ಶೃತಿ, ಆಯುಷಿ ಹೆಜ್ಜೆ-ಗೆಜ್ಜೆಯ ಪ್ರದರ್ಶನಕ್ಕೆ ಮನಸೋತ ಪ್ರೇಕ್ಷಕ ವರ್ಗ
ಬೆಂಗಳೂರು, ಜೂನ್ 2: ಅದು ಯಾವುದೇ ಇಂದ್ರ ಸಭೆಗೂ ಕಡಿಮೆ ಇಲ್ಲದ ಸಭೆ.. ಅಲ್ಲಿ ನಿರ್ಮಾಣವಾಗಿದ್ದು ದೈವಿಕ ವಾತಾವರಣ... ಸಾಲಂಕೃತ ದೀಪ ಸಾಲು, ಸಂಗೀತದ ಇಂಪಿನ ನಾದಕ್ಕೆ ಹೆಜ್ಜೆ ಗೆಜ್ಜೆಯ ತಾಳದ ಸಮರ್ಪಕ ಸದ್ದು... ಚೆಂದದ ಬಾಲೆಯರಿಬ್ಬರ ಲಯಬದ್ಧ ನರ್ತನ ಪ್ರದರ್ಶನಕ್ಕೆ ಮನಸೋತು ವ್ಹಾ ವ್ಹಾ ಎನ್ನುವ ಪ್ರೇಕ್ಷಕ ವರ್ಗ... ಒಬ್ಬ ಕಲಾವಿದನಾದವನಿಗೆ ಇದಕ್ಕೂ ಹೆಚ್ಚಿನ ನಿರೀಕ್ಷೆ ಇನ್ನೇನಿರಲಿದೆ?
ಯಾವುದೇ ಕಲೆಗಾದರೂ ಸಾರ್ಥಕ್ಯ ಸಿಗುವುದು ಆ ಕಲೆಯನ್ನು ಇನ್ನೊಬ್ಬರು ಮೆಚ್ಚಿ ಹರಸಿ ಹಾರೈಸಿದಾಗ... ಅಂಥದ್ದೊಂದು ಹಾರೈಕೆ ದೊರಕಿದ್ದು ಇತ್ತೀಚೆಗಷ್ಟೇ ಭರತನಾಟ್ಯ ರಂಗಪ್ರವೇಶ ಮಾಡಿದ ಕು.ಶೃತಿ ಮತ್ತು ಕು. ಆಯುಷಿ ಎಂಬ ಬಾಲಕಿಯರಿಗೆ... 5ರ ವಯಸ್ಸಿನಿಂದಲೇ ಭರತನಾಟ್ಯದ ಕುರಿತಾದ ಶೃತಿ, ಆಯುಷಿಯರ ಶ್ರದ್ಧಾಪೂರ್ವಕ ಆಸಕ್ತಿಯ ಅಭ್ಯಾಸಕ್ಕೆ ದೊರಕಿದ ಫಲವೇ ರಂಗ ಪ್ರವೇಶದ ಸಂಭ್ರಮ.
ಭರತನಾಟ್ಯ ರಂಗಪ್ರವೇಶ ಜೀವನದ ಪ್ರಮುಖ ಘಟ್ಟ. ಅಪ್ಪಟ ಕಲಾವಿದರಾಗಿ ಪೂರ್ಣಪ್ರಮಾಣದ ನೃತ್ಯವನ್ನು ಪ್ರಸ್ತುತ ಪಡಿಸಲು ಮೊಟ್ಟಮೊದಲಿಗೆ ದೊರಕುವ ವೇದಿಕೆಯೂ ಹೌದು. ಅಂಥದ್ದೊಂದು ರಂಗಪ್ರವೇಶ ಕಾರ್ಯಕ್ರಮವನ್ನು ಕು.ಶೃತಿ ಹಾಗೂ ಕು.ಆಯುಷಿ ಕೊಂಡಾಪುರ್ ಇಬ್ಬರೂ ಸಮರ್ಥವಾಗಿ ನಿರ್ವಹಿಸಿ, ನೆರೆದಿದ್ದ ಕಲಾಭಿಮಾನಿಗಳನ್ನು ರಂಜಿಸಿದರು.

ಕೋರಮಂಗಲ ಕ್ಲಬ್‌ನ ಪ್ರಭಾತ್ ಕಲಾದ್ವಾರಕ ವೇದಿಕೆ
ಕೋರಮಂಗಲ ಕ್ಲಬ್‌ನ ಪ್ರಭಾತ್ ಕಲಾದ್ವಾರಕ ವೇದಿಕೆಯಲ್ಲಿ ಬೆಂಗಳೂರಿನ ನೃತು ರೂಪಕ ಕಲಾ ಕೇಂದ್ರ ಪ್ರಸ್ತುತಪಡಿಸಿದ ಭರತನಾಟ್ಯ ರಂಗಪ್ರವೇಶ ಇತ್ತೀಚೆಗೆ ನಡೆಯಿತು. ಮೊದಲಿಗೆ ಪುಷ್ಪಾಂಜಲಿ ಮತ್ತು ಶಾರದಾ ಸ್ತೋತ್ರದಿಂದ ಆರಂಭಗೊಂಡ ಕಾರ್ಯಕ್ರಮ ದೇವರನಾಮ, ಜತಿಸ್ವರ, ವರ್ಣ, ತಿಲ್ಲಾನ ಹೀಗೆ ಅನೇಕ ಪ್ರಾಕಾರದಲ್ಲಿ ಮೂಡಿಬಂದು, ಪುರಂದರ ದಾಸರ ಕೀರ್ತನೆ, ರಾಮ ಭಜನ್ ಜೊತೆಗೆ ಕೊನೆಕಂಡಿತು. ತಮ್ಮ ಕಲಾತ್ಮಕ ಶೈಲಿಯ ನೃತ್ಯ ಸಂಯೋಜನೆಯಿಂದ ಗುರು ರಕ್ಷಾರಾಮ್ ಕುಡ್ವ ಮತ್ತು ಶೃತಿ ಆಯುಷಿಯರಿಬ್ಬರೂ ಸಭಿಕರಿಂದ ಸೈ ಎನಿಸಿಕೊಂಡರು.

ವಿದುಷಿ ರಕ್ಷಾ ಕುಡ್ವ ಅವರ ಶಿಷ್ಯೆಯರು
ವಿದ್ವಾನ್ ರೋಹಿತ್ ಭಟ್ ಅವರ ಸುಶ್ರಾವ್ಯ ಕಂಠದ ಗಾಯನ, ನಟುವಾಂಗದಲ್ಲಿ ವಿದುಷಿ ರಕ್ಷಾರಾಮ್ ಕುಡ್ವ, ಮೃದಂಗದಲ್ಲಿ ವಿದ್ವಾನ್ ವಿನೋದ್ ಶ್ಯಾಂ ಆನೂರು, ವೀಣೆಯಲ್ಲಿ ವಿದ್ವಾನ್ ಗೋಪಾಲ್ ವೆಂಕಟರಮಣ, ಕೊಳಲಿನಲ್ಲಿ ವಿದ್ವಾನ್ ವಿವೇಕ್ ವಿ.ಕೃಷ್ಣ ಅವರ ನುಡಿಸಾಣಿಕೆ ವಿಶೇಷ ಮೆರುಗು ತಂದುಕೊಟ್ಟಿತು. ಬೆಳಕು ಮತ್ತು ವೇದಿಕೆಯ ಸರಳ ವಿನ್ಯಾಸ ಕಣ್ಣಿಗೆ ಹಿತ ತಂದಿದ್ದಲ್ಲದೆ, ಮುಖ್ಯ ಅತಿಥಿಗಳಾಗಿದ್ದ ವಿದ್ವಾನ್ ಹರಿಪದ್ಮನ್, ವಿದುಷಿ ದಿವ್ಯಾ ಹರಿಪದ್ಮನ್, ವಿದುಷಿ ಬಿಂದು ನಾಯರ್ ಮುಕ್ತ ಕಂಠದಿಂದ ಕಾರ್ಯಕ್ರಮವನ್ನು ಶ್ಲಾಘಿಸಿ, ವಿದುಷಿ ರಕ್ಷಾ ಕುಡ್ವ ಅವರ ಶಿಷ್ಯೆಯರಿಗೆ ಶುಭ ಹಾರೈಸಿದರು.

ಬೆನ್ನೆಲುಬಾಗಿ ನಿಂತಿರುವ ಗುರು ವಿದುಷಿ ರಕ್ಷಾ
ಶಿವಮೊಗ್ಗದ ತೀರ್ಥಹಳ್ಳಿ ಸಮೀಪದ ಪುಟ್ಟ ಹಳ್ಳಿಯ ಹಿನ್ನೆಲೆ ಹೊಂದಿರುವ ವಿದುಷಿ ರಕ್ಷಾ ರಾಮ್ ಕುಡ್ವ, ಭರತನಾಟ್ಯವನ್ನೇ ಉಸಿರಾಗಿಸಿಕೊಂಡು, ತಮ್ಮ ಶಿಷ್ಯವೃಂದಕ್ಕೆ ಖಡಕ್ ಎಚ್ಚರಿಕೆಯೊಂದಿಗೆ ಪಾಠ ಹೇಳುವ ಸಮರ್ಥ ಗುರು. ಭರತನಾಟ್ಯದ ಜ್ಯುನಿಯರ್ ಹಂತದ ಶಿಕ್ಷಣವನ್ನು ಶಿವಮೊಗ್ಗದ ವಿದ್ವಾನ್ ಕೇಶವಕುಮಾರ್ ಪಿಳ್ಳೈ ಅವರ ಬಳಿ ಪಡೆದ ರಕ್ಷಾ ಅವರು, ನಂತರದಲ್ಲಿ ಹಲವು ನೃತ್ಯ ಗುರುಗಳ ಬಳಿ ಅಭ್ಯಸಿಸಿದರು. ತಮ್ಮ ವಿದ್ವತ್ ಶಿಕ್ಷಣವನ್ನು ಚೆನ್ನೈ ಕಲಾಕ್ಷೇತ್ರದ ವಿದ್ವಾನ್ ಹರಿಪದ್ಮನ್ ಮತ್ತು ವಿದುಷಿ ದಿವ್ಯಾ ಹರಿಪದ್ಮನ್ ಅವರ ಬಳಿ ಪಡೆದರು.

ಎಂಬಿಎ ಪದವೀಧರೆಯಾಗಿರುವ ರಕ್ಷಾ
ಬಳಿಕ ಮೋಹಿನಿಯಟ್ಟಂ ನೃತ್ಯವನ್ನು ವಿದುಷಿ ಉಷಾ ದಾತಾರ್ ಹಾಗೂ ವಿದುಷಿ ಕಲಾಮಂಡಲಮ್ ಶ್ರೀಜಯಾ ನಾಯರ್ ಅವರ ಬಳಿ ಪಡೆದರು. ಎಂಬಿಎ ಪದವೀಧರೆಯಾಗಿರುವ ರಕ್ಷಾ ಅವರು ದೇಶ ವಿದೇಶಗಳ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ಹೆಚ್ಎಸ್ಆರ್ ಲೇ ಔಟ್‌ನಲ್ಲಿ ನೃತು ರೂಪಕ ಎಂಬ ಕಲಾ ಸಂಸ್ಥೆಯನ್ನು ಸ್ಥಾಪಿಸಿ ಭರತನಾಟ್ಯದ ಶಿಕ್ಷಣ ಬಯಸುವ ಹಲವು ವಿದ್ಯಾರ್ಥಿಗಳಿಗೆ ಸಮರ್ಥ ಗುರು ಎನಿಸಿದ್ದಾರೆ.

9ನೇ ತರಗತಿಯಲ್ಲಿ ಓದುತ್ತಿರುವ ಕು.ಶೃತಿ
ಭರತನಾಟ್ಯ ರಂಗಪ್ರವೇಶ ಮಾಡಿರುವ 9ನೇ ತರಗತಿಯಲ್ಲಿ ಓದುತ್ತಿರುವ ಕು.ಶೃತಿ, 5ನೇ ವಯಸ್ಸಿನಲ್ಲಿಯೇ ಭರತನಾಟ್ಯ ಕಡೆಗೆ ಒಲವು ಬೆಳೆಸಿಕೊಂಡು ಭರತನಾಟ್ಯವನ್ನು ತನ್ನ ದೇಹ, ಮನಸ್ಸು, ಆತ್ಮದ ಮಧ್ಯೆ ಸಂಪರ್ಕ ಸಾಧಿಸುವ ಸಾಧನವಾಗಿಸಿಕೊಂಡಾಕೆ. ವಿದುಷಿ ರಕ್ಷಾರಾಮ್ ಕುಡ್ವ ಅವರ ಮತ್ತೋರ್ವ ಶಿಷ್ಯೆ ಕು.ಆಯುಷಿ ಕೊಂಡಾಪುರ್ ಇದೀಗ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕಳೆದ 8 ವರ್ಷಗಳಿಂದ ಭರತನಾಟ್ಯವನ್ನು ಆಭ್ಯಸಿಸುತ್ತಿರುವ ಆಯುಷಿ ಕೂಡ ಬಾಲ್ಯದಲ್ಲಿಯೇ ನೃತ್ಯಾಸಕ್ತಳು. ಆಯುಷಿ, ನೃತ್ಯ ಮಾತ್ರವಲ್ಲದೇ ಚಿತ್ರಕಲೆ, ಸ್ಕೆಚಿಂಗ್, ಸಂಗೀತ, ಸ್ಕೇಟಿಂಗ್ ನಂತಹ ಹಲವು ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಕೂಡ ಮೂಡಿಸುತ್ತಿದ್ದಾಳೆ.












Click it and Unblock the Notifications