KSRTC: ಮಹಾ ಶಿವರಾತ್ರಿಗೆ ಕೆಎಸ್‌ಆರ್‌ಟಿಸಿಯಿಂದ 1,500 ಹೆಚ್ಚುವರಿ ಬಸ್
ಬೆಂಗಳೂರು, ಮಾರ್ಚ್ 05: ಈ ತಿಂಗಳ ಮಾರ್ಚ್ 8 ರಂದು ಮಹಾ ಶಿವರಾತ್ರಿ ಹಬ್ಬವಿದ್ದು, ಬೆಂಗಳೂರಿನಿಂದ ತಮ್ಮ ಊರುಗಳಿಗೆ ಹೋಗುವವರಿಗಾಗಿ ಕೆಎಸ್‌ಆರ್‌ಟಿಸಿ ವಿಶೇಷವಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಶಿವರಾತ್ರಿ ಹಬ್ಬ ಮತ್ತು ಸಾಲು ಸಾಲು ರಜೆಗಳು ಇರುವ ಕಾರಣ ಕೆಲಸದ ನಿಮಿತ್ತ ರಾಜಧಾನಿಯಲ್ಲಿ ವಾಸಿಸುತ್ತಿರುವವರು ತಮ್ಮ ಊರುಗಳಿಗೆ ತೆರಳಲಿದ್ದಾರೆ.
ಹೀಗಾಗಿ ಮಹಾ ಶಿವರಾತ್ರಿ ಮತ್ತು ಮುಂಬರುವ ರಜೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಮಾರ್ಚ್ 7 ಮತ್ತು 10 ರ ನಡುವೆ ಬೆಂಗಳೂರಿನಿಂದ ವಿವಿಧ ನಗರಗಳಿಗೆ 1,500 ಹೆಚ್ಚುವರಿ ಬಸ್ ಸೇವೆಗಳನ್ನು ನೀಡುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸೋಮವಾರ ತಿಳಿಸಿದೆ.

ಈ 1,500 ಹೆಚ್ಚುವರಿ ವಿಶೇಷ ಬಸ್‌ಗಳು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಕಡೆಗೆ ಚಲಿಸಲಿದೆ.
ಇದರ ಜೊತೆಗೆ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿ ಕಡೆಗೆ ವಿಶೇಷ ಬಸ್‌ಗಳು ಮೈಸೂರು ರಸ್ತೆ ಬಸ್ ನಿಲ್ದಾಣದಿಂದ (ಸ್ಯಾಟಲೈಟ್ ಬಸ್ ನಿಲ್ದಾಣ) ಕಾರ್ಯನಿರ್ವಹಿಸಲಿವೆ.
ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿರಾಪಳ್ಳಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೋಝಿಕ್ಕೋಡ್ ಮತ್ತು ತಮಿಳುನಾಡು ಮತ್ತು ಕೇರಳದ ಇತರ ಸ್ಥಳಗಳಿಗೆ ತೆರಳಲಿರುವ ಎಲ್ಲಾ ಪ್ರೀಮಿಯಂ ವಿಶೇಷ ಬಸ್‌ಗಳು ಶಾಂತಿನಗರ ಬಸ್ ನಿಲ್ದಾಣದಿಂದ ಕಾರ್ಯನಿರ್ವಹಿಸಲಿವೆ. ಇನ್ನು, ಮಾರ್ಚ್ 10 ಮತ್ತು 11 ರಂದು ಕರ್ನಾಟಕದ ವಿವಿಧ ನಗರಗಳಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳನ್ನು ಓಡಿಸಲಾಗುತ್ತದೆ.

ಹುಬ್ಬಳ್ಳಿಗೆ ವಿಶೇಷ ಬಸ್‌ಗಳು
ಶಿವರಾತ್ರಿ ಹಬ್ಬ ಮತ್ತು ರಜೆಯ ಹಿನ್ನೆಲೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 8 ರಂದು ಶುಕ್ರವಾರ ಮಹಾ ಶಿವರಾತ್ರಿ, ಮಾರ್ಚ್ 9 ರಂದು ಎರಡನೇ ಶನಿವಾರ ಹಾಗೂ ಮಾರ್ಚ್ 10 ರಂದು ಭಾನುವಾರ ಹೀಗೆ ಸಾಲು ಸಾಲು ಸಾರ್ವಜನಿಕ ರಜೆಗಳು ಬಂದಿವೆ. ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟ ನಿರೀಕ್ಷಿಸಲಾಗಿದೆ. ಅವರ ಅನುಕೂಲಕ್ಕಾಗಿ ಮಾರ್ಚ್ 7 ರಿಂದ ಮಾರ್ಚ್ 11ರ ವರೆಗೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.
ಮಾರ್ಚ್ 7 ರ ಗುರುವಾರ ಹಾಗೂ ಮಾರ್ಚ್ 8 ಶುಕ್ರವಾರ ಬೆಂಗಳೂರು, ಪುಣೆ, ಗೋವಾ ಮತ್ತಿತರ ಪ್ರಮುಖ ಸ್ಥಳಗಳಿಂದ ಹುಬ್ಬಳ್ಳಿಗೆ ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ರಜೆ ಮುಗಿಸಿ ಹಿಂದಿರುಗುವವರ ಅನುಕೂಲಕ್ಕಾಗಿ ಮಾರ್ಚ್ 10ರ ಭಾನುವಾರ ಹಾಗೂ ಮಾರ್ಚ್ 11 ರಂದು ಸೋಮವಾರ ಹುಬ್ಬಳ್ಳಿಯಿಂದ ಬೆಂಗಳೂರು, ಪುಣೆ, ಗೋವಾ, ಮಂಗಳೂರು, ವಿಜಯಪುರ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications