ಟ್ರಾಫಿಕ್ ರೂಲ್ಸ್ ಮುರಿದು ಇನ್ನೂ ದಂಡ ಕಟ್ಟಿಲ್ಲವೇ?: ಬೆಂಗಳೂರು ಪೊಲೀಸರು ನೀಡಿದ್ದಾರೆ ಖಡಕ್ ಎಚ್ಚರಿಕೆ!
ಬೆಂಗಳೂರು, ಫೆಬ್ರವರಿ.18: ಈ ಸಿಲಿಕಾನ್ ಸಿಟಿಯಲ್ಲಿ ಮನುಷ್ಯರ ಸಂಖ್ಯೆಯಂತೆಯೇ ವಾಹನಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರ ಜೊತೆಗೆ ಸಂಚಾರಿ ನಿಯಮಗಳ ಉಲ್ಲಂಘನೆ ಕೂಡ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ರೂಲ್ಸ್ ಫಾಲೋ ಮಾಡೋದಿರಲಿ ಗೊತ್ತಿರುವ ಸಣ್ಣ ಪುಟ್ಟ ವಿಚಾರಗಳನ್ನೂ ವಾಹನ ಸವಾರರು ಮರೆಯುತ್ತಿದ್ದಾರೆ. ಹೀಗಾಗಿಯೇ ಬೆಂಗಳೂರು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಸಂಚಾರಿ ಪೊಲೀಸರು ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳು ಮತ್ತು ದೊಡ್ಡ ಮೊತ್ತದ ದಂಡವಿದ್ದರು ಇನ್ನೂ ಪಾವತಿಸದೇ ನಿಯಮಗಳನ್ನು ಉಲ್ಲಂಘಿಸುತ್ತಲೇ ಇರುವ ವಾಹನಗಳನ್ನು ಗುರುತಿಸಿ ವಿಶೇಷ ಅಭಿಯಾನ ನಡೆಸಿದ್ದಾರೆ. ಈ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನಗಳನ್ನು ಗುರುತಿಸುವ ಕೆಲಸ ಮಾಡಿದ್ದಾರೆ.

50,000 ರೂಪಾಯಯಿಗಳಿಂತ ಹೆಚ್ಚು ದಂಡ ಬಾಕಿ ಇರುವ ಬೈಕ್‌ಗಳು ಮತ್ತು ಕಾರುಗಳ ಮೇಲೆ ಬೆಂಗಳೂರು ಟ್ರಾಫಿಕ್ ಪೊಲೀಸರು ಗಮನ ಹರಿಸಿದ್ದಾರೆ. ಕೇವಲ ಮೂರು ದಿನಗಳಲ್ಲಿ ದಕ್ಷಿಣ ವಿಭಾಗದ ಪೊಲೀಸರು ದಂಡ ಕಟ್ಟದೆ ಪರಾರಿಯಾಗುತ್ತಿದ್ದ ಬರೋಬ್ಬರಿ 85 ಬೈಕ್ ಮತ್ತು ಕಾರುಗಳನ್ನು ಗುರುತಿಸಿದ್ದಾರೆ.
ಒಟ್ಟು 10,210 ಬಾರಿ ಟ್ರಾಫಿಕ್ ನಿಯಮಗಳ ಉಲ್ಲಂಘನೆಗಳು ದಾಖಲಾಗಿದ್ದು, ಬರೋಬ್ಬರಿ 1.07 ಕೋಟಿ ಮೊತ್ತದ ದಂಡ ವಿಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. "ಕ್ರ್ಯಾಕ್‌ಡೌನ್ ಎಚ್ಚರಿಕೆ: ಟ್ರಾಫಿಕ್ ಸೌತ್ ವಿಭಾಗದ ಇತ್ತೀಚಿನ ಕಾರ್ಯಾಚರಣೆಯಲ್ಲಿ 50,000 ರೂಪಾಯಿ ದಂದ ಪಾವತಿಸದ ಕಾರಣ 84 ದ್ವಿಚಕ್ರ ವಾಹನಗಳು ಮತ್ತು 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 10,210 ಬಾರಿ ಸಂಚಾರ ನಿಯಮ ಉಲ್ಲಂಘನೆಗಳು ಮತ್ತು 1.07 ಕೋಟಿ ಮೊತ್ತ ದಂಡ ವಿಧಿಸಲಾಗಿದೆ. ಕಾನೂನು ಕ್ರಮಗಳು ಜಾರಿಯಲ್ಲಿವೆ... ದಂಡವನ್ನು ಪಾವತಿಸಿ, ಜವಾಬ್ದಾರಿಯುತವಾಗಿ ಚಾಲನೆ ಮಾಡಿ..." ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಇತ್ತೀಚೆಗಷ್ಟೇ ಬೆಂಗಳೂರು ಸಂಚಾರ ಪೊಲೀಸರು ನಗರದ ಸುಧಾಮನಗರದ ನಿವಾಸಿಯೊಬ್ಬರ ದ್ವಿಚಕ್ರ ವಾಹನಕ್ಕೆ 3.2 ಲಕ್ಷ ದಂಡ ವಿಧಿಸಿದ್ದು, ದೊಡ್ಡ ಸುದ್ದಿಯಾಗಿತ್ತು. ಆದಷ್ಟು ಬೇಗ ಬಾಕಿ ಪಾವತಿಸುವಂತೆ ಮಾಲೀಕರಿಗೆ ತಿಳಿಸಿದ ಪೊಲೀಸರು ಬಾಕಿ ಇರುವ ದಂಡವನ್ನು ಪಾವತಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಇನ್ನು, ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಅವರ ಸ್ಕೂಟರ್ ಮೌಲ್ಯ ಕೇವಲ 30,000 ಆಗಿರುವುದರಿಂದ 3.2 ಲಕ್ಷ ರೂಪಾಯಿ ದಂಡ ಕಟ್ಟಲು ಸಾಧ್ಯವಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ. ಆದರೂ, ಪೊಲೀಸರು ಅವರಿಗೆ ಕಂತು ವಿಧಾನದಲ್ಲಿ ಬಾಕಿಯನ್ನು ತೆರವುಗೊಳಿಸುವ ಆಯ್ಕೆಯನ್ನು ನೀಡಿದ್ದಾರೆ. ಬಾಕಿ ಇರುವ ಬಿಲ್‌ಗಳನ್ನು ಕ್ಲಿಯರ್ ಮಾಡದೇ ಇದ್ದರೇ ಅವರ ಮೇಲೆ ಎಫ್‌ಐಆರ್ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.












Click it and Unblock the Notifications