KPSC ಹಗರಣದ ದಾಖಲೆಗಳಿಗೆ ಉತ್ತರಿಸಿ, ವಿಷಯಾಂತರ ಮಾಡಬೇಡಿ: ಡಿಕೆ ಶಿವಕುಮಾರ್‌ಗೆ ಜೆಡಿಎಸ್ ತೀಕ್ಷ್ಣ ಟೀಕೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವಿರುದ್ಧ ಜೆಡಿಎಸ್ ಕಿಡಿ ಕಾರಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಷಯಾಂತರ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು! ಎಂದು ದೂರಿದೆ.
ಮಂಗಳವಾರ ಟ್ವಿಟ್ ಮೂಲಕ ಆಕ್ರೋಶ ಹೊರ ಹಾಕಿರುವ ಜೆಡಿಎಸ್, ಎಚ್.ಡಿ.ಕುಮಾರಸ್ವಾಮಿ ಅವರು ಕೆಪಿಎಸ್‌ಸಿ ಹಗರಣದ ದಾಖಲೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರೆ, ಅದಕ್ಕೆ ಉತ್ತರಿಸುವ ಯೋಗ್ಯತೆ ಇಲ್ಲದವರು ಇದನ್ನೊಂದು ತಂತ್ರಗಾರಿಕೆ ಎಂದು ಕಥೆ ಕಟ್ಟುತ್ತಿದ್ದಾರೆ ಎಂದು ತಿಳಿಸಿದೆ.

ಡಿಕೆ ಶಿವಕುಮಾರ್ ಅವರೇ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಅಕ್ರಮ ನೇಮಕಾತಿ, ಓಎಂಆರ್ ಶೀಟ್ ತಿದ್ದಿ ದುಡ್ಡು ಕೊಟ್ಟವರಿಗೆ ನೇಮಕಾತಿ ಆದೇಶ ಪತ್ರ ಕೊಟ್ಟು ಅಂದಿನ ಆರ್‍ಡಿಪಿಆರ್ ಮಂತ್ರಿ, ಈಗಿನ ಗೃಹ ಸಚಿವ ಕೆಪಿಎಸ್‌ಸಿ ಭ್ರಷ್ಟಾಚಾರದ ಸೂತ್ರಧಾರರು. ಕೆಪಿಎಸ್‌ಸಿ ಹಗರಣದ ಬಗ್ಗೆ ಕೇಳಿದರೆ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಬದಲು, ಕೆಪಿಎಸ್‌ಸಿ ಯನ್ನೇ ಮುಚ್ಚುತ್ತೇವೆ ಎಂದು ನೀವು ಭಂಡತನ ತೋರಿದಾಗಲೇ ನಿಮ್ಮ ಭ್ರಷ್ಟ ಸರ್ಕಾರದ ಯೋಗ್ಯತೆ ನಾಡಿನ ಜನತೆಗೆ ಅರ್ಥವಾಗಿದೆ ಎಂದು ವಾಗ್ದಾಳಿ ನಡೆಸಿದೆ.
ಡಿಕೆ ಶಿವಕುಮಾರ್ ಪಲಾಯನ!
ನಿಮ್ಮ ಸರ್ಕಾರದ ತಪ್ಪುಗಳನ್ನು ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವುದು ಹೇಡಿತನ! ಕೆಪಿಎಸ್‌ಸಿ ಕರ್ಮಕಾಂಡದ ಬಗ್ಗೆ ಕುಮಾರಸ್ವಾಮಿಯವರು ಎಲ್ಲಾ ದಾಖಲೆ ಸಮೇತ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡಿದ್ದಾರೆ. ಆದರೂ ಕುಮಾರಸ್ವಾಮಿ ಅವರ ತಂತ್ರ, ಯಡಿಯೂರಪ್ಪ ಅವರನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ವಿಷಯಾಂತರ ಮಾಡುತ್ತಿರುವುದು ಇದು ಸಿಎಂ ಡಿಕೆ ಶಿವಕುಮಾರ್ ಪಲಾಯನವಾದ ಎಂಬುದು ಸಾಬೀತಾಗಿದೆ ಎಂದು ಲೇವಡಿ ಮಾಡಿದೆ.
ಇಂತಹ ಭ್ರಷ್ಟರ ಆಡಳಿತದಲ್ಲಿ ನಾಡಿನ ಯುವಜನತೆ ಯಾವುದೇ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳೇ ಎಚ್ಚರ, ಇದು ಕೇವಲ ಸುಳ್ಳು ಭರವಸೆಗಳನ್ನಷ್ಟೇ ಮಾರುವ ಸರ್ಕಾರ! ಎಂದು ಜೆಡಿಎಸ್ ಅಸಮಾಧಾನ ಹೊರ ಹಾಕಿದೆ.
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಸಂಬಂಧ ಅಧ್ಯಕ್ಷರು, ಅಧಿಕಾರಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಈ ಬಗ್ಗೆ ವಿಪಕ್ಷ ನಾಯಕರಾದ ಆರ್.ಅಶೋಕ್, ವಿಜಯೇಂದ್ರ, ಎಚ್‌ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದರು. ಸರ್ಕಾರದ ಹಣ ಹೊಡೆದು ಸೀಟು ಮಾರಿಕೊಂಡಿದೆ ಎಂದೆಲ್ಲ ದೂರಿದ್ದರು. ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳಾಗಿದ್ದು, ಉಭಯ ಪಕ್ಷದ ನಾಯಕರು ಸರ್ಕಾರ, ಡಿಕೆ ಶಿವಕುಮಾರ್ ಮೇಲೆ ಮುಗಿಬಿದ್ದಿದ್ದಾರೆ.
ಡಿಕೆಶಿ ವಿಡಿಯೋ ಕ್ಲಿಪ್ ಶೇರ್ ಮಾಡಿದ ಜೆಡಿಎಸ್
ಸೋಮವಾರ ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಎದುರಾದ ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಶ್ನೆಗೆ ಉತ್ತರಿಸುವಾಗ ಅವರು, ಇದೆಲ್ಲ ಎಚ್.ಡಿ.ಕುಮಾರಸ್ವಾಮಿ ಸ್ಟಾಟರ್ಜಿ, ಅವರು ಯಡಿಯೂರಪ್ಪ ಅವರನ್ನು, ಮತ್ತವರ ಮಕ್ಕಳನ್ನು ಬೀಟ್ ಮಾಡಬೇಕೆಂದು ಹೀಗೆ ಮಾತನಾಡುತ್ತಿದ್ದಾರೆ' ಎಂದಿರುವ ಡಿಕೆಶಿಯವರ ವಿಡಿಯೋ ಕ್ಲಿಪ್ ಹಂಚಿಕೊಂಡು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.


Click it and Unblock the Notifications
