ಪೀಣ್ಯದಿಂದ ಕಣ್ಣೂರು, ಕಲ್ಲಿಕೋಟೆಗೆ ರಾಜಹಂಸ ಸೇವೆ
ಬೆಂಗಳೂರು, ಜು.01 : ಕೆಎಸ್ಆರ್‌ಟಿಸಿ ಪೀಣ್ಯದಲ್ಲಿನ ಬಸವೇಶ್ವರ ಬಸ್ ನಿಲ್ದಾಣದಿಂದ ಕಣ್ಣೂರು ಮತ್ತು ಕಲ್ಲಿಕೋಟೆಗಳಿಗೆ ರಾಜಹಂಸ ಬಸ್ ಸೇವೆಗಳನ್ನು ಆರಂಭಿಸಿದೆ. ಜುಲೈ 1ರಿಂದ ಈ ಬಸ್ ಸೇವೆಗಳು ಆರಂಭವಾಗಲಿವೆ.
ಪೀಣ್ಯದಲ್ಲಿನ ಬಸವೇಶ್ವರ ಬಸ್ ನಿಲ್ದಾಣದಿಂದ ಮೊದಲು ಉತ್ತರ ಕರ್ನಾಟಕ ಭಾಗದ ಬಸ್ಸುಗಳು ಸಂಚಾರ ನಡೆಸುತ್ತಿದ್ದವು. ನಂತರ ನಷ್ಟದ ನೆಪ ಹೇಳಿದ ಇಲಾಖೆ, ನಿಲ್ದಾಣವನ್ನು ಮೆಜೆಸ್ಟಿಕ್‌ಗೆ ಸ್ಥಳಾಂತರ ಮಾಡಿತ್ತು. ಈಗ ಪೀಣ್ಯದಿಂದ ಬಸ್ ಸೇವೆ ಆರಂಭಿಸಿದೆ. [ಪೀಣ್ಯ ನಿಲ್ದಾಣ ಸ್ಥಳಾಂತರ]

ಕಲ್ಲಿಕೋಟೆ ಮತ್ತು ಕಣ್ಣೂರಿಗೆ ಜುಲೈ 1ರಿಂದ ರಾಜಹಂಸ ಸೇವೆ ಆರಂಭವಾಗಲಿದೆ. ಪೀಣ್ಯ-ಕಣ್ಣೂರು ಪ್ರಯಾಣ ದರ 524 ರೂ.. ಬಸವೇಶ್ವರ ಬಸ್ ನಿಲ್ದಾಣದಿಂದ ಬಸ್ ರಾತ್ರಿ 8ಗಂಟೆಗೆ ಹೊರಡಲಿದ್ದು, ಬೆಳಗ್ಗೆ 5ಕ್ಕೆ ಕಣ್ಣೂರು ತಲುಪಲಿದೆ. ಕಣ್ಣೂರಿನಿಂದ ರಾತ್ರಿ 8.30ಕ್ಕೆ ಹೊರಟು ಮರುದಿನ ಬೆಳಗ್ಗೆ 5.15ಕ್ಕೆ ಪೀಣ್ಯ ತಲುಪಲಿದೆ. [ಪೀಣ್ಯ ನಿಲ್ದಾಣ ಸ್ಥಳಾಂತರ : ಸಚಿವರು ಹೇಳುವುದೇನು?]
ಪೀಣ್ಯ-ಕಲ್ಲಿಕೋಟೆ ನಡುವಿನ ಪ್ರಯಾಣದರ 507 ರೂ. ಬಸವೇಶ್ವರ ಬಸ್ ನಿಲ್ದಾಣದಿಂದ ರಾತ್ರಿ 9ಕ್ಕೆ ಹೊರಡುವ ಬಸ್ ಬೆಳಗ್ಗೆ 8ಕ್ಕೆ ಕಲ್ಲಿಕೋಟೆ ತಲುಪಲಿದೆ. ಕಲ್ಲಿಕೋಟೆಯಿಂದ ರಾತ್ರಿ 10ಕ್ಕೆ ಹೊರಡುವ ಬಸ್ ಪೀಣ್ಯಕ್ಕೆ ಬೆಳಗ್ಗೆ 7.30ಕ್ಕೆ ತಲುಪಲಿದೆ. ಹೆಚ್ಚಿನ ಮಾಹಿತಿಗಾಗಿ 080-44554422 ಸಂಖ್ಯೆಗೆ ಕರೆ ಮಾಡಬಹುದು.
ನಿಲ್ದಾಣ ಸ್ಥಳಾಂತರವಾಗಿತ್ತು : ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಿಂದ ಸಂಚಾರ ನಡೆಸುತ್ತಿದ್ದ ಉತ್ತರ ಕರ್ನಾಟಕ ಭಾಗದ ಬಸ್ಸುಗಳನ್ನು 2015ರ ಮಾರ್ಚ್ 1ರಿಂದಲೇ ಜಾರಿಗೆ ಬರುವಂತೆ ಮೆಜೆಸ್ಟಿಕ್‌ಗೆ ಸ್ಥಳಾಂತರ ಮಾಡಲಾಗಿತ್ತು. ಪೀಣ್ಯದಿಂದ 298 ವೇಗದೂತ ಬಸ್ಸುಗಳು ಸಂಚಾರ ನಡೆಸುತ್ತಿದ್ದವು.
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಪೀಣ್ಯದಲ್ಲಿ ಬಸವೇಶ್ವರ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಸೆಪ್ಟೆಂಬರ್ 10ರಿಂದ ಬಸವೇಶ್ವರ ಬಸ್ ನಿಲ್ದಾಣ ಆರಂಭವಾಗಿತ್ತು. ಐದು ತಿಂಗಳ ನಂತರ ನಿಲ್ದಾಣಗಳನ್ನು ಸ್ಥಳಾಂತರ ಮಾಡಲಾಗಿತ್ತು.












Click it and Unblock the Notifications