಳೂರಿನಲ್ಲಿ ತಿಂಗಳ ಬಳಿಕ ಸುರಿದ ದೀರ್ಘ ಮಳೆಯಿಂದ ಹಲವೆಡೆ ಸಹಜವಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುಖ್ಯವಾಗಿ ಕೋರಮಂಗಲ, ಸಿಲ್ಕ್ ಬೋರ್ಡ್, ಹೊಸೂರು ರಸ್ತೆ, ಹೆಬ್ಬಾಳ, ಹೊರ ವರ್ತುಲ ರಸ್ತೆಗಳಲ್ಲಿ ಹೆಚ್ಚಾಗಿ ವಾಹನ ದಟ್ಟಣೆ ಇತ್ತು, ಇದಲ್ಲದೆ ಕೆಲವೆಡೆ ಮಳೆ ನಿಧಾಮವಾಗಿ ಆರಂಭವಾದ್ದರಿಂದ ಕಚೇರಿಯಿಂದ ಮನೆಗೆ ಹೋಗುವವರೆಲ್ಲರೂ ಮನೆ ಸೇರಿಯಾಗಿತ್ತಾದರೂ ಅಲ್ಲಲ್ಲಿ ನಿಧಾನ ವಾಹನ ಸಂಚಾರ ಕಂಡು ಬಂದಿತ್ತು.












Click it and Unblock the Notifications