ಬೆಂಗಳೂರು : ಮಾಡೆಲ್ ಹತ್ಯೆ ಮಾಡಿದ ಡ್ರೈವರ್ ಉಂಗುರದಿಂದ ಸಿಕ್ಕಿ ಬಿದ್ದ
ಬೆಂಗಳೂರು, ಆಗಸ್ಟ್ 23 : ಬೆಂಗಳೂರಿನಲ್ಲಿ ನಡೆದ ಮಾಡೆಲ್ ಹತ್ಯೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಮಾಡೆಲ್ ನಾಪತ್ತೆಯಾದ ಬಗ್ಗೆ ಕೋಲ್ಕತ್ತಾ ನಗರದ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಶ್ಚಿಮ ಬಂಗಾಳ ಮೂಲದ ಪೂಜಾ ಸಿಂಗ್ ಹತ್ಯೆಯಾದವರು. ಹತ್ಯೆಗೆ ಸಂಬಂಧಿಸಿದಂತೆ ಓಲಾ ಕ್ಯಾಬ್ ಚಾಲಕ ಎಚ್. ಎಂ. ನಾಗೇಶ್ (22)ನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
Recommended Video
ಜುಲೈ 31ರಂದು ಪೂಜಾಳನ್ನು ಹತ್ಯೆ ಮಾಡಿದ್ದ ನಾಗೇಶ್ ಆಕೆಯ ಬಳಿ ಇದ್ದ ಹಣ ಚಿನ್ನಾಭರಣ ದೋಚಿದ್ದ. ಬಾಗಲೂರಿನ ಕಾಡಯರಪನಹಳ್ಳಿ ಬಳಿ ಪೂಜಾ ಸಿಂಗ್ ಶವ ಪತ್ತೆಯಾಗಿತ್ತು.

ಏನಿದು ಘಟನೆ? : ಜುಲೈ 31ರಂದು ರಾತ್ರಿ 10 ಗಂಟೆಗೆ ಕ್ರೆಸೆಂಟ್ ರಸ್ತೆಯಿಂದ ಪೂಜಾ ಆರೋಪಿ ನಾಗೇಶ್ ಕಾರು ಹತ್ತಿದ್ದಳು. ಪರಪ್ಪನ ಅಗ್ರಹಾರ ಬಳಿ ಕಾರು ಇಳಿದಿದ್ದಳು. ಬೆಳಗ್ಗೆ 4 ಗಂಟೆಗೆ ನಿನೇ ಬಂದು ಪಿಕ್ ಮಾಡು ಏರ್ ಪೋರ್ಟ್‌ಗೆ ಹೋಗಬೇಕು ಎಂದು ಹೇಳಿದ್ದಳು.
ಮರುದಿನ ಬೆಳಗ್ಗೆ ಪೂಜಾಳನ್ನು ಪಿಕ್ ಮಾಡಿದ ನಾಗೇಶ್, ಹಣ ನೀಡುವಂತೆ ಕೇಳಿದ್ದಾನೆ. ಆಕೆ ನಿರಾಕರಿಸಿದಾಗ ಆಕೆಯ ಬಳಿ ಹೆಚ್ಚು ಹಣವಿರಬಹುದು ಎಂದು ಜಾಕ್ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದ.
ಕಾಡಯರಪನಹಳ್ಳಿ ಬಳಿ ಶವನ್ನು ಬಿಸಾಕಿದ್ದ ನಾಗೇಶ್ ಕತ್ತು ಕೊಯ್ದು ಹಾಕಿದ್ದ. ದೇಹದ ವಿವಿಧ ಭಾಗಗಳಿಗೆ ಚುಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಶವದ ಗುರುತು ಸಿಗದಂತೆ ಮಾಡಿದ್ದ. ಅಪರಿಚಿತ ಮಹಿಳೆ ಶವ ಪತ್ತೆ ಎಂದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಪೂಜಾ ಸಿಂಗ್ ನಾಪತ್ತೆ ಕುರಿತು ಕೋಲ್ಕತ್ತಾ ನಗರದ ನ್ಯೂ ಟೌನ್ ಠಾಣೆಯಲ್ಲಿ ಪತಿ ದೂರು ದಾಖಲು ಮಾಡಿದ್ದರು. ಪೂಜಾ ಕೈಯಲ್ಲಿದ್ದ ಉಂಗುರ ವಶಕ್ಕೆ ಪಡೆದಿದ್ದ ಪೊಲೀಸರು, ಈ ಮಾದರಿ ಉಂಗುರ ಪಶ್ಚಿಮ ಬಂಗಾಳ ಮೂಲದವರು ಧರಿಸುವುದು ಎಂದು ಪತ್ತೆ ಹಚ್ಚಿದ್ದರು.
ಪ್ರಕರಣದ ತನಿಖೆ ಕೈಗೊಂಡು ಕೋಲ್ಕತ್ತಾಗೆ ಭೇಟಿ ನೀಡಿದಾಗ ಪೂಜಾ ಹತ್ಯೆಯ ವಿಚಾರ ಬೆಳಕಿಗೆ ಬಂದಿದೆ. ಕ್ಯಾಬ್ ಚಾಲಕ ನಾಗೇಶ್ ಬಂಧಿಸಿರುವ ಪೊಲೀಸರು, ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿದ್ದಾರೆ.












Click it and Unblock the Notifications