ಬೆಂಗಳೂರಲ್ಲಿ ನಿರಂತರ ಅಗ್ನಿ ಅವಘಡ: ಸಚಿವ ಕೃಷ್ಣ ಬೈರೇಗೌಡ ಸಭೆಯಲ್ಲಿ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 30: ಬೆಂಗಳೂರಿನಲ್ಲಿ ಅಗ್ನಿ ದುರಂತಗಳು ಮತ್ತು ಅದರಿಂದ ಪ್ರಾಣಾಪಾಯ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬೆಳವಣಿಗೆ ಜನಸಾಮಾನ್ಯರಲ್ಲಿ ಆತಂಕ ಉಂಟಾಗುವಂತೆ ಮಾಡಿದೆ. ಈ ನಿಮಿತ್ತ ಮುಂದಿನ ದಿನಗಳಲ್ಲಿ ನಗರದಲ್ಲಿ ಯಾವುದೇ ಅಗ್ನಿ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಅಗ್ನಿ ಶಾಮಕ ದಳವನ್ನು ಉನ್ನತೀಕರಣಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ವಿಕಾಸಸೌಧದಲ್ಲಿ ಸೋಮವಾರ ಅಗ್ನಿ ಶಾಮಕದಳ ಪೊಲೀಸ್ ಮಹಾ ನಿರ್ದೇಶಕ ಕಮಲ್ ಪಂತ್ ಅವರೊಂದಿಗೆ ಸಭೆ ನಡೆಸಿ ಕಂದಾಯ ಸಚಿವರು ಚರ್ಚಿಸಿದರು. ಕಳೆದ 20 ದಿನಗಳ ಅವಧಿಯಲ್ಲಿ ಬೆಂಗಳೂರಿನಲ್ಲೇ ಮೂರು ಕಡೆಗಳಲ್ಲಿ ಅಗ್ನಿ ಅನಾಹುತಗಳು ಸಂಭವಿಸಿವೆ. ಅಗ್ನಿ ದುರಂತಗಳಿಂದ ಜನರೂ ಭಯಭೀತರಾಗಿದ್ದಾರೆ. ಹೀಗಾಗಿ ನಗರ ಭಾಗಗಳೂ ಸೇರಿದಂತೆ ರಾಜ್ಯಾದ್ಯಂತ ಅಗ್ನಿ ದುರಂತಗಳು ಸಂಭವಿಸಿದಂತೆ ಅಗ್ನಿಶಾಮಕ ದಳ ತಡೆಯಲು ಸೂಕ್ತ ಕ್ರವಹಿಸಿ ಎಂದು ಸಚಿವರು ಸಲಹೆ ನೀಡಿದರು.

ನಗರದ ಅತ್ತಿಬೆಲೆ ಪಠಾಕಿ ಗೋದಾಮಿನ ದುರಂತದಲ್ಲಿ ತಮಿಳುನಾಡು ಮೂಲದ ರಾಜೇಶ್, ದಿನೇಶ್, ಸಂತೋಷ್ ಕುಮಾರ್, ನಿತೀಶ್, ವೇದಪ್ಪನ್, ಆದಿಕೇಶವನ್, ವಿಜಯರಾಘವನ್, ಆಕಾಶ್ ರಾಜ್, ಗಿರಿ, ಇಂಬರ್ತಿ, ಮುನಿವೇಲ್, ಪ್ರಕಾಶರಾಜ್, ಆಂಥೋನಿ ಪೌಲಾರಾಜ್ ಸೇರಿ 13 ಕಾರ್ಮಿಕರು ಮೃತಪಟ್ಟಿದ್ದರು.
ಅವಘಡ ಉಂಟಾಗದಂತೆ ತಡೆಗೆ ಚಿಂತಿಸಿ
ಇದೇ ತಿಂಗಳು ಅಕ್ಟೋಬರ್ 19 ರಂದು ಕೋರಮಂಗಲದ ಮಡ್‌ಪೈಪ್ ರೆಸ್ಟೋರೆಂಟ್ ನಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿತ್ತು. ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದರು. ಇದರ ಬೆನ್ನಿಗೆ ಕಳೆದ ಶನಿವಾರ ಹಜ್ ಭವನವೂ ಬೆಂಕಿಗೆ ಆಹುತಿಯಾಗಿದ್ದು, ಅಲ್ಲಿ ಕನಿಷ್ಟ 3 ಕೋಟಿ ನಷ್ಟ ಉಂಟಾಗಿದೆ.

ನಗರದಲ್ಲಿ ಇಂತಹ ಅಗ್ನಿ ದುರಂತಗಳಿಗೆ ಕಾರಣವೇನು? ಇದನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳೇನು? ಎಂಬ ಕುರಿತು ಅಗ್ನಿಶಾಮಕ ದಳ ಚಿಂತನೆ ನಡೆಸಬೇಕಿದೆ ಎಂದು ಅವರು ಹೇಳಿದರು.
ಕಟ್ಟಡ ನಿರ್ಮಾಣ ವೇಳೆ ಪರಿಶೀಲಿಸಿ ಅನುಮತಿ
ಅಗ್ನಿಶಾಮಕ ದಳದ ಉನ್ನತೀಕರಣಗಳ ಬಗ್ಗೆಯೂ ಗಮನ ಹರಿಸಬೇಕಿದೆ. ಇದರ ಜೊತೆಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವಾಗಲೇ ಅಗ್ನಿ ದುರಂತ ತಡೆಗೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆಯೂ ಪರಿಶೀಲಿಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಅಗ್ನಿಶಾಮಕ ದಳ ಪೊಲೀಸ್ ಮಹಾ ನಿರ್ದೇಶಕರಾದ ಕಮಲ್ ಪಂತ್ ಅವರು ಅಗ್ನಿಶಾಮಕ ದಳದ ಉನ್ನತೀಕರಣ ಹಾಗೂ ಹೊಸ ಅಗ್ನಿಶಾಮಕ ದಳಗಳನ್ನು ಸ್ಥಾಪಿಸುವ ಕುರಿತ ಕ್ರಿಯಾ ಯೋಜನೆ ಮಂಡಿಸಿದರು. ಉಡುಪಿ ಜಿಲ್ಲೆಯ ಮಣಿಪಾಲ್, ದಾವಣಗೆರೆಯ- ನ್ಯಾಮತಿ, ವಿಜಯಪುರ ಜಿಲ್ಲೆಯ ನಿಡಗುಂದಿ-ಬಬಲೇಶ್ವರ್, ರಾಯಚೂರಿನ ಮಸ್ಕಿ, ಬೆಳಗಾವಿಯ ಮುದಲಗಿ, ಬಳ್ಳಾರಿಯ ಕಂಪ್ಲಿ ಹಾಗೂ ಕಲಬುರಗಿ ಷಹಾಬಾದ್ ಭಾಗದಲ್ಲಿ ನೂತನ ಅಗ್ನಿಶಾಮಕ ದಳ ಸ್ಥಾಪಿಸುವ ಸಂಬಂಧ ಯೋಜನೆ ಅವರು ಮಂಡಿಸಿದರು.
ಇನ್ನೂ ಬೆಂಗಳೂರು ಸೇರಿದಂತೆ ನಗರ ಭಾಗದಲ್ಲಿ ಸಂಭವಿಸುತ್ತಿರುವ ಅಗ್ನಿ ಅವಘಡಗಳ ತಡೆಗೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು? ಎಂಬ ಕುರಿತು ಶೀಘ್ರದಲ್ಲೇ ಇಲಾಖೆಗೆ ವರದಿ ನೀಡುವುದಾಗಿಯೂ ಅವರು ಹೇಳಿದರು.
ಸಭೆಯಲ್ಲಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಸೇರಿದಂತೆ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications