ಮಂಡ್ಯ ಚುನಾವಣೆಯಲ್ಲಿ ಕುಮಾರಸ್ವಾಮಿ ತಪ್ಪು ಮಾಡಿದ್ದಾರೆ: ಜಮೀರ್
Recommended Video
ಬೆಂಗಳೂರು, ಏಪ್ರಿಲ್ 30: ಮಂಡ್ಯ ಲೋಕಸಭೆ ಚುನಾವಣೆ ಮತದಾನ ಮುಗಿದರೂ ಅದರ ಕಾವು ಇನ್ನೂ ಆರಿಲ್ಲ. ಮಂಡ್ಯ ವಿಷಯದಲ್ಲಿ ಮೈತ್ರಿ ಪಕ್ಷದ ಸದಸ್ಯರು ಒಮ್ಮತ ಹೊಂದಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಇಂದು ಮಾಧ್ಯಮದೊಟ್ಟಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಅವರು, ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಕೆಲವು ತಪ್ಪು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮಂಡ್ಯ ಕ್ಷೇತ್ರದಲ್ಲಿ ಚೆಲುವಾರಯಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿ ಪರ ನಿಂತಿದ್ದಾರೆ ಎಂಬ ಆರೋಪದ ಬಗ್ಗೆ ಉತ್ತರಿಸುತ್ತಾ, ಮಂಡ್ಯದಲ್ಲಿ ಎಚ್‌ಡಿಕೆ ರಾಜಕೀಯ ನಡೆಯನ್ನು ಟೀಕಿಸಿದ ಅವರು, ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರನ್ನು ಕುಮಾರಸ್ವಾಮಿ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳಲು ಎಡವಿದರು ಎಂದರು.
ಮಂಡ್ಯ ಉಪಚುನಾವಣೆ ಸಮಯದಲ್ಲಿ ಶಿವರಾಮೇಗೌಡ ಅವರು ಮೈತ್ರಿ ಅಭ್ಯರ್ಥಿ ಆಗಿದ್ದಾಗ ಎಲ್ಲ ಕಾಂಗ್ರೆಸ್ ಮುಖಂಡರನ್ನು ಕರೆದು ಮಾತುಕತೆ ನಡೆಸಿ ಟಿಕೆಟ್ ನೀಡಿದ್ದರು, ಆಗ ಯಾವ ಗೊಂದಲವೂ ಇರಲಿಲ್ಲ, ಆದರೆ ನಿಖಿಲ್ ಸ್ಪರ್ಧೆ ವಿಷಯದಲ್ಲಿ ಅವರು ಹಾಗೆ ಮಾಡಲಿಲ್ಲ ಎಂದರು.

ಕುಮಾರಸ್ವಾಮಿ ಅನವಶ್ಯಕ ಹೇಳಿಕೆ: ಜಮೀರ್
ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್‌ನವರು ಬೆನ್ನಿಗೆ ಚೂರಿ ಹಾಕಿದ್ದಾರೆ, ನಿಖಿಲ್ ಗೆಲ್ಲಲು ಕಾಂಗ್ರೆಸ್‌ನವರ ಅವಶ್ಯಕತೆ ಇಲ್ಲ ಎಂದೆಲ್ಲಾ ಕುಮಾರಸ್ವಾಮಿ ಅವರು ಮಾತನಾಡಿದ್ದು ಸಹ ಅಲ್ಲಿನ ಕಾಂಗ್ರೆಸ್ ಮುಖಂಡರಿಗೆ ವಿಶೇಷವಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಅಭ್ಯರ್ಥಿಗಳಿಗೆ ನೋವಾಗಿದೆ ಎಂದು ಜಮೀರ್ ಹೇಳಿದರು.

'ಚೆಲುವರಾಯಸ್ವಾಮಿ, ಸುಮಲತಾ ಪರ ಪ್ರಚಾರ ಮಾಡಿಲ್ಲ'
ಹಾಗಾದರೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ್, ಈಗಾಗಲೇ ನಿಖಿಲ್ ಗೆದ್ದು ಆಗಿದೆ, ಆ ಬಗ್ಗೆ ಅನುಮಾನವೇ ಬೇಡ ಎಂದು ವಿಶ್ವಾಸದಿಂದ ನುಡಿದರು. ಚೆಲುವರಾಯಸ್ವಾಮಿಗೆ ಅಸಮಾಧಾನ ಇತ್ತು ಹಾಗೆಂದು ಅವರು ಕಾಂಗ್ರೆಸ್‌ಗೆ ವಿರುದ್ಧವಾಗಿ ಪ್ರಚಾರ ಮಾಡಲಿಲ್ಲ, ಮನೆಯಲ್ಲಿ ಮೌನವಾಗಿ ಕುಳಿತಿದ್ದರಷ್ಟೆ ಎಂದು ಅವರು ಹೇಳಿದರು.

'ರಮೇಶ್ ಜಾರಕಿಹೊಳಿ ಪಕ್ಕಾ ಕಾಂಗ್ರೆಸ್ಸಿಗ'
ರಮೇಶ್ ಜಾರಕಿಹೊಳಿ ಅವರ ಬಗ್ಗೆಯೂ ಮಾತನಾಡಿದ ಜಮೀರ್ ಅವರು, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ರಮೇಶ್ ಜಾರಕಿಹೊಳಿ ಅವರಿಗೆ ಬೇಸರವಾಗಿದೆ ಹಾಗಾಗಿ ಅವರು ರಾಜೀನಾಮೆ ಮಾತನಾಡಿದ್ದಾರೆ, ಆದರೆ ಅವರು ಪಕ್ಕಾ ಕಾಂಗ್ರೆಸ್ಸಿಗರು, ಅವರು ಪಕ್ಷ ಬಿಟ್ಟು ಹೋಗಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ: ಜಮೀರ್
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವ ಬಗ್ಗೆಯೂ ಮಾತನಾಡಿದ ಜಮೀರ್, ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕು ಎಂದು ನನ್ನನ್ನೂ ಸೇರಿದಂತೆ ಹಲವರ ಬಯಕೆ ಆದರೆ ರಾಹುಲ್ ಗಾಂಧಿ ಅವರು ಹೇಳಿದ್ದಾರೆ, ಕುಮಾರಸ್ವಾಮಿ ಅವರು ಐದು ವರ್ಷದ ಅವಧಿಗೆ ಸಿಎಂ ಎಂದು ಹಾಗಾಗಿ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಅವರು ಸಿಎಂ ಆಗಲಿದ್ದಾರೆ ಎಂದರು.












Click it and Unblock the Notifications