ಬಸವೇಶ್ವರ ಬಸ್ ನಿಲ್ದಾಣದ ಬಳಿ ಮೆಟ್ರೋ ನಿಲ್ದಾಣ ನಿರ್ಮಿಸಲು KSRTC ಮನವಿ
ಬೆಂಗಳೂರು, ಡಿಸೆಂಬರ್ 21: ನಗರದ ಬಸವೇಶ್ವರ ಬಸ್ ನಿಲ್ದಾಣದ ಬಳಿ ಮೆಟ್ರೋ ನಿಲ್ದಾಣ ನಿರ್ಮಿಸುವಂತೆ ಕೆಎಸ್‌ಆರ್‌ಟಿಸಿ ಬಿಎಂಆರ್‌ಸಿಎಲ್‌ಗೆ ಮನವಿ ಮಾಡಿದೆ. ಪೀಣ್ಯ ಬಳಿ ಇರುವ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಪೀಕ್ ಅವಧಿಯಲ್ಲಿ ಕೂಡ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚು ಮಾಡುವ ದೃಷ್ಟಿಯಿಂದ ಬಸ್ ನಿಲ್ದಾಣದ ಬಳಿ ಮೆಟ್ರೋ ನಿಲ್ದಾಣ ನಿರ್ಮಿಸುವಂತೆ ಒತ್ತಾಯಿಸಿದೆ.
2014ರಲ್ಲಿ ಬಸವೇಶ್ವರ ಬಸ್ ನಿಲ್ದಾಣವನ್ನು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು, ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಕಡಿಮೆ ಮಾಡಿ, ರಾಜ್ಯದ 20 ಜಿಲ್ಲೆಗಳಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಬಸ್ ನಿಲ್ದಾಣ ನಿರ್ಮಾಣವಾಗಿ 7 ವರ್ಷ ಕಳೆದರೂ, ಹೆಚ್ಚು ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಕೆಎಸ್‌ಆರ್‌ಟಿಸಿಗೆ ಸಾಧ್ಯವಾಗಿಲ್ಲ. ಹೀಗಾಗಿ ಬಸವೇಶ್ವರ ಬಸ್ ನಿಲ್ದಾಣದ ಬಳಿ ಮೆಟ್ರೋ ನಿಲ್ದಾಣ ನಿರ್ಮಿಸುವಂತೆ ಕೇಳಿಕೊಂಡಿದೆ.
ಈ ವಿಚಾರವಾಗಿ, ಬಿಎಂಆರ್‌ಸಿಎಲ್ ಜತೆ ಸಾಕಷ್ಟು ಸಭೆಯನ್ನು ನಡೆಸಿದ್ದೇವೆ, ಹಿಂದಿನ ನಿರ್ದೇಶಕರು ಒಪ್ಪಿಗೆ ನೀಡಿದ್ದರು, ಪೀಣ್ಯ ಮೆಟ್ರೋ ನಿಲ್ದಾಣದಿಂದ 800 ಮೀಟರ್ ಮೆಟ್ರೋ ವಿಸ್ತರಿಸಲು ಅನುಮತಿ ಕೋರಲಾಗಿತ್ತು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ್ ತಿಳಿಸಿದ್ದಾರೆ. ಬಸವೇಶ್ವರ ನಿಲ್ದಾಣದಲ್ಲಿ ಖಾಲಿ ಇರುವ ಜಾಗವನ್ನು ಬಾಡಿಗೆಗೆ ನೀಡಲಾಗುವುದು, ಅದರಿಂದ ಆದಾಯ ಹೆಚ್ಚಾಗಲಿದೆ, ಆದರೆ ಈಗಿರುವ ಕಾಂಟ್ರ್ಯಾಕ್ಟರ್ ಒಪ್ಪಂದದಿಂದ ಹಿಂದೆಸರಿದಿದ್ದಾರೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಪರ್ವೇಜ್ ಮಾತನಾಡಿ, ''ಕೆಎಸ್‌ಆರ್‌ಟಿಸಿ ನೀಡಿದ ಸಲಹೆಗೆ ನಮ್ಮ ಒಪ್ಪಿಗೆ ಇದೆ ಎಂದಿದ್ದಾರೆ. ನಾವು ಖಂಡಿತವಾಗಿಯೂ ನಮ್ಮ ಮೆಟ್ರೋವನ್ನು ವಿಸ್ತರಣೆ ಮಾಡುತ್ತೇವೆ, ಆದರೆ ಅದು ಮೇನ್ ರೂಟ್ ಆಗಿರದ ಕಾರಣ ಸ್ವಲ್ಪ ಆಲೋಚನೆ ಮಾಡಬೇಕಿದೆ ಎಂದಿದ್ದಾರೆ. ಮುಖ್ಯರಸ್ತೆಯಿಂದ 0.75 ಕಿ.ಮೀ ದೂರದಲ್ಲಿದೆ, ಮುಖ್ಯ ರಸ್ತೆಯಿಂದ ಅಷ್ಟು ದೂರವಿರುವ ಕಾರಣ ಜನರಿಗೆ ಓಡಾಟಕ್ಕೆ ಕಷ್ಟವಾಗಲಿದೆ,''.
2020ರಲ್ಲಿ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ ನಿಯಂತ್ರಿಸಲು ಪೀಣ್ಯದಲ್ಲಿರುವ ಬಸವೇಶ್ವರ ಬಸ್ ನಿಲ್ದಾಣವನ್ನೇ ಕೋವಿಡ್ ಆರೈಕೆ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ತನ್ನ ಸೋಂಕಿತ ನೌಕರರದ್ದೇ ಚಿಂತೆಯಾಗಿತ್ತು. ಹಾಗಾಗಿ ಪೀಣ್ಯದಲ್ಲಿರುವ ಬಸವೇಶ್ವರ ಬಸ್ ನಿಲ್ದಾಣವನ್ನೇ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದೆ.
ರೋಗಿಗಳನ್ನು ಕರೆತರಲು ನೌಕಕರಿಗಾಗಿ ಪ್ರತ್ಯೇಕ ಸಂಜೀವಿನಿ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಈ ಕೇಂದ್ರದಲ್ಲಿ ಎಸ್‌ಆರ್‌ಟಿಇಸಿ , ಬಿಎಂಟಿಸಿ ಈಶಾನ್ಯ ಮತ್ತು ವಾಯುವ್ಯ ಸಾರಿಗೆ ನೌಕರರರಿಗೆ ಶೇ.50 ರಷ್ಟು ಹಾಸಿಗೆ ಮೀಸಲಿಡಲಾಗಿತ್ತು.
ನೆಲ ಮಹಡಿಯಲ್ಲಿ ಮ.ತ್ತು ಮೊದಲ ಮಹಡಿಯಲ್ಲಿ 200 ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗಿತ್ತು. ಇದೀಗ ಕೊರೊನಾ ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಸಹಜ ಸ್ಥಿತಿಗೆ ಮರಳಿದೆ.
ಕೆಎಸ್ಆರ್‌ಟಿಸಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್‌ನಿಂದ ಸಂಪರ್ಕ ಸಾರಿಗೆ ಬಸ್ಸುಗಳನ್ನು ಓಡಿಸುತ್ತಿತ್ತು. ನಿಲ್ದಾಣದ ಸ್ಥಳಾಂತರವಾದ ತಕ್ಷಣ ಅದನ್ನು ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಬಸ್ ನಿಲ್ದಾಣ ಜನರಿಂದ ದೂರವಾಗುತ್ತಲೇ ಹೋಯಿತು. ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಆರಂಭವಾದ ತಕ್ಷಣ ಬಸ್ ನಿಲ್ದಾಣದ ಆವರಣ ಸುತ್ತಮುತ್ತಲು ವಾಣಿಜ್ಯ ಚಟುವಟಿಕೆ ಚುರುಕುಗೊಂಡಿದ್ದವು. ನಿಲ್ದಾಣದ ಆವರಣದಲ್ಲಿ ಮಾಲ್ ನಿರ್ಮಾಣಕ್ಕೂ ಸಿದ್ಧತೆ ನಡೆದಿತ್ತು.
ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ನಗರದಿಂದ ದೂರವಿದೆ ಎಂಬುದು ಜನರ ಬಹುದೊಡ್ಡ ಆರೋಪವಾಗಿದೆ. ಈಗ ನಮ್ಮ ಮೆಟ್ರೋ ಸೇವೆ ಆರಂಭವಾಗಿರುವುದರಿಂದ ನಿಲ್ದಾಣ ತಲುಪುವುದು ಸುಲಭವಾಗಲಿದೆ. ಆದ್ದರಿಂದ, ಬಸ್ ನಿಲ್ದಾಣವನ್ನು ಪುನರಾರಂಭಿಸಲಾಗಿತ್ತು.












Click it and Unblock the Notifications