KSRTC:ಮೆಜೆಸ್ಟಿಕ್‌ನಿಂದಲೇ ಮೈಸೂರಿಗೆ ಬಸ್, ಅನುಕೂಲ, ಅನಾನುಕೂಲಗಳೇನು?
Recommended Video

ಬೆಂಗಳೂರು, ನವೆಂಬರ್ 13:ಬೆಂಗಳೂರು ಕೇಂದ್ರ ವಲಯದ ಅತಿಯಾದ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶಕ್ಕಾಗಿ ಕೆಂಪೇಗೌಡ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ನಾನಾ ರಾಜ್ಯಗಳಿಗೆ ತೆರಳುವ ಬಸ್‌ಗಳನ್ನು ನಗರದ ಎರಡು ಪ್ರಮುಖ ಪ್ರದೇಶಗಳಿಗೆ ಶಿಫ್ಟ್ ಮಾಡಿರುವ ಈ ನಿರ್ಧಾರದಿಂದ ಕೆಎಸ್‌ಆರ್‌ಟಿಸಿ ಹಿಂದೆ ಸರಿಯುವ ಲಕ್ಷಣಗಳು ಗೋಚರಿಸುತ್ತಿವೆ.
ಇದರಿಂದ ಬೆಂಗಳೂರು ಕೇಂದ್ರ ವಲಯ ಮತ್ತೆ ಟ್ರಾಫಿಕ್ ಜಾಮ್‌ನಿಂದ ತತ್ತರಿಸುವ ಆತಂಕ ಎದುರಾಗಿದೆ.ಈಗಾಗಲೇ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ಆ ಭಾಗದ ಹಲವಾರು ಬಸ್‌ಗಳನ್ನು ಬೆಂಗಳೂರು ಕೇಂದ್ರವಲಯದಿಂದ ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿತ್ತು.
ಅದೇ ರೀತಿ ಬೆಂಗಳೂರಿನಿಂದ ತುಮಕೂರು, ಚಿತ್ರದುರ್ಗ, ಹುಬ್ಬಳ್ಳಿ ಹಾಗೂ ಮಹರಾಷ್ಟ್ರ ಕಡೆಗೆ ಹೋಗುವ ಹಲವಾರು ಬಸ್‌ಗಳನ್ನು ಪೀಣ್ಯ ಬಳಿಯ ಬಸವೇಶ್ವರ ಬಸ್ ನಿಲ್ದಾಣಕ್ಕೂ ಸ್ಥಳಾಂತರಿಸಲಾಗಿತ್ತು. ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಕಾಣುತ್ತಿರುವ ಕೆಎಸ್‌ಆರ್‌ಟಿಸಿ ಮೈಸೂರು ಭಾಗಕ್ಕೆ ತೆರಳುವ ಕೆಲವು ಬಸ್‌ಗಳನ್ನು ಮತ್ತೆ ಮೆಜೆಸ್ಟಿಕ್ ನಿಂದಲೇ ಓಡಿಸುವ ಚಿಂತನೆ ನಡೆಸಿದೆ.
ಮೈಸೂರು ಹಾಗೂ ಮೈಸೂರು ಮೂಲಕ ಮುಂದಕ್ಕೆ ಕಾರ್ಯಾಚರಣೆ ನಡೆಸುವ ವೋಲ್ವೋ, ಸ್ಲೀಪರ್ ಸೇರಿ ಐಷಾರಾಮಿ ಬಸ್‌ಗಳು ಮೆಜೆಸ್ಟಿಕ್ ನಿಂದ ಸಂಚಾರ ಆರಂಭಿಸಲಿವೆ. ಕೆಬಿಎಸ್ ಅನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ಜಾಗದಲ್ಲಿ ಕೆಎಸ್‌ಆರ್‌ಟಿಸಿ ನೂತನ ಟರ್ಮಿನಲ್ 2ಎ ನಿರ್ಮಿಸಿದೆ. ಪ್ರಸ್ತುತ ಟರ್ಮಿನಲ್ ಎರಡರಿಂದ ಕಾರ್ಯಾಚರಣೆಯಾಗುತ್ತಿರುವ ಬಸ್‌ಗಳನ್ನು ಟರ್ಮಿನಲ್ 2 ಎಗೆ ವರ್ಗಾಯಿಸಲಾಗಿದೆ.

ಐಷಾರಾಮಿ ಬಸ್‌ಗಳು ಮತ್ತೆ ಮೆಜೆಸ್ಟಿಕ್‌ಗೆ ಸ್ಥಳಾಂತರ
ಬೆಂಗಳೂರು ನಗರದಿಂದ ಮೈಸೂರು, ಮಡಿಕೇರಿ, ಕೊಡಗು ಹಾಗೂ ತಮಿಳುನಾಡು ಕಡೆಗೆ ಹೋಗುವ ಹಲವಾರು ಬಸ್‌ಗಳನ್ನು ಮೆಜೆಸ್ಟಿಕ್ ಬದಲಾಗಿ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಹಲವು ವರ್ಷಗಳ ಹಿಂದೆಯೇ ಸ್ಥಳಾಂತರಿಸಲಾಗಿದೆ. ಇದರಿಂದ ಪ್ರತಿ ದಿನ ಸಂಜೆ 7 ಗಂಟೆಯಿಂದ ರಾತ್ರಿ ಸುಮಾರು 11 ಗಂಟೆಯವರೆಗೆ ಸರಿ ಸುಮಾರು 5 ತಾಸುಗಳ ಕಾಲ ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಆಗುವುದನ್ನು ತಪ್ಪಿಸಲಾಗಿತ್ತು. ಅಲ್ಲದೆ ಬೆಂಗಳೂರಿನಿಂದ ರಾಜ್ಯದ ನಾನಾ ಕಡೆಗೆ ಹೋಗುವ ಪ್ರಯಾಣಿಕರು ಆಯಾ ಪ್ರದೇಶಗಳಿಗೆ ತೆರಳಿ ಬಸ್‌ಗಳನ್ನು ಹತ್ತುತ್ತಿದ್ದರು. ಇದರಿಂದ ಕೆಎಸ್‌ಆರ್‌ಟಿಸಿಗೆ ನಷ್ಟವಾಗುತ್ತಿದೆ ಎನ್ನುವ ನೆಪವೊಡ್ಡಿ ಇದೀಗ ಐಷಾರಾಮಿ ಬಸ್‌ಗಳು ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್‌ಗೆ ಶಿಫ್ಟ್ ಮಾಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.

ಖಾಸಗಿ ಬಸ್‌ಗಳಿಗೆ ಲಾಭದ ನೆಪವೊಡ್ಡಿ ಸ್ಥಳಾಂತರ
ಬೆಂಗಳೂರು ಕೇಂದ್ರ ಪ್ರದೇಶದಿಂದ ಮೈಸೂರು, ಮಡಿಕೇರಿ ಸೇರಿದಂತೆ ಹಲವಾರು ಪ್ರದೇಶಗಳಿಗೆ ತೆರಳುವ ಖಾಸಗಿ ಐಷಾರಾಮಿ ಬಸ್‌ಗಳು ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳಿಂದ ಹೊರಡುತ್ತವೆ. ಹೀಗಾಗಿ ಭಾಗಶಃ ಪ್ರಯಾಣಿಕರು ಬೆಂಗಳೂರು ಕೇಂದ್ರ ಪ್ರದೇಶದಿಂದಲೇ ಪ್ರಯಾಣ ಕೈಗೊಳ್ಳಲು ಬಯಸುವುದರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಿಗಿಂತ ಹೆಚ್ಚಾಗಿ ಖಾಸಗಿ ಬಸ್‌ಗಳೇ ಹೆಚ್ಚು ಲಾಭಗಳಿಸುತ್ತಿವೆ ಎಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಂದಾಗಿದೆ.

ಪೀಣ್ಯ ಬಸ್ ನಿಲ್ದಾಣವು ವೈಫಲ್ಯದ ಹಾದಿಯಲ್ಲಿ
ಬೆಂಗಳೂರು ಮಾರ್ಗದಿಂದ ಚಿತ್ರದುರ್ಗ, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು ಹಾಗೂ ಮಹರಾಷ್ಟ್ರ ಕಡೆಗೆ ತೆರಳುವ ಬಸ್‌ಗಳನ್ನು ಕೆಂಪೇಗೌಡ ಬಸ್ ನಿಲ್ದಾಣದಿಂದ ಪೀಣ್ಯ ಬಳಿ ಇರುವ ಬಸವೇಶ್ವರ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿ ಕೆಎಸ್‌ಆರ್‌ಟಿಸಿ ಈ ಹಿಂದೆ ನಿರ್ಧಾರ ಕೈಗೊಂಡಿತ್ತು. ಆದರೆ ತುಮಕೂರು ಕಡೆಗೆ ತೆರಳುವ ಪ್ರಯಾಣಿಕರು ಮೆಜೆಸ್ಟಿಕ್ ಮೂಲಕವೇ ಬಸ್ ಗಳನ್ನು ಹತ್ತಲು ಬಯಸುತ್ತಾರೆ ಎಂದಬ ಕಾರಣಕ್ಕಾಗಿ ಕೆಎಸ್‌ಆರ್‌ಟಿಸಿ ಮಾಡಿರುವ ಪ್ರಯೋಗವೂ ವಿಫಲವಾಗಿದೆ.

ಕೆಎಸ್‌ಆರ್‌ಟಿಸಿಗೆ ಲಾಭ ತರುವುದೇ ಸ್ಥಳಾಂತರದ ನಿರ್ಧಾರ
ರಾಜ್ಯ ಸೇರಿದಂತೆ ಹೊರ ರಾಜ್ಯದ ಹಲವು ಪ್ರಮುಖ ನಗರಗಳಿಗೆ ಬೆಂಗಳೂರಿನಿಂದ ನಿತ್ಯ ಸಾವಿರಾರು ಪ್ರಯಾಣಿಕರು ಬಸ್‌ಗಳ ಮೂಲಕ ಸಂಚರಿಸುತ್ತಾರೆ. ನಗರ ಯಾವುದೇ ಪ್ರದೇಶದಲ್ಲಿ ನೆಲೆಸಿದ್ದರೂ ಮೆಜೆಸ್ಟಿಕ್ ಗೆ ಬಂದು ಬಸ್‌ಗಳನ್ನು ಹತ್ತುವ ರೂಢಿಯೇ ಸಾರ್ವಜನಿಕರಲ್ಲಿ ಚಾಲ್ತಿಯಲ್ಲಿದೆ ಈ ಕಾರಣಕ್ಕಾಗಿ ಬೆಂಗಳೂರಿನಿಂದ ಹಲವಾರು ಖಾಸಗಿ ಬಸ್ ಗಳು ಯಾವುದೇ ನಗರಕ್ಕೂ ಮೆಜೆಸ್ಟಿಕ್ ನಿಂದಲೇ ಬಸ್ ಸಂಚಾರ ಆರಂಭಿಸಿತ್ತು. ಆನ್ ಲೈನ್ ಮೂಲಕ ಸೀಟುಗಳನ್ನು ಕಾಯ್ದಿರಿಸುವ ಪ್ರಯಾಣಿಕರು ತಮ್ಮ ಬಸ್ ಹತ್ತುವ ಆಯ್ಕೆ ಸ್ಥಳವನ್ನು ಮೆಜೆಸ್ಟಿಕ್ ಆಗಿಯೇ ಗುರುತಿಸುತ್ತಾರೆ ಈ ಕಾರಣಕ್ಕಾಗಿ ಕೆಎಸ್‌ಆರ್‌ಟಿಸಿ ನಗರದ ಬೇರೆಡೆಯಿಂದ ಬಸ್ ಸಂಚಾರ ಆರಂಭಿಸಿದರೆ ಎಲ್ಲ ಲಾಭವನನ್ನು ಖಾಸಗಿ ಬಸ್‌ಗಳು ಪಡೆದುಕೊಳ್ಳುತ್ತವೆ. ಅದರ ಬದಲೂ ತಾವೇ ಮೆಜೆಸ್ಟಿಕ್ ನಿಂದ ಸಂಚಾರ ಆರಂಭಿಸಿದರೆ ಲಾಭ ಪಡೆದುಕೊಳ್ಳಬಹುದು ಎಂದು ನಿರ್ಧಾರ ಮಾಡಿದೆ.

ಮತ್ತದೇ ಟ್ರಾಫಿಕ್ ಸಮಸ್ಯೆ
ಮೆಜೆಸ್ಟಿಕ್ ನಿಂದ ಎಲ್ಲಾ ನಗರಗಳಿಗೆ ಬಸ್‌ಗಳು ಸಂಚಾರ ಮಾಡಿದರೆ ಆ ಮಾರ್ಗದಲ್ಲಿ ಹೆಚ್ಚು ಟ್ರಾಫಿಕ್ ಉಂಟಾಗುತ್ತದೆ ಎಂಬ ಕಾರಣದಿಂದಾಗಿಯೇ ಮೈಸೂರು ಸ್ಯಾಟಲೈಟ್ ಹಾಗೂ ಪೀಣ್ಯ ಬಸ್ ನಿಲ್ದಾಣಗಳನ್ನು ತೆರೆಯಲಾಗಿತ್ತು. ಇದೀಗ ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಆತಂಕ ಮೂಡಿದೆ.











Click it and Unblock the Notifications