ಪ್ರಾಣದ ಹಂಗು ತೊರೆದು ಕಳ್ಳನನ್ನು ಬಂಧಿಸಿದ ಕಾನ್ಸ್‌ಟೇಬಲ್ ದೊಡ್ಡಲಿಂಗಯ್ಯ: ವಿಡಿಯೋ ವೈರಲ್
ಬೆಂಗಳೂರು, ಆಗಸ್ಟ್ 08: ಕರ್ನಾಟಕ ಪೊಲೀಸರ ಕರ್ತವ್ಯ ಪ್ರಜ್ಞೆ ಎಂತಹದ್ದು ಎನ್ನುವುದಕ್ಕೆ ಬೆಂಗಳೂರಿನಲ್ಲಿ ನಡೆದ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ಪೊಲೀಸ್ ಸಿಬ್ಬಂದಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕಳ್ಳನನ್ನು ಹಿಡಿದಿರುವ ವಿಡಿಯೋ ಈಗ ಎಲ್ಲಡೆ ವೈರಲ್ ಆಗುತ್ತಿದ್ದು, ಕಾನ್ಸ್‌ಟೇಬಲ್ ಕರ್ತವ್ಯ ನಿಷ್ಠಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ಪೊಲೀಸ್ ಠಾಣೆಯಿಂದ ಬಂದಿದ್ದ ಕಾನ್ಸ್‌ಟೇಬಲ್ ದೊಡ್ಡಲಿಂಗಯ್ಯ ಎನ್ನುವವರು ಸದಾಶಿವನಗರ ಟ್ರಾಫಿಕ್ ಸಿಂಗಲ್ ಬಳಿ ಹತ್ತಾರು ವಾಹನಗಳ ಸಂಚಾರದ ನಡುವೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಳ್ಳನನ್ನು ಹಿಡಿದಿದ್ದಾರೆ. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯ ಸಿಗ್ನಲ್ ಬಳಿ ಈ ಘಟನೆ ನಡೆದಿದೆ.

ದೊಡ್ಡಲಿಂಗಯ್ಯ ಕಳ್ಳನನ್ನು ಹಿಡಿಯುವ ಎದೆ ಝಲ್ ಎನಿಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ತನ್ನ ಪ್ರಾಣವನ್ನು ಲೆಕ್ಕಿಸದೇ ಹರಸಾಹಸ ಪಟ್ಟು ಕಳ್ಳನನ್ನು ಹಿಡಿದ ಕಾನ್‌ಸ್ಟೇಬಲ್ ದೊಡ್ಡಲಿಂಗಯ್ಯ ಅವರ ಸಾಹಸ ಮತ್ತು ಕರ್ತವ್ಯ ನಿಷ್ಠೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಘಟನೆಯ ಹಿನ್ನೆಲೆ ಏನು..?
ಮಂಜೇಶ್ ಅಲಯಾಸ್ 420 ಮಂಜ ಅಲಯಾಸ್ ಹೊಟ್ಟೆ ಮಂಜ ಎನ್ನುವ ಖತರ್ನಾಕ್ ಕಳ್ಳ ರಾಜ್ಯದ ಹಲವಾರು ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಆರೋಪಿಯಾಗಿದ್ದಾನೆ. ಸುಮಾರು ಒಂದು ತಿಂಗಳಿಂದ ಪೊಲೀಸರ ಕೈಗೆ ಸಿಗದೇ ಕಣ್ತಪ್ಪಿಸಿ ಓಡಾಡುತ್ತಿದ್ದ ಹೊಟ್ಟೆ ಮಂಜ ಬೆಂಗಳೂರಿನಲ್ಲಿ ಇರುವುದು ತಿಳಿದು ಬಂದಿದೆ. ಕೂಡಲೇ ಆತನನ್ನು ಬಂಧಿಸಲು ತುಮಕೂರಿನಿಂದ ತಂಡ ಬೆಂಗಳೂರಿಗೆ ಬಂದಿದೆ.

ಆರೋಪಿ ಮಂಜ ವೃದ್ಧ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಪಿಂಚಣಿ, ಸರ್ಕಾರದ ಸವಲತ್ತು ಕೊಡಿಸುತ್ತೇನೆಂದು ನಂಬಿಸಿ ಮಹಿಳೆಯರಿಂದ ಚಿನ್ನದ ಸರ ಕದ್ದು ಪರಾರಿಯಾಗುತ್ತಿದ್ದ. ಇಂತಹ ಅನೇಕ ಪ್ರಕರಣಗಳು ಈತನ ಮೇಲೆ ದಾಖಲಾಗಿತ್ತು. ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಹೆಬ್ಬೂರು ಪೊಲೀಸ್ ಠಾಣೆಯ ದಾಖಲಾದ ಪ್ರಕರಣ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಹೊಟ್ಟೆ ಮಂಜ ಪೊಲೀಸರಿಗೆ ಬೇಕಾಗಿದ್ದ.
ಹೀಗಾಗಿ ಹೊಟ್ಟೆ ಮಂಜನ ಬಂಧನಕ್ಕೆ ತಯಾರಿ ನಡೆಸಿದ್ದ ಪೊಲೀಸರು ಮೊದಲು ಬಿಳಿ ಬಣ್ಣದ ಆ್ಯಕ್ಟೀವ್ ಹೊಂಡಾ ಬೈಕ್‌ನಲ್ಲಿ ಬರುತ್ತಿರುವ ಮಾಹಿತಿಯನ್ನು ಪೊಲೀಸರು ಕಲೆಹಾಕಿದರು. ಸದಾಶಿವನಗರ ಪೊಲೀಸ್ ಠಾಣೆ ಸಿಗ್ನಲ್ ಬಳಿ ಮಂಜ ಬರುತ್ತಿದ್ದಂತೆ ಕಾನ್ಸ್‌ಟೇಬಲ್ ದೊಡ್ಡಲಿಂಗಯ್ಯ ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಪೊಲೀಸ್ ಸಿಬ್ಬಂದಿಯನ್ನು ಲೆಕ್ಕಿಸದೇ ಬೈಕ್ ಚಲಾಯಿಸಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ದೊಡ್ಡಲಿಂಗಯ್ಯ ಆರೋಪಿ ಕಾಲು ಹಿಡಿದುಕೊಂಡಿದ್ದಾರೆ. ನಡುರಸ್ತೆಯಲ್ಲೇ ಆರೋಪಿ ಪೊಲೀಸ್ ಸಿಬ್ಬಂದಿಯನ್ನು ಎಳೆದೊಯ್ದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಮಹಿಳಾ ಸಿಬ್ಬಂದಿ ಹಾಗೂ ಇತತರು ದೊಡ್ಡಲಿಂಗಯ್ಯ ಅವರ ಸಹಾಯಕ್ಕೆ ಬಂದಿದ್ದು, ಎಲ್ಲರೂ ಒಟ್ಟಾಗಿ ಕಳ್ಳನನ್ನು ಹಿಡಿದಿದ್ದಾರೆ.












Click it and Unblock the Notifications