ಬೆಂಗಳೂರು ಅಭಿವೃದ್ಧಿ: ಬಿಜೆಪಿ & ಜೆಡಿಎಸ್ ಮಾಡದ ಕೆಲಸ ಕಾಂಗ್ರೆಸ್‌ನಿಂದ: ಕಿರಣ್ ಮಜುಂದಾರ್ ಶಾ!
ಬೆಂಗಳೂರಿನ ಅಭಿವೃದ್ಧಿ ಹಾಗೂ ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಪದೇ ಪದೇ ಚರ್ಚೆ ಆಗುತ್ತಿದ್ದು, ಉದ್ಯಮಿಗಳು ಧ್ವನಿ ಎತ್ತಿದ್ದಾರೆ. ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ ಎಂದು ಉದ್ಯಮಿಗಳು ದೂರಿದ್ದರು. ಆದರೆ, ಇದೀಗ ಈ ವಿಚಾರದಲ್ಲಿ ಸರ್ಕಾರವೂ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದು, ಉದ್ಯಮಿಗಳು ಸಹ ಈ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನ ಈಜೀಪುರ ಮೇಲ್ಸೇತುವೆ ಹಲವು ವರ್ಷಗಳಿಂದ ಕಗ್ಗಂಟಾಗಿ ಉಳಿದಿದೆ. ಈ ಯೋಜನೆ ಜಾರಿಯಾಗದೆ ಕೋರಮಂಗಲ ಹಾಗೂ ಈಜೀಪುರ ರಸ್ತೆ ಮಾರ್ಗದಲ್ಲಿ ಭಾರೀ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿರುವ ಸಂದರ್ಭದಲ್ಲಿಯೇ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಸ್ಥಳ ಪರಿಶೀಲನೆ ಮಾಡಿದ್ದು, ಮಹತ್ವದ ಅಪ್ಡೇಟ್ಸ್ ಕೊಟ್ಟಿದ್ದಾರೆ. ಇದಕ್ಕೆ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿ ಹೆಚ್ಚಾಗಿದೆ ಎಂದು ಈಚೆಗೆ ಕಿರಣ್ ಮಜುಂದಾರ್ ಶಾ ಅವರು ಸೋಷಿಯಲ್ ಮೀಡಿಯಾ ಹಂಚಿಕೊಂಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಆಡಳಿತವು ಬೆಂಗಳೂರಿನ ಕೆಲವೊಂದು ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಅಲ್ಲದೇ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಕಗ್ಗಂಟಾಗಿರುವ ಈ ಯೋಜನೆ ಇದೀಗ ತಾರ್ಕಿಕ ಅಂತ್ಯ ಕಾಣುತ್ತಿದೆ.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್, ಈಜೀಪುರ ಮೇಲ್ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದೇನೆ ಮತ್ತು ಪೂರ್ಣ ಪ್ರಮಾಣದ ಕೆಲಸ ಪ್ರಾರಂಭವಾಗಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಕೋರಮಂಗಲ-ಈಜೀಪುರ ಮಾರ್ಗದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಈ ಎತ್ತರದ ಕಾರಿಡಾರ್ ವಿನ್ಯಾಸಗೊಳಿಸಲಾಗಿದೆ.
ಜೂನ್ 2026 ರೊಳಗೆ ಯೋಜನೆಯನ್ನು ಪೂರ್ಣಗೊಳಿಸಲು ಮತ್ತು ಈ ಪ್ರಮುಖ ಸಂಚಾರ ಸಂಪರ್ಕವು ಈ ಭಾಗದ ನಿವಾಸಿಗಳಿಗೆ ಮತ್ತಷ್ಟು ಟ್ರಾಫಿಕ್ ಮುಕ್ತ ಸಂಚಾರ ಸೇವೆಗೆ ಅನುಕೂಲವಾಗಲಿದೆ. ಈ ಯೋಜನೆಯನ್ನು ಜಾರಿ ಮಾಡುವುದರಲ್ಲಿ ನಾವು ಬದ್ಧರಾಗಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಇದೀಗ ಈ ಟ್ವೀಟ್‌ಗೆ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ಬೆಂಗಳೂರಿನ ಈ ಭಾಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಕಡಿಮೆ ಆಗಲಿದೆ. ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ಇದಕ್ಕೆ ಆದ್ಯತೆ ನೀಡಲಿಲ್ಲ. ಕಳೆದ 10 ವರ್ಷಗಳಿಂದ ಈ ಯೋಜನೆ ಜಾರಿಯಾಗಿದ್ದರೆ ಸಂಚಾರ ದಟ್ಟಣೆ ಕಡಿಮೆ ಆಗುತ್ತಿತ್ತು. ಈ ಯೋಜನೆಗೆ ಆದ್ಯತೆ ನೀಡಿರುವುದು ಅತ್ಯಂತ ಒಳ್ಳೆಯ ಬೆಳವಣಿಗೆ ಎಂದು ಅವರು ಶ್ಲಾಘಿಸಿದ್ದಾರೆ.












Click it and Unblock the Notifications