KSRTC ಟಿಕೆಟ್ ದರ ಕಂಡು ದಂಗು; ಸರ್ಕಾರದ ಆದೇಶ ಹಂಗೂ ಹಿಂಗೂ ವಾಪಸ್!
ಬೆಂಗಳೂರು, ಮೇ.02: ದೇಶಾದ್ಯಂತ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರಿಗಳಿಗೆ ಕಳುಹಿಸಲು ಕೇಂದ್ರ ಸರ್ಕಾರವೇ ಅನುಮತಿ ನೀಡಿದೆ. ಇದರ ಮಧ್ಯೆ ಬೆಂಗಳೂರಿನಲ್ಲಿರುವ ಸಾವಿರಾರು ವಲಸೆ ಕಾರ್ಮಿಕರನ್ನು ಕಳುಹಿಸಲು ಬಸ್ ವ್ಯವಸ್ಥೆ ಮಾಡಿರುವ ಸರ್ಕಾರ ಎಡವಟ್ಟು ಮಾಡಿಕೊಂಡಿದೆ.
ಬೆಂಗಳೂರಿನಿಂದ ವಲಸೆ ಕಾರ್ಮಿಕರಳನ್ನು ಕಳುಹಿಸಲು ಬಸ್ ವ್ಯವಸ್ಥೆ ಕಲ್ಪಿಸಿರುವ ಸರ್ಕಾರವು ಕಾರ್ಮಿಕರಿಂದಲೇ ಮೂರು ಪಟ್ಟು ಟಿಕೆಟ್ ದರವನ್ನು ವಸೂಲಿ ಮಾಡುವುದಕ್ಕೆ ಮುಂದಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಹತ್ವದ ನಿರ್ಧಾರ: ಮೇ ನಾಲ್ಕರಿಂದ KSRTC ಬಸ್ ಸಂಚಾರ ಆರಂಭ
ಕೆಎಸ್ಆರ್ ಟಿಸಿ ಬಸ್ ಟಿಕೆಟ್ ದರವನ್ನು ಕಂಡ ವಲಸೆ ಕಾರ್ಮಿಕರು ಆಘಾತಕ್ಕೊಳಗಾಗಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸರ್ಕಾರವು ಕಾರ್ಮಿಕರಿಂದ ವಸೂಲಿಗೆ ಇಳಿದಿದೆಯಾ ಎಂದು ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.

ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಟಿಕೆಟ್ ಬೆಲೆ:
ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಒಂದು ಕಿಲೋ ಮೀಟರ್ ಸಂಚಾರಕ್ಕೆ 39 ರೂಪಾಯಿ ಫಿಕ್ಸ್ ಮಾಡಿದಂತಾಗಿದೆ. ಬೆಂಗಳೂರಿನಿಂದ ಹೊರಟ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಹೋಗಲು ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ನಿಗದಿಯಾಗಿರುವ ಟಿಕೆಟ್ ದರವನ್ನು ನೋಡಿ ದಂಗಾಗಿದ್ದಾರೆ. ಉತ್ತರ ಕರ್ನಾಟಕದ ಮಂದಿ ಟಿಕೆಟ್ ದರವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
- ಬೀದರ್ - 1,984 ರೂಪಾಯಿ
- ಬೆಳಗಾವಿ - 1,478 ರೂಪಾಯಿ
- ಕಲಬುರಗಿ - 1,619 ರೂಪಾಯಿ
- ಬಾಗಲಕೋಟೆ - 1,311 ರೂಪಾಯಿ
- ಗದಗ - 1,070 ರೂಪಾಯಿ
- ಬಳ್ಳಾರಿ - 884 ರೂಪಾಯಿ

ದಕ್ಷಿಣ ಭಾಗದಲ್ಲಿರುವ ಜಿಲ್ಲೆಗಳಿಗೆ ಟಿಕೆಟ್ ಬೆಲೆ:
ಬೆಂಗಳೂರಿನಿಂದ ರಾಜ್ಯದ ದಕ್ಷಿಣ ಭಾಗದಲ್ಲಿರುವ ಜಿಲ್ಲೆಗಳಿಗೆ ತೆರಳುವುದಕ್ಕೂ ಕೆಎಸ್ಆರ್ ಟಿಸಿ ಬಸ್ ಟಿಕೆಟ್ ದರವೇನೂ ಕಡಿಮೆಯಿಲ್ಲ. ಒಂದು ರೂಪಾಯಿಗೆ ಮೂರು ರೂಪಾಯಿ ಟಿಕೆಟ್ ದರವನ್ನು ನಿಗದಿಗೊಳಿಸಲಾಗಿದೆ.
ದಕ್ಷಿಣ ಕನ್ನಡ - 985 ರೂಪಾಯಿ
ಕೊಡಗು - 737 ರೂಪಾಯಿ
ಚಿಕ್ಕಮಗಳೂರು - 695 ರೂಪಾಯಿ
ಹಾಸನ - 538 ರೂಪಾಯಿ
ಮೈಸೂರು - 390 ರೂಪಾಯಿ

ಮತ್ತೊಮ್ಮೆ ಉಲ್ಟಾ ಹೊಡೆದ ರಾಜ್ಯ ಸರ್ಕಾರ
ವಲಸೆ ಕಾರ್ಮಿಕರನ್ನು ರವಾನಿಸಲು 100ಕ್ಕಿಂತ ಹೆಚ್ಚು ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಎಲ್ಲ ಬಸ್ ಗಳ ಟಿಕೆಟ್ ದರವನ್ನು ನಿಗದಿಗೊಳಿಸಿದ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕರು ಮಾತಿನ ಛಾಟಿ ಬೀಸಿದರು. ತಕ್ಷಣ ಎಚ್ಚೆತ್ತ ರಾಜ್ಯ ಸರ್ಕಾರವು ಮೂಲ ದರವನ್ನು ನಿಗದಿಪಡಿಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.

ಕೆಂಪೇಗೌಡ ಬಸ್ ನಿಲ್ದಾಣದಿಂದ ಬಸ್ ಗಳ ನಿರ್ಗಮನ
ಮೇ.03ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೂ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಕೆಂಪು ವಲಯಗಳನ್ನು ಹೊರತುಪಡಿಸಿ ಎಲ್ಲ ಜಿಲ್ಲೆಗಳಿಗೂ ಬಸ್ ಗಳನ್ನು ಬಿಡಲಾಗುತ್ತದೆ ಎಂದು ತಿಳಿದು ಬಂದಿದೆ.