ಅತೃಪ್ತರ ಬಣ ಸೇರಿಕೊಳ್ಳುತ್ತಾರೆಯೇ ಕೋಲಾರ ಜೆಡಿಎಸ್ ಶಾಸಕ?
ಬೆಂಗಳೂರು, ಜುಲೈ 10: ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅವರೂ ಅತೃಪ್ತರ ಬಣ ಸೇರಿಕೊಳ್ಳಲಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಬುಧವಾರ ಮಧ್ಯಾಹ್ನ ಅವರು ಲಗೇಜ್ ಸಮೇತ ಕಾಣಿಸಿಕೊಂಡಿರುವುದರಿಂದ ಅವರು ಮುಂಬೈನಲ್ಲಿರುವ ಅತೃಪ್ತರ ಗುಂಪನ್ನು ಸೇರಿಕೊಳ್ಳಲಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಇನ್ನೂ ನಾಲ್ವರು ಅತೃಪ್ತ ಶಾಸಕರು ಮುಂಬೈಗೆ ಬಮದು ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿರುವುದು ಈ ಅನುಮಾನ ಬಲಗೊಳ್ಳಲು ಕಾರಣವಾಗಿದೆ.
ಆದರೆ, ತಾವು ದೆಹಲಿಗೆ ಹೋಗುತ್ತಿಲ್ಲ. ಬೋರ್ಡ್ ಸಭೆಯೊಂದರಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ.

ತಾವು ಇತರೆ ಶಾಸಕರೊಂದಿಗೆ ರೆಸಾರ್ಟ್‌ನಲ್ಲಿದ್ದು, ಕುಮಾರಸ್ವಾಮಿ ಮತ್ತು ಪಕ್ಷದ ಇತರೆ ನಾಯಕರ ಅನುಮತಿ ಪಡೆದೇ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.
ನಿನ್ನೆ ಮೊನ್ನೆ ರೆಸಾರ್ಟ್‌ನಲ್ಲಿಯೇ ಇದ್ದೆ. ಬೇರೆಯವರ ಕಥೆ ಗೊತ್ತಿಲ್ಲ ಎನ್ನುತ್ತಲೇ ಅವರು ಮಾಧ್ಯಮದವರ ಮುಂದೆ ಸಿಡಿಮಿಡಿ ವ್ಯಕ್ತಪಡಿಸಿ ಮುಂದೆ ಸಾಗಿದರು.
ಶ್ರೀನಿವಾಸ ಗೌಡ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ಅವರ ಜತೆ ವಿಮಾನದಲ್ಲಿ ತೆರಳಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications