ಕಿಕಿ ನೃತ್ಯ ಮಾಡಿದ ನಿವೇದಿತಾ ಗೌಡ ವಿರುದ್ಧ ದೂರು
ಬೆಂಗಳೂರು, ಆಗಸ್ಟ್ 01 : ನಿಷೇಧಿತ ಕಿಕಿ ಡ್ಯಾನ್ಸ್ ಮಾಡುವ ಮೂಲಕ ಪ್ರಚೋದನೆ ನೀಡಿದ್ದಾರೆ ಎಂದು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ವಿರುದ್ಧ ಕನ್ನಡ ಒಕ್ಕೂಟ ಸಂಘಟನೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದೆ.
ಚಲಿಸುವ ಕಾರಿನಿಂದ ಹೊರಗೆ ಹಾರುವ, ಮತ್ತೆ ಕಾರಿನೊಳಗೆ ಜಿಗಿದು ಬರುವ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡುವ ಹುಚ್ಚು ಸಾಹಸದ ಕೆನಡದ ಡ್ರೇಕ್ ನ ಹೊಸ ಮ್ಯೂಸಿಕ್ ಟ್ರ್ಯಾಕ್ "ಕೀಕಿ ಡೂ ಯೂ ಲವ್ ಮೀ' ಮಾರಣಾಂತಿಕ ನೃತ್ಯವಾಗಿದೆ.
ಈ ನೃತ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಸಾಕಷ್ಟು ಜನರು ನೃತ್ಯ ಮಾಡಿ ವಿಡಿಯೋವನ್ನು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ತಾಲತಾಣದಲ್ಲಿ ಹಾಕುತ್ತಿದ್ದಾರೆ. ಪೊಲೀಸರು ಇದನ್ನು ನಿಗ್ರಹಿಸಲು ಪಣ ತೊಟ್ಟಿದ್ದಾರೆ.

ಕಿಕಿ ನೃತ್ಯದಲ್ಲಿ ತೊಡಗಿರುವುದು ಕಂಡುಬಂದರೆ ದಂಡ ವಿಧಿಸಿ, ವಾಹನ ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ಅವರು ಕಿಕಿ ಅಪಾಯಕಾರಿ ನೃತ್ಯವನ್ನು ಯಾರಾದರೂ ಮಾಡಿದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.
ಇದುವರೆಗೆ ಮುಂಬೈ, ದೆಹಲಿ ಹಾಗೂ ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿ ಸದ್ದು ಮಾಡಿದ್ದ ಕಿಕಿ ಚಾಲೆಂಜ್ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದ್ದು. ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಈ ಚಾಲೆಂಜ್ ಸ್ವೀಕರಿಸಿ ಕಿಕಿ ಹಾಡಿಗೆ ಹೆಜ್ಜೆ ಹಾಕಿದ್ದರು.
ಇವರ ಕಿಕಿ ಡ್ಯಾನ್ಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಬ್ಯಾನ್ ಆಗಿರುವ ಈ ಡಾನ್ಸ್ ಮಾಡಬೇಡಿ, ಇದು ಅಪಘಾತಕ್ಕೆ ಆಹ್ವಾನ ನೀಡುತ್ತದೆ. ಸೆಲಿಬ್ರಿಟಿಗಳಾದ ನೀವು ಈ ಕುರಿತು ಜಾಗೃತಿ ಮೂಡಿಸಬೇಕು. ಆದರೆ, ನೀವೇ ಹೀಗೆ ಮಾಡಿದರೇ ಹೇಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.











Click it and Unblock the Notifications