ಕಿಡ್ನಾಪ್ ಆಗಿದ್ದ ಐಟಿ ಅಧಿಕಾರಿ ಪುತ್ರ ಶವವಾಗಿ ಪತ್ತೆ
ಬೆಂಗಳೂರು, ಸೆಪ್ಟೆಂಬರ್ 22: ದುಷ್ಕರ್ಮಿಗಳಿಂದ ಅಪಹರಣಕ್ಕೀಡಾಗಿದ್ದ ಐಟಿ ಅಧಿಕಾರಿ ನಿರಂಜನ್ ಅವರ ಪುತ್ರ ಶರತ್ (19) ಶವವಾಗಿ ಪತ್ತೆಯಾಗಿದ್ದಾನೆ. ಸೆ. 12ರಂದು ಸಂಜೆ ತನ್ನ ಮನೆಯಿಂದ ಹೊರಹೋಗಿದ್ದ ಆತ ಅಪಹರಣಕ್ಕೀಡಾಗಿದ್ದ.
ಆತನನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಚಂದ್ರಪ್ಪ ಸರ್ಕಲ್ ಬಳಿಯಿರುವ ರಾಮೋಹಳ್ಳಿಯ ಕೆರೆಯ ಬಳಿ ಎಸೆದು ಪರಾರಿಯಾಗಿದ್ದಾರೆ.
ರಾಮೋಹಳ್ಳಿ ಕೆರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ, ಸ್ಥಳೀಯ ಪೊಲೀಸರಿಂದ ವಿವರಣೆ ಪಡೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಿರಂಜನ್ ಅವರು ಹೆಬ್ಬಾಳದಲ್ಲಿರುವ ಐಟಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಉಳ್ಳಾಲದ ಮುಖ್ಯರಸ್ತೆಯಲ್ಲಿ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಸೆ. 10 (ಭಾನುವಾರ) ಹೊಸ ಬೈಕ್ ಖರೀದಿಸಿದ್ದ ಶರತ್, ಎರಡು ದಿನಗಳ ಕಳೆದರೂ ಹೊಸ ಬೈಕ್ ಸಂಭ್ರಮದಲ್ಲೇ ಇದ್ದ. ಮಂಗಳವಾರ ಸಂಜೆ ತನ್ನ ಸ್ನೇಹಿತರಿಗೆ ಸ್ವೀಟ್ ಕೊಟ್ಟು ಬರುವುದಾಗಿ ತಿಳಿಸಿ ಹೊರಹೋಗಿದ್ದ. ಆದರೆ, ಆತ ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಪೋಷಕರು ಗಾಬರಿಯಾಗಿ ಆತನ ಮೊಬೈಲ್ ಗೆ ಫೋನ್ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ.
ರಾತ್ರಿ 10 ಗಂಟೆಗೆ ಸೆಲ್ಫಿ ವಿಡಿಯೋ ಕ್ಲಿಪ್ ಒಂದನ್ನು ಮನೆಯವರ ಮೊಬೈಲ್ ಗೆ ಕಳುಹಿಸಿದ್ದ ಆತ, ತನ್ನನ್ನು ಯಾರೋ ಅಪಹರಣ ಮಾಡಿದ್ದಾರೆಂದು ಹೇಳಿದ್ದ. ಪೊಲೀಸರಿಗೆ ದೂರು ನೀಡಬಾರದು. ಅಪಹರಣಕಾರರು 50 ಲಕ್ಷ ರು.ಗಳಿಗೆ ಬೇಡಿಕೆ ಇಟ್ಟಿದ್ದಾರೆ. ಅವರಿಗೆ ಹಣ ಕೊಟ್ಟು ನನ್ನನ್ನು ಬಿಡಿಸಿಕೊಳ್ಳಿ ಎಂದು ಕೇಳಿಕೊಂಡಿದ್ದ. ಅಲ್ಲದೆ, ತನ್ನ ಅಪಹರಣಕಾರರ ಬಳಿ ಶಸ್ತ್ರಾಸ್ತ್ರಗಳಿವೆ ಎಂದೂ ಮಾಹಿತಿ ನೀಡಿದ್ದ.
ಆದರೂ, ನಿರಂಜನ್ ಅವರು, ಜ್ಞಾನಭಾರತಿ ಪೊಲೀಸರಿಗೆ ಸೆ. 14ರಂದು ದೂರು ನೀಡಿದ್ದರು. ಪೊಲೀಸರು ಆತನ ಮೊಬೈಲ್ ಟ್ರಾಕ್ ಮಾಡಿದಾಗ, ಆತನ ಮೊಬೈಲ್ ಮೈಸೂರು ರಸ್ತೆಯ ಮಾರ್ಗದಲ್ಲಿ ಪತ್ತೆಯಾಗಿ ಆನಂತರ, ಸ್ವಿಚ್ ಆಫ್ ಆಗಿತ್ತು.












Click it and Unblock the Notifications