ಬೆಂಗ್ಳೂರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಆಗಮನ
ಬೆಂಗಳೂರು, ಮೇ 08 : ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿಯಿರುವಂತೆ ಆಡಳಿತಾರೂಢ ಕಾಂಗ್ರೆಸ್ ತನ್ನ ಸಿದ್ಧತೆಗಳನ್ನು ಚುರುಕುಗೊಳಿಸಿದೆ.
ಕೆಪಿಸಿಸಿ ಅಧ್ಯಕ್ಷ ಆಯ್ಕೆ ಸೇರಿದಂತೆ ಇನ್ನಿತರ ಕಾರ್ಯತಂತ್ರ ರೂಪಿಸಲು ಪಕ್ಷದ ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡಿರುವ ವೇಣುಗೋಪಾಲ್ ಇದೇ ಮೊದಲ ಬಾರಿಗೆ ಇಂದು (ಸೋಮವಾರ) ಬೆಂಗಳೂರಿಗೆ ಆಗಮಿಸಿದ್ದಾರೆ.

ಮೂರು ದಿನಗಳ ಪ್ರವಾಸದಲ್ಲಿ ಪಕ್ಷ ಸಂಘಟನೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಂದ ಹಿಡಿದು ತಳಮಟ್ಟದ ಪದಾಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಲಿದ್ದಾರೆ. ವೇಣುಗೋಪಾಲ್ ಜತೆಗೆ ನಾಲ್ವರು ಎಐಸಿಸಿ ಕಾರ್ಯದರ್ಶಿಗಳು ಕೂಡ ಆಗಮಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಣುಗೋಪಾಲ್ ತಂಡವನ್ನ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಬರಮಾಡಿಕೊಂಡರು.

ಸೋಮವಾರ ಕುಮಾರಕೃಪ ಅತಿಥಿ ಗೃಹದಲ್ಲಿ ಸಿಎಂ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಪಕ್ಷ ಸಂಘಟನೆಯ ಜೊತೆಗೆ 2018ರ ಚುನಾವಣೆಗೆ ತಂಡವನ್ನು ರಚಿಸುವುದು ಹಾಗೂ ನೂತನ ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತಂತೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವಿವಿಧ ವಿಭಾಗಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಮಂಗಳವಾರ ಹಿರಿಯ ಕಾಂಗ್ರೆಸ್ ನಾಯಕರು, ಸಂಸದರು, ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರ ಜೊತೆ ಪ್ರತ್ಯೇಕ ಸಭೆ ನಡೆಯಲಿದೆ. ಬುಧವಾರ ಸಮನ್ವಯ ಸಮಿತಿ ಸಭೆ ನಡೆಯಲಿದೆ.












Click it and Unblock the Notifications