ಕೆ.ಆರ್.ಪುರಂ ಕಾಂಗ್ರೆಸ್ ಮುಖಂಡನ ಗೂಂಡಾಗಿರಿ
Recommended Video

ಬೆಂಗಳೂರು, ಫೆಬ್ರವರಿ 20: ಕಾಂಗ್ರೆಸ್ ಪ್ರಭಾವಿ ಮುಖಂಡನೊಬ್ಬ ಕೆ.ಆರ್.ಪುರಂ ಬಿಬಿಎಂಪಿ ಕಚೇರಿಯಲ್ಲಿ ಗೂಂಡಾಗಿರಿ ಮೆರೆದ ವಿಡಿಯೊ ಮೂರು ದಿನಗಳ ಬಳಿಕ ವೈರಲ್ ಆಗಿದೆ.
ಕೆ.ಆರ್.ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ ಎಂಬಾತ ಮೂರು ದಿನಗಳ ಹಿಂದೆ (ಫೆ.16) ಬಿಬಿಎಂಪಿ ಕಚೇರಿಗೆ ತೆರಳಿ ಅಧಿಕಾರಿಗಳ ಎದುರಿಗೆಯೇ ಅಲ್ಲಿನ ಪೀಠೋಪಕರಣಗಳು, ಬೀರು ಮೇಲೆಲ್ಲಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನ ಮಾಡಿದ್ದಾರೆ.
ಅಕ್ರಮ ಖಾತೆ ಮಾಡಿಕೊಡಲು ನಾರಾಯಣಸ್ವಾಮಿ ಕೆ.ಆರ್.ಪುರಂ ಬಿಬಿಎಂಪಿ ಅಧಿಕಾರಿಗೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಇದಕ್ಕೆ ಅಧಿಕಾರಿಗಳು ನಿರಾಕರಿಸಿದಾಗ ಕಚೇರಿಗೆ ನುಗ್ಗಿದ ಈ ರೌಡಿ ಮುಖಂಡ ಕಚೇರಿಯ ಪೀಠೋಪಕರಣಗಳಿಗೆ, ಬೀರುಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾರೆ.

ಕಚೇರಿಯ ಏ.ಆರ್.ಒ ಮತ್ತು ಇತರ ಅಧಿಕಾರಿಗಳಿಗೆ ಬೆದರಿಕೆಯನ್ನೂ ಹಾಕಿದ ನಾರಾಯಣಸ್ವಾಮಿ, 'ಎಲ್ಲರೂ ಕಚೇರಿ ಬಿಟ್ಟು ಹೊರಗೆ ಹೋಗಿ, ಕಚೇರಿಯಲ್ಲಿ ನನಗೆ ಕೆಲಸ ಇದೆ' ಎಂದು ಬೆದರಿಸುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ.
ಇದಕ್ಕೆ ಬೆದರಿದ ಕಚೇರಿಯ ಎಆರ್‌ಒ ಚೆಂಗಲ್ ರಾಯಪ್ಪ ಮಹದೇವಪುರ ಕಚೇರಿಗೆ ಒತ್ತಾಯದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆದರೆ ಈ ವರೆಗೂ ನಾರಾಯಣಸ್ವಾಮಿ ಅವರ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ನಾರಾಯಣಸ್ವಾಮಿ, ಶಾಸಕ ಭೈರತಿ ಬಸವರಾಜು ಅವರಿಗೆ ಆಪ್ತ ಎನ್ನಲಾಗಿದ್ದು, ಸಿದ್ದರಾಮಯ್ಯ ಅವರೊಂದಿಗೂ ಕೆಲವು ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನ ಸದಸ್ಯರ ಗೂಂಡಾ ಗಿರಿ ಹೆಚ್ಚಾಗುತ್ತಿದ್ದು, ವ್ಯಕ್ತಿಯೊಬ್ಬನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲ್ಲಪಾಡ್ ನಿನ್ನೆಯಷ್ಟೆ ಪೊಲೀಸರಿಗೆ ಶರಣಾಗಿದ್ದಾರೆ. ಈಗ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಗೂಂಡಾಗಿರಿ ಬೆಳಕಿಗೆ ಬಂದಿದೆ.












Click it and Unblock the Notifications