ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ವರನ ವಿಚಿತ್ರ ಬೇಡಿಕೆ: ಟ್ಯಾಟೂ ಇರುವ ಹುಡುಗಿ ಮದುವೆಗೆ ಬೇಡವೇ ಬೇಡ!
ಮದುವೆ ಎನ್ನುವುದು ಎರಡು ಮನಸ್ಸುಗಳ ನಡುವೆ ಆಗುವ ಒಂದು ಸುಂದರ ಬೆಸುಗೆ ಅಥವಾ ಬಂಧನ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಗಾತಿಯನ್ನ ಹುಡುಕುವಾಗ ಯುವಕ-ಯುವತಿಯರು ಹತ್ತು ಹಲವು ಷರತ್ತುಗಳನ್ನ ವಿಧಿಸುತ್ತಾರೆ. ಸಾಮಾನ್ಯವಾಗಿ ಹುಡುಗ ಅಥವಾ ಹುಡುಗಿಯ ಎತ್ತರ, ಮೈಬಣ್ಣ, ಶಿಕ್ಷಣ, ಉದ್ಯೋಗ ಮತ್ತು ಸಂಬಳದ ಆಧಾರದ ಮೇಲೆ ಆಯ್ಕೆ ನಡೆಯುತ್ತದೆ. ಇವೆಲ್ಲವೂ ಸಾಮಾನ್ಯ ಬೇಡಿಕೆಗಳು. ಆದರೆ, ಇಲ್ಲೊಬ್ಬ ಯುವಕ ತನಗೆ ಬರಲಿರುವ ಪತ್ನಿಗೆ ಸಂಬಂಧಿಸಿದಂತೆ ವಿಧಿಸಿರುವ ಷರತ್ತೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಮ್ಯಾಟ್ರಿಮೋನಿ ಆ್ಯಪ್ ಸಿಇಒ ಹಂಚಿಕೊಂಡ ಈ ಘಟನೆ
ಮದುವೆಗೆ ಸಂಗಾತಿಯನ್ನ ಹುಡುಕಿಕೊಡುವ ಪ್ರಮುಖ ಡೇಟಿಂಗ್ ಮತ್ತು ಮ್ಯಾಟ್ರಿಮೋನಿ ಆ್ಯಪ್ ಆಗಿರುವ 'ನಾಟ್ ಡೇಟಿಂಗ್' ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಸಿಇಒ ಜಸ್ವೀರ್ ಸಿಂಗ್ ಅವರು ಎಕ್ಸ್ ಖಾತೆಯಲ್ಲಿ ಈ ಅಚ್ಚರಿಯ ಘಟನೆಯನ್ನ ಹಂಚಿಕೊಂಡಿದ್ದಾರೆ.

ಮ್ಯಾಟ್ರಿಮೋನಿಯನ್ನ ಮುನ್ನಡೆಸುತ್ತಿರುವ ಕಾರಣ, ಪ್ರತಿದಿನ ಬಳಕೆದಾರರಿಂದ ನಾನಾ ರೀತಿಯ ಬೇಡಿಕೆಗಳು ಕೇಳಿಬರುತ್ತವೆ. ಆದರೆ, ಈ ಯುವಕನ ಬೇಡಿಕೆ ಮಾತ್ರ ತಮಗೆ ತೀರಾ ಹೊಸದು ಮತ್ತು ಅಚ್ಚರಿ ತರಿಸುವಂತಿತ್ತು ಎಂದು ಅವರು ಹೇಳಿದ್ದಾರೆ.
ಮ್ಯಾಟ್ರಿಮೋನಿ ಆ್ಯಪ್‌ನ ಪ್ರೀಮಿಯಂ ಸದಸ್ಯನಾಗಿದ್ದ ಯುವಕನೊಬ್ಬನಿಗೆ ಸಂಸ್ಥೆಯ ಕಡೆಯಿಂದ ಕೆಲವು ಯುವತಿಯರ ಪ್ರೊಫೈಲ್‌ಗಳನ್ನ ಕಳುಹಿಸಲಾಗಿತ್ತು. ಮ್ಯಾಚ್ ಮೇಕಿಂಗ್ ಪ್ರಕ್ರಿಯೆಯ ಭಾಗವಾಗಿ, ಸಂಸ್ಥೆಯ ಸಲಹೆಗಾರರು ಆ ಯುವಕನಿಗೆ ಕರೆ ಮಾಡಿ ಆತನ ಅಭಿಪ್ರಾಯವನ್ನ ಕೇಳಿದ್ದಾರೆ. ಈ ವೇಳೆ ಆತ, ತನಗೆ ಹುಡುಗಿಯರು ಇಷ್ಟವಾಗಿದ್ದಾರೆ, ಆದರೆ ಆ ಪ್ರೊಫೈಲ್‌ನಲ್ಲಿರುವ ಯುವತಿಯರು ಟ್ಯಾಟೂ ಹಾಕಿಸಿಕೊಂಡಿರುವುದರಿಂದ ತಾನು ಅವರನ್ನ ಮದುವೆಯಾಗಲು ಸಾಧ್ಯವಿಲ್ಲ ಎಂದು ನೇರವಾಗಿ ತಿರಸ್ಕರಿಸಿದ್ದಾನೆ.
ಯುವಕನ ಮದುವೆಗೆ ವಿಚಿತ್ರ ಷರತ್ತು: ಸಿಇಒಗೆ ತಲೆನೋವು!
"ನಾನು ಯಾವುದೇ ಕಾರಣಕ್ಕೂ ಟ್ಯಾಟೂ ಹಾಕಿಸಿಕೊಂಡಿರುವ ಹುಡುಗಿಯನ್ನ ಮದುವೆಯಾಗುವುದಿಲ್ಲ ಎಂಬುದು ಆತನ ನಿಲುವಾಗಿತ್ತು" ಎಂದು ಜಸ್ವೀರ್ ಸಿಂಗ್ ಬರೆದುಕೊಂಡಿದ್ದಾರೆ. ಈ ಯುವಕನ ಮದುವೆಗೆ ವಿಚಿತ್ರ ಷರತ್ತು ಮ್ಯಾಚ್ ಮೇಕರ್ಸ್‌ಗಳಿಗೆ ಹೊಸ ತಲೆನೋವು ತಂದಿಟ್ಟಿದೆ. "ಈ ರೀತಿಯ ಷರತ್ತುಗಳನ್ನ ಮ್ಯಾಚ್ ಮೇಕಿಂಗ್ ಪ್ರಕ್ರಿಯೆಯಲ್ಲಿ ಅಳವಡಿಸುವುದು ಹೇಗೆ? ಟ್ಯಾಟೂ ಇದೆಯೇ ಅಥವಾ ಇಲ್ಲವೇ ಎಂದು ಪತ್ತೆಹಚ್ಚಲು ಆ್ಯಪ್‌ನಲ್ಲಿ ಹೊಸ ಫಿಲ್ಟರ್ ಅನ್ನು ರಚಿಸಲು ಸಾಧ್ಯವಿಲ್ಲ. ಹಾಗೆಯೇ, ಪ್ರತಿಯೊಬ್ಬರನ್ನು ನಿಮಗೆ ಟ್ಯಾಟೂ ಇದೆಯೇ ಎಂದು ಕೇಳುವುದಕ್ಕೂ ಆಗುವುದಿಲ್ಲ" ಎಂದು ಜಸ್ವೀರ್ ತಮ್ಮ ಗೊಂದಲವನ್ನ ಹೊರಹಾಕಿದ್ದಾರೆ.
'ಟ್ಯಾಟೂ ಇರುವ ಹುಡುಗಿ ಬೇಡ' ಎಂದವನಿಗೆ ನೆಟ್ಟಿಗರ ಕ್ಲಾಸ್
ಜಸ್ವೀರ್ ಸಿಂಗ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಬಳಕೆದಾರರು ಪರ-ವಿರೋಧ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಟ್ಯಾಟೂ ಇರುವ ಹುಡುಗಿ ಬೇಡ ಎಂಬ ಯುವಕನ ನಿಲುವಿಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಈ ರೀತಿ ಫಿಲ್ಟರ್‌ಗಳನ್ನ ಸೇರಿಸುತ್ತಾ ಹೋದರೆ ನಾಳೆ ಕೂದಲು ಹೇಗಿರಬೇಕು, ಹಲ್ಲು ಹೇಗಿರಬೇಕು ಎಂಬೆಲ್ಲಾ ಬೇಡಿಕೆಗಳು ಬರುತ್ತವೆ. ಇಂತಹ ವಿಚಾರಗಳನ್ನ ಹುಡುಗ ಮತ್ತು ಹುಡುಗಿ ಭೇಟಿಯಾದಾಗ ಪರಸ್ಪರ ಸ್ನೇಹಯುತವಾಗಿ ಚರ್ಚಿಸಬೇಕು" ಎಂದು ಓರ್ವ ಬಳಕೆದಾರರು ಸಲಹೆ ನೀಡಿದ್ದಾರೆ.
Running a matrimony platform means some requirement is always coming up. Height, salary, colour, education, profession, all of this is very common.
— Jasveer Singh (@jasveer10) September 7, 2026
But today, I heard a new one.
One of our premium members had already been matched with a few profiles. Our match advisor asked…
"ಆತ ಸೂಪರ್ ಮಾರ್ಕೆಟ್‌ನಲ್ಲಿ ಶಾಪಿಂಗ್ ಮಾಡುತ್ತಿರುವಂತೆ ವರ್ತಿಸುತ್ತಿದ್ದಾನೆ. ಆತನ ಅಜ್ಜಿ ಅಥವಾ ಮುತ್ತಜ್ಜಿಯ ಕಾಲದಲ್ಲಿಯೇ ಈ ಹಚ್ಚೆ ಹಾಕಿಸಿಕೊಳ್ಳುವ ಸಂಪ್ರದಾಯ ಖಂಡಿತಾ ಇರುತ್ತದೆ, ಒಮ್ಮೆ ವಿಚಾರಿಸಲು ಹೇಳಿ" ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ: ಈತನಿಗೆ ಬೆಂಬಲವೂ ಉಂಟು
ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದ್ದು, ಯುವಕನ ನಿಲುವನ್ನ ಹಲವರು ಸಮರ್ಥಿಸಿಕೊಂಡಿದ್ದಾರೆ. "ಇದರಲ್ಲಿ ವಿಚಿತ್ರವೇನೂ ಇಲ್ಲ. ಇಂದಿಗೂ ಅನೇಕ ಕಾರ್ಪೊರೇಟ್ ಕಂಪನಿಗಳು ಟ್ಯಾಟೂ ಹಾಕಿಸಿಕೊಂಡಿರುವ ಉದ್ಯೋಗಿಗಳನ್ನ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಮಧ್ಯಮ ವರ್ಗದ ಕುಟುಂಬಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದನ್ನು ಈಗಲೂ ಕೆಟ್ಟ ದೃಷ್ಟಿಯಿಂದಲೇ ನೋಡಲಾಗುತ್ತದೆ. ಹೀಗಾಗಿ ಆತನ ಆಯ್ಕೆಯಲ್ಲಿ ತಪ್ಪಿಲ್ಲ" ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಯುವಜನತೆಯ ಆಯ್ಕೆಗಳು ಮತ್ತು ಆದ್ಯತೆಗಳು ಎಷ್ಟರಮಟ್ಟಿಗೆ ಬದಲಾಗುತ್ತಿವೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ನಿದರ್ಶನವಾಗಿದೆ.


Click it and Unblock the Notifications
