ಬೆಂಗಳೂರು ಪಿಜಿಯಲ್ಲಿ ಯುವತಿಯ ಬರ್ಬರ ಹತ್ಯೆ ಮಾಡಿದ್ದ ಆರೋಪಿ ಮಧ್ಯಪ್ರದೇಶದಲ್ಲಿ ಅರೆಸ್ಟ್
ಬೆಂಗಳೂರು, ಜುಲೈ. 27: ಬೆಂಗಳೂರಿನ ಕೋರಮಂಗಲದ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸವಾಗಿದ್ದ ಬಿಹಾರ ಮೂಲದ 24 ವರ್ಷದ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ಯುವತಿನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಬಿಹಾರ ಮೂಲದ 24 ವರ್ಷದ ಯುವತಿ ಕೃತಿ ಕುಮಾರಿ ಎನ್ನುವವರನ್ನು ಬರ್ಬರವಾಗಿ ಕೊಂದ ಆರೋಪಿಯನ್ನು ಮಧ್ಯಪ್ರದೇಶದಲ್ಲಿ ಇಂದು (ಜುಲೈ. 27) ಬಂಧಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ನಗರಕ್ಕೆ ಕರೆತರಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

ಸಂತ್ರಸ್ತೆ, ಕೃತಿ ಕುಮಾರಿ, ಮೂಲತಃ ಬಿಹಾರ ಮೂಲದವರಾಗಿದ್ದು, ಬೆಂಗಳೂರಿನ ಕೋರಮಂಗಲದ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹದಲ್ಲಿ ವಾಸಿಸುತ್ತಿದ್ದರು. ಮಂಗಳವಾರ ರಾತ್ರಿ 11 ಗಂಟೆಯ ಸುಮಾರಿಗೆ ಕಟ್ಟಡಕ್ಕೆ ಬಂದ ವ್ಯಕ್ತಿ ಆಕೆಯನ್ನು ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಮೂಲಗಳ ಪ್ರಕಾರ, ಈ ವ್ಯಕ್ತಿ ಪಿಜಿಯಲ್ಲಿ ರೂಮ್‌ಮೇಟ್ ಆಗಿದ್ದ ಯುವತಿಯ ಬಾಯ್‌ಫ್ರೆಂಡ್ ಆಗಿದ್ದ.
ಆರೋಪಿ ಅಭಿಷೇಕ್ ಒಬ್ಬ ನಿರುದ್ಯೋಗಿಯಾಗಿದ್ದ. ಇದು ಅವರ ನಡುವೆ ಜಗಳಗ್ಗೆ ಕಾರಣವಾಗಿತ್ತು. ಇಬ್ಬರ ಜಗಳ ಕಡಿಮೆ ಮಾಡಲು ಕೃತಿ ಕುಮಾರಿ ಹಲವು ಬಾರಿ ಮಧ್ಯಪ್ರವೇಶಿಸುತ್ತಿದ್ದರು ಎನ್ನಲಾಗಿದೆ. ಇದರ ಜೊತೆಗೆ ಆ ವ್ಯಕ್ತಿಯಿಂದ ದೂರವಿರುವಂತೆ ತನ್ನ ರೂಮ್‌ಮೇಟ್‌ಗೆ ಕೃತಿ ಕುಮಾರಿ ಸಲಹೆ ನೀಡಿದ್ದಾಳೆ. ತಮ್ಮ ಗರ್ಲ್‌ಫ್ರೆಂಡ್ ತನ್ನನ್ನು ದೂರವಿಡಲು ಈಕೆಯೇ ಕಾರಣ ಎಂದು ತಿಳಿದು ಆತ ಈ ಅಪರಾಧ ಎಸಗಿದ್ದಾನೆ ಎನ್ನಲಾಗಿದೆ.

ಪಿಜಿ ಕಾರಿಡಾರ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಭೀಕರ ಕೊಲೆಯ ದೃಶ್ಯ ಸೆರೆಯಾಗಿದೆ. ಕೃತಿ ಕುಮಾರಿಯ ರೂಮಿನ ಬಾಗಿಲನ್ನು ತಟ್ಟುತ್ತಿರುವ ವ್ಯಕ್ತಿಯ ದೃಶ್ಯಗಳು, ಆತ ಮೃತಳಿಗೆ ಚಾಕು ಇರುಯುತ್ತಿರುವುದು, ಇಬ್ಬರ ನಡುವೆ ಜಗಳ ನಡೆಯುತ್ತಿರುವುದು ಕಾಣಿಸುತ್ತಿದೆ. ಗಲಾಟೆ ಕೇಳಿ ಅಲ್ಲಿಗೆ ಬಂದ ಇತರ ಯುವತಿಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಆರೋಪಿಗಳನ್ನು ಹಿಡಿಯಲು ಬೆಂಗಳೂರು ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.












Click it and Unblock the Notifications