ಕೊಲೆ ಪ್ರಕರಣ ಪತ್ತೆ ಹಚ್ಚಲು ಬೆಂಗಳೂರು ಪೊಲೀಸರಿಗೆ 'ಕಿಂಗ್ ಕೊಹ್ಲಿ' ಸಹಾಯ! ಏನಿದು ತಿಳಿಯಿರಿ
ಬೆಂಗಳೂರಿನಲ್ಲಿ ವೃದ್ಧೆಯ ಕೊಲೆ ಪ್ರಕರಣವನ್ನು ಭೇದಿಸಲು 'ಕಿಂಗ್ ಕೊಹ್ಲಿ' ಪೊಲೀಸರಿಗೆ ಸಹಾಯ ಮಾಡಿದ್ದಾರೆ. ಕ್ರಿಕೆಟ್ ಆಡುವ ವಿರಾಟ್ ಕೊಹ್ಲಿ ಪೊಲೀಸರಿಗೆ ಸಹಾಯ ಮಾಡಿದ್ದೇಗೆ ಅಂತೀರಾ, ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ನಗರದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ 82 ವರ್ಷದ ಒಂಟಿ ಮಹಿಳೆಯನ್ನು ಕೊಲೆ ಮಾಡಲಾಗಿತ್ತು. ನಾಗಪುರದ ನಿವಾಸದಲ್ಲಿ ಮೇ 27ರಂದು ಕಮಲಾ ಎನ್ನುವ ಒಂಟಿ ಮಹಿಳೆಯನ್ನು ಹತ್ಯೆ ಮಾಡಲಾಗಿತ್ತು, ಪ್ರಕರಣದ ತನಿಖೆ ಶುರು ಮಾಡಿದ್ದ ಪೊಲೀಸರಿಗೆ ಆರೋಪಿಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿದ್ದು ಆಟೋ ಹಿಂಬದಿಯಿದ್ದ 'ಕಿಂಗ್ ಕೊಹ್ಲಿ' ಎನ್ನುವ ಪದಗಳು.

'ಕಿಂಗ್ ಕೊಹ್ಲಿ' ಹೆಸರಿನಿಂದ ಆರೋಪಿಗಳ ಪತ್ತೆ
ಕೊಲೆಗೀಡಾದ ಕಮಲಾ ಅವರ ಮನೆಯ ಸಮೀಪದ ಸ್ಥಳಗಳಿಂದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಈ ಮಹತ್ವದ ಸುಳಿವು ಸಿಕ್ಕಿತು. ಪೊಲೀಸರು ಆಟೊರಿಕ್ಷಾವನ್ನು ಪತ್ತೆ ಮಾಡಿದರು. ಕೊಲೆಗೆ ಮುನ್ನಾದಿನ 'ಕಿಂಗ್ ಕೊಹ್ಲಿ' ಎಂದು ಬರೆದಿರುವ ಆಟೋ ಕಾಣಿಸಿಕೊಂಡಿತ್ತು, ಕೊಲೆಯಾದ ದಿನ ಕೂಡ ಆಟೋ ವೃದ್ಧೆಯ ನಿವಾಸದ ಬಳಿ ಪತ್ತೆಯಾಗಿತ್ತು, ಆದರೆ, ನಂಬರ್ ಪ್ಲೇಟ್ ಮತ್ತು ಕಿಂಗ್ ಕೊಹ್ಲಿ ಬರಹವನ್ನು ಟೇಪ್‌ನಿಂದ ಮುಚ್ಚಲಾಗಿತ್ತು.
ಇದರಿಂದ ಅನುಮಾನಗೊಂಡ ಆಟೋ ಹಿಂದೆ ಬಿದ್ದರು. ಕಮಲಾ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಅಶೋಕ್ (40), ಆಂಜನಮೂರ್ತಿ (33), ಸಿದ್ದರಾಜು (34) ಕೊಲೆ ಆರೋಪಿಗಳಾಗಿದ್ದಾರೆ. ಇದರಲ್ಲಿ ಅಶೋಕ್ ಎನ್ನುವ ವ್ಯಕ್ತಿ ಪ್ಲಂಬರ್ ಆಗಿದ್ದ, ಕೊಲೆಯಾಗಿರುವ ಕಮಲಾ ಅವರ ಮನೆಗೆ ಮೂರು ತಿಂಗಳ ಹಿಂದೆ ಸೋರಿತ್ತಿದ್ದ ಪೈಪ್‌ಗಳನ್ನು ಸರಿಮಾಡಲು ಹೋಗಿದ್ದರು.
ಕಮಲಾ ಮನೆಯಲ್ಲಿ ಒಬ್ಬರೇ ವಾಸವಿದ್ದು ಮನೆಯಲ್ಲಿ ಚಿನ್ನಾಭರಣ ಮತ್ತು ಹಣ ಇರುವುದನ್ನು ಅಶೋಕ್ ಗಮನಿಸಿದ್ದಾರೆ. ಅಶೋಕ್, ಸಿದ್ದರಾಜು ಮತ್ತು ಆಜನಮೂರ್ತಿ ಜೊತೆಗೂಡಿ ಹಣದ ಅನಿವಾರ್ಯತೆ ಇದ್ದ ಕಾರಣ ದರೋಡೆಗೆ ಸಂಚು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಂಜನಮೂರ್ತಿಗೆ ಸೇರಿದ ಆಟೋದಲ್ಲಿ ಕಮಲಾ ಮನೆಗೆ ದರೋಡೆ ಮಾಡಲು ಭೇಟಿ ಮಾಡಿದ್ದರು, ಮೊದಲು ಅವರು ಆಟೋ ನೋಂದಣಿ ಫಲಕವನ್ನು ತೆಗೆದುಹಾಕಿದ್ದರು. ಆದರೆ, ಆ ಪ್ರದೇಶದಲ್ಲಿ ಜನಸಂದಣಿ ಇದ್ದ ಕಾರಣ ಆ ಪ್ರಯತ್ನವನ್ನು ಕೈಬಿಟ್ಟರು. ನಂತರ ಕಮಲಾ ಅವರಿಗೆ ಸೇರಿದ ಕಾರ್ ಶೆಡ್ ಅನ್ನು ಬಾಡಿಗೆ ಕೇಳುವ ನೆಪದಲ್ಲಿ ಮೂವರು ಹೋಗಿದ್ದಾರೆ, ತಾವು ಬಿಸ್ಕೆಟ್ ವ್ಯಾಪಾರ ಮಾಡುವುದಾಗಿ, ಅದನ್ನು ಸಂಗ್ರಹಿಸಲು ಕಾರ್‍ಶೆಡ್ ಬಾಡಿಗೆ ನೀಡುವಂತೆ ಕೇಳಿದ್ದಾರೆ, ಅವರಿಗೆ ತಿನ್ನಲು ಬಿಸ್ಕೆಟ್ ಸಹ ನೀಡಿದ್ದಾರೆ. ಕಮಲಾ ಬಿಸ್ಕೆಟ್ ತಿನ್ನುವಾಗ ಅವರನ್ನು ಎಳೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪರಾಧದ ದಿನದಂದು ಆರೋಪಿಗಳು ಟೇಪ್ ಬಳಸಿ 'ಕಿಂಗ್ ಕೊಹ್ಲಿ' ಎನ್ನುವ ಬರಹ ಮತ್ತು ನಂಬರ್ ಪ್ಲೇಟ್ ಅನ್ನು ಮುಚ್ಚಿದ್ದರು. ಇದನ್ನು ಬಳಸಿ ಮಾಹಿತಿ ಸಂಗ್ರಹಿಸಿದ ಪೊಲೀಸರು ಮೈಸೂರಿನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಲಿ ಕೆಲಸ ಮಾಡುವ ಸಿದ್ದರಾಜು ಬೆಟ್ಟಿಂಗ್‌ನಲ್ಲಿ ತೊಡಗಿದ್ದು, ಅಪಾರ ಸಾಲ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications