ಬೆಂಗಳೂರು: ಭಾನುವಾರದ ಕಿಸ್ ಆಫ್ ಲವ್ 'ಠುಸ್'
ಬೆಂಗಳೂರು, ಡಿ. 1 : ಬೆಂಗಳೂರಿನಲ್ಲಿ ಭಾನುವಾರ ನಡೆಯಬೇಕಿದ್ದ ಕಿಸ್ ಆಫ್ ಲವ್ ಗೆ ದಂತಭಗ್ನವಾಗಿದೆ. ಪೊಲೀಸರಿಂದ ಅನುಮತಿ ನಿರಾಕರಣೆ, ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷಿತ ಪ್ರಮಾಣದ ಬೆಂಬಲ ವ್ಯಕ್ತವಾಗದ್ದರಿಂದ ಕಿಸ್ 'ಠುಸ್ ' ಆಗಿದೆ.
ಮೊದಲು ಮಹತ್ಮಾ ಗಾಂಧಿ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ನಂತರ ಟೌನ್ ಹಾಲ್ ಮುಂಭಾಗಕ್ಕೆ ಬದಲಾಯಿಸಲಾಗಿತ್ತು. ಹಲವಾರು ಯುವ ಪ್ರೇಮಿಗಳು ರಸ್ತೆಯಲ್ಲೇ ಚುಂಬನದ ಮಳೆಗರೆಯಬೇಕೆಂದುಕೊಂಡಿದ್ದು ಆಯೋಜಕರ ಹಿನ್ನಡೆ ಪರಿಣಾಮ ಕೊಚ್ಚಿಕೊಂಡು ಹೋಗಿದೆ.[ಮುತ್ತಿನ ಕಿಮ್ಮತ್ತು ಗಮ್ಮತ್ತೇನೆಂದು ಬಲ್ಲವರಾರು?]

ನವೆಂಬರ್ 22 ಕ್ಕೆ ನಡೆಯಬೇಕಿದ್ದ ಕಿಸ್ ಆಫ್ ಲವ್ ನವೆಂಬರ್ 30 ಕ್ಕೆ ಮುಂದೂಡಿಕೆಯಾಗಿತ್ತು. ಪೊಲೀಸರು ಭಾನುವಾರ ಮುಂಜಾಗೃತಾ ಕ್ರಮ ತೆಗೆದುಕೊಂಡು ಟೌನ್ ಹಾಲ್ ಎದುರಿನ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿದ್ದರು. ಅಲ್ಲದೇ ಭದ್ರತಾ ಸಿಬ್ಬಂದಿಯನ್ನು ಆಯೋಜನೆ ಮಾಡಿದ್ದರು.
ಹಿಂದು ಪರ ಸಂಘಟನೆಗಳು, ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಕಿಸ್ ಆಫ್ ಲವ್ ಗೆ ವಿರೋಧ ವ್ಯಕ್ತಪಡಿಸಿದ್ದವು. ನೈತಿಕ ಪೊಲೀಸ್ ಗಿರಿ ವಿರುದ್ಧ ಪ್ರತಿಭಟನೆ ಮಾಡಲು ಹಲವಾರು ದಾರಿಗಳಿವೆ. ಅದಕ್ಕೆ ಇಂಥ ಅಸಂಸ್ಕೃತ ಹಾದಿ ಹಿಡಿಯಬಾರದು ಎಂಬ ಅಭಿಪ್ರಾಯ ಮಾಧ್ಯಮಗಳಲ್ಲಿ ವ್ಯಕ್ತವಾಗಿತ್ತು.[ಹಿಂದೆ ಸರಿದ ರಚಿತಾ ತನೇಜಾ]

ಇಲ್ಲಿಯವರೆಗೆ ಫೇಸ್ ಬುಕ್ ನಲ್ಲಿ ಕ್ರಿಯಾಶೀಲವಾಗಿದ್ದ ಕಿಸ್ ಆಫ್ ಲವ್ ಕಮ್ಯೂನಿಟಿ ನವೆಂಬರ್ 29 ರಿಂದ ಮರೆಯಾಗಿದೆ. ಯಾವುದೇ ಅಪ್ ಡೇಟ್ ಗಳನ್ನು ಹಾಕಿಲ್ಲ. ನಾಯಕತ್ವ ವಹಿಸಿಕೊಂಡವರ ಪತ್ತೆಯೂ ಇಲ್ಲ.
ಕೇರಳ, ಹೈದ್ರಾಬಾದ್ ಮತ್ತು ಚೆನ್ನೈನಲ್ಲಿ ನಡೆದಂತೆ ಇಲ್ಲಿಯೂ ಕಿಸ್ ಆಫ್ ಲವ್ ನಡೆಯುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಈಗ ಆಯೋಜಕರೆ ನಾಪತ್ತೆಯಾಗಿರುವುದು ಕಿಸ್ ಆಫ್ ಲವ್ ಕಾರ್ಯಕ್ರಮಕ್ಕೆ ಫುಲ್ ಸ್ಟಾಫ್ ಹಾಕಿದೆ ಎಂದೇ ಹೇಳಬಹುದು.












Click it and Unblock the Notifications