Karnataka Election : ಬಸ್ ಇಲ್ಲದೆ ಜನರ ಪರದಾಟ: ಹೆಚ್ಚುವರಿ ಬಸ್ ವ್ಯವಸ್ಥೆ: ಖಾಸಗಿ ಬಸ್ ದರ ದುಪ್ಪಟ್ಟು
ಬೆಂಗಳೂರು, ಮೇ 9: ತಪ್ಪದೇ ಮತದಾನ ಮಾಡಿ, ಜವಾಬ್ದಾರಿ ಪ್ರದರ್ಶಿಸಿ ಅಂತಾ ದೊಡ್ಡದಾಗಿ ಜಾಹೀರಾತು ಕೊಡ್ತಾರೆ, ಆದ್ರೆ ಊರಿಗ್ ಹೋಗಿ ಮತ ಹಾಕೋಕೆ ಸರಿಯಾದ ಬಸ್ ವ್ಯವಸ್ಥೆನೆ ಇಲ್ಲ ಅಂದ್ರೆ ನಾವೇನ್ ಮಾಡದು ಹೇಳಿ ಅಂತಾ ನೂರಾರು ಜನ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಅಧಿಕಾರಿಗಳನ್ನು ಪ್ರಶ್ನೆ ಮಾಡ್ತಿದ್ರು.
ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ, ಎಲ್ಲಾ 224 ಕ್ಷೇತ್ರಗಳಲ್ಲಿ ಒಂದೇ ಬಾರಿಗೆ ಮತದಾನ ನಡೆಯಲಿದ್ದು, ಚುನಾವಣೆ ಕೆಲಸಕ್ಕಾಗಿ ಸಾವಿರಾರು ಬಸ್‌ಗಳನ್ನು ಚುನಾವಣಾ ಆಯೋಗ ಬುಕ್ ಮಾಡಿಕೊಂಡಿದೆ. ಇದೇ ಕಾರಣಕ್ಕೆ ಕೆಎಸ್‌ಆರ್ ಟಿಸಿ ಬಸ್‌ಗಳ ಓಡಾಟ ಕಡಿಮೆಯಾಗಿದ್ದು, ಮತದಾನ ಮಾಡಲು ಊರಿಗೆ ಹೋಗುವವರು ಗಂಟೆಗಟ್ಟಲೆ ಕಾಯುವಂತಾಯಿತು. ಇದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಅಲ್ಲದೆ ಪರಿಸ್ಥಿತಿಯ ಲಾಭ ಪಡೆದ ಖಾಸಗಿ ಬಸ್‌ಗಳು ಕೂಡ ಟಿಕೆಟ್ ದರವನ್ನು ದುಪ್ಪಟ್ಟು ಮಾಡಿದ್ದು, ಜನ ಅನಿವಾರ್ಯವಾಗಿ ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ಆಶ್ರಯಿಸುವಂತಾಗಿದೆ. ಬಸ್ ಕೊರತೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದಾರೆ.
ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲಾಕೇಂದ್ರಗಳಿಗೆ ತೆರಳಲು ಬಸ್‌ಗಳ ಸೌಲಭ್ಯವಿಲ್ಲದೆ ಸಾರ್ವಜನಿಕರು ಕಾಯುವಂತಾಯಿತು. ತುಮಕೂರು, ಶಿರಾ, ಹಿರಿಯೂರು, ಚಳ್ಳಕೆರೆ, ಬಳ್ಳಾರಿ ಭಾಗಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ತುಮಕೂರು ಜಿಲ್ಲಾ ಕೇಂದ್ರಕ್ಕೆ ಬಿಎಂಟಿಸಿ ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದು, ಸದ್ಯ ಪ್ರಯಾಣಿಕರು ನಿಂತುಕೊಂಡಾದರೂ ಊರು ಸೇರಿಕೊಳ್ಳೋಣ ಎಂದು ಪ್ರಯಾಣ ಮಾಡುತ್ತಿದ್ದಾರೆ.
ಸಂಜೆಯಾದಂತೆ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ, ಕೆಎಸ್ಆರ್ ಟಿಸಿ ಅಧಿಕಾರಿಗಳು ಈ ಅವ್ಯವಸ್ಥೆಯನ್ನು ಹೇಗೆ ಸರಿಪಡಿಸುತ್ತಾರೆ ಎಂದು ನೋಡಬೇಕಿದೆ.
ಹೆಚ್ಚುವರಿ ರೈಲುಗಳ ವ್ಯವಸ್ಥೆ
ಮತದಾನಕ್ಕೆ ತೆರಳಲು ಅನುಕೂಲವಾಗುವಂತೆ ನೈಋತ್ಯ ರೈಲ್ವೆ ಮೂರು ಹೆಚ್ಚುವರಿ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಬೆಂಗಳೂರಿನಿಂದ ಮುರುಡೇಶ್ವರ, ಬೀದರ್ ಮತ್ತು ಬೆಳಗಾವಿಗೆ ಹೆಚ್ಚುವರಿ ರೈಲುಗಳು ಸಂಚರಿಸಲಿವೆ. ಪ್ರತಿನಿತ್ಯ ಸಂಚರಿಸುವ ರೈಲುಗಳಿಗೆ ಕೂಡ ಹೆಚ್ಚುವರಿ ಬೋಗಿಗಳ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications