ತಮಿಳುನಾಡಿಗೆ ತೆರಳುವ ಕೆಎಸ್ಆರ್‌ಟಿಸಿ ಬಸ್ ಸಂಚಾರ ಬಂದ್
ಬೆಂಗಳೂರು, ಜೂ. 02 : ತಮಿಳುನಾಡಿಗೆ ತೆರಳುವ ಕೆಎಸ್ಆರ್‌ಟಿಸಿ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಜಯಲಲಿತಾ ವಿರುದ್ಧ ಮೇಲ್ಮನವಿ ಸಲ್ಲಿಸಲು ಕರ್ನಾಟಕ ತೀರ್ಮಾನ ಕೈಗೊಂಡ ಹಿನ್ನಲೆಯಲ್ಲಿ ಬೆಂಗಳೂರಿನಿಂದ ತೆರಳಬೇಕಿದ್ದ 469 ಬಸ್ಸುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ತಮಿಳುನಾಡಿಗೆ ತೆರಳಬೇಕಿದ್ದ ಬಸ್‌ಗಳನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆ. ಚಾಮರಾಜನಗರ ಸೇರಿದಂತೆ ಬೇರೆ ಜಿಲ್ಲೆಗಳಿಂದ ತೆರಳಬೇಕಿದ್ದ ಬಸ್ಸುಗಳ ಸಂಚಾರವೂ ಮಂಗಳವಾರ ಸ್ಥಗಿತಗೊಂಡಿದೆ. [ಜಯಾ ವಿರುದ್ಧ ಮೇಲ್ಮನವಿ ಸಲ್ಲಿಸಲು 7 ಕಾರಣಗಳು!]

ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಶಾಂತಿನಗರದಿಂದ ಪ್ರತಿದಿನ 469 ಬಸ್ಸುಗಳು ತಮಿಳುನಾಡಿಗೆ ಸಂಚರಿಸುತ್ತಿದ್ದವು. ಆದರೆ, ಮಂಗಳವಾರ ಬೆಳಗ್ಗೆ ಯಾವುದೇ ಬಸ್ಸುಗಳು ನಿಲ್ದಾಣದಿಂದ ಹೊರಬಂದಿಲ್ಲ.[ಮೇಲ್ಮನವಿ ಸಲ್ಲಿಸಲು ನಿರ್ಧಾರ]
ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಇದಕ್ಕೆ ತಮಿಳುನಾಡಿಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಬಹುದು ಎಂದು ಸಂಚಾರ ಸ್ಥಗಿತಗೊಳಿಸಲಾಗಿದೆ.
ರಾಜಹಂಸ ಸೇರಿದಂತೆ ಐಷಾರಾಮಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಆದರೆ, ಕೆಲವು ಸಾಮಾನ್ಯ ಬಸ್ಸುಗಳು ಗಡಿಭಾಗವಾದ ಚಾಮರಾಜನಗರ, ಕೊಳ್ಳೆಗಾಲ, ಗುಂಡ್ಲುಪೇಟೆವರೆಗೆ ಮಾತ್ರ ಸಂಚಾರ ನಡೆಸಿ ವಾಪಸ್ ಬರುತ್ತಿದೆ. ಈ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡಿಯೇ ಅವರನ್ನು ಕರೆದುಕೊಂಡು ಹೋಗಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಸ್ ಸಂಚಾರವನ್ನು ಪುನಃ ಆರಂಭಿಸುವ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಇಂದು ಸಂಜೆ ಈ ಕುರಿತು ನಿರ್ಧಾರ ತೆಗೆದುಕೊಂಡು ಬುಧವಾರದ ಪರಿಸ್ಥಿತಿ ಅವಲೋಕಿಸಿ ಸಂಚಾರ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications