ಬೆಂಗಳೂರಿನಲ್ಲಿ ಈ ಸಮಸ್ಯೆ ಮಾಡುತ್ತಿರುವವರ ಮುಖಕ್ಕೆ ಉಗಿಯಿರಿ ಎಂದ ಉದ್ಯಮಿ ಕಿರಣ್ ಮಜುಂದಾರ್ ಶಾ!
ಬೆಂಗಳೂರಿನ ಮೂಲಸೌಕರ್ಯ ಹಾಗೂ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಪದೇ ಪದೇ ಧ್ವನಿ ಎತ್ತುತ್ತಿದ್ದಾರೆ. ಇದೀಗ ಬೆಂಗಳೂರಿನ ಸ್ವಚ್ಛತೆಗೆ ಸಂಬಂಧಿಸಿದಂತೆ ಅವರು ಮಾಡಿರುವ ರೀಟ್ವೀಟ್ ಹಾಗೂ ಬರಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಕಿರಣ್ ಮಜುಂದಾರ್ ಶಾ ಅವರು ಅವರ ಮುಖಕ್ಕೆ ಉಗಿಯಿರಿ ಎಂದು ಹೇಳಿದ್ದಾರೆ. ಏನಿದು, ಯಾವ ಸಮಸ್ಯೆಗೆ ಯಾರ ಮುಖಕ್ಕೆ ಉಗಿಯುವುದಕ್ಕೆ ಹೇಳಿದರು ಅಂತ ನೋಡೋಣ...
ಬೆಂಗಳೂರಿನಲ್ಲಿ ಕಸದ ಸಮಸ್ಯೆ ಹಾಗೂ ರಸ್ತೆಗುಂಡಿಗಳ ಸಮಸ್ಯೆ ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಿರಣ್ ಅವರು ಸೋಷಿಯಲ್ ಮೀಡಿಯಾದಲ್ಲಿ ಕಳೆದ ಎರಡು ಮೂರು ತಿಂಗಳಿನಿಂದಲೂ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದಾರೆ. ಇವರು ಮಾಡಿರುವ ಟ್ವೀಟ್‌ಗಳು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿರುವುದು ಮತ್ತು ಚರ್ಚೆ ಆಗಿರುವುದು ಸಹ ಇದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಉದ್ಯಮಿಗಳು ಮಾಡಿರುವ ಪೋಸ್ಟ್ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿರುವುದು ಸಹ ಇದೆ. ಇದೀಗ ಬೆಂಗಳೂರಿನ ಸೌಂದರ್ಯವನ್ನು ಹಾಳು ಮಾಡುತ್ತಿರುವವರ ಮುಖಕ್ಕೆ ಉಗಿಯಿರಿ ಎಂದು ಅವರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ನಗರದಲ್ಲಿ ಇರುವ ಪ್ರಮುಖ ಸಮಸ್ಯೆಗಳಲ್ಲಿ ಸ್ವಚ್ಛತೆಯ ಸಮಸ್ಯೆಯೂ ಒಂದು ಅಲ್ಲದೇ ಕೆಲವರು ಎಲ್ಲೆಂದರಲ್ಲಿ ಉಗುಳಿ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ಮತ್ತೆ ಸ್ವಚ್ಛತಾ ಸಿಬ್ಬಂದಿ ಕಷ್ಟಪಟ್ಟು ಸ್ವಚ್ಛ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ರೀತಿ ಎಲ್ಲೆಂದರಲ್ಲಿ ಉಗುಳಿ ಕೊಳಕುತನ ಪ್ರದರ್ಶಿಸುತ್ತಿರುವವರ ಮೇಲೆ ಕಿರಣ್ ಶಾ ಅವರು ಗರಂ ಆಗಿದ್ದಾರೆ.
Bengaluru Post ಎನ್ನುವ ಸೋಷಿಯಲ್ ಮೀಡಿಯಾ ಖಾತೆಯಿಂದ ಕೆಲವರು ಅಗಿಯುತ್ತಾರೆ, ಉಗುಳುತ್ತಾರೆ ಮತ್ತು ನಗರದಲ್ಲಿ ಎಲ್ಲೆಂದರಲ್ಲಿ ಕೊಳಕು ಕಲೆ ಸೃಷ್ಟಿ ಮಾಡುತ್ತಾರೆ. ಬಸ್ ನಿಲ್ದಾಣಗಳಿಂದ ರಸ್ತೆಗಳ ಪ್ರಮುಖ ಬೀದಿಗಳ ವರೆಗೆ ಬೆಂಗಳೂರಿನ ಹೊಸ ವಿಲನ್‌ಗಳು ತಮ್ಮ ಕೊಳಕು ಗುರುತು ಬಿಡುತ್ತಿದ್ದಾರೆ.
ಇದರ ಬಗ್ಗೆ ಮಾತನಾಡುವ ಸಮಯ ಬಂದಿದೆ. 👀 ಬೆಂಗಳೂರಿನ ಉಗುಳು ಸಮಸ್ಯೆ- ಶೀಘ್ರದಲ್ಲೇ ಬರಲಿದೆ!! ಎನ್ನುವ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ.
ಈ ಪೋಸ್ಟ್ ಅನ್ನು ರೀಟ್ವೀಟ್ ಮಾಡಿರುವ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು, Spit on them!! / ಈ ರೀತಿ ಮಾಡುವವರಿಗೆ ಉಗಿಯಿರಿ ಎಂದಿದ್ದಾರೆ.
ಇದಕ್ಕೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡಿದ್ದಾರೆ. ಡಾ. ದಿವ್ಯ ಶರ್ಮಾ ಎನ್ನುವವರು, ಗುಟ್ಕಾ ಕಂಪನಿಗಳು ನಗರಗಳ ನಿರ್ವಹಣೆ ಹಾಗೂ ಸ್ವಚ್ಛತೆ ವೆಚ್ಚವನ್ನು ಭರಿಸುಬೇಕು. ಇದಕ್ಕಾಗಿ ನಗರದ ಸ್ಥಳೀತಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದಿದ್ದಾರೆ. ನಗರದ ಸ್ವಚ್ಛತೆ ಹಾಳಾಗುವುದಕ್ಕೆ ಪರೋಕ್ಷವಾಗಿ ಗುಟ್ಕಾ ಕಂಪನಿಗಳೂ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications