Darshan: ಕೊಲೆ ಕೇಸ್‌ನಲ್ಲಿ ದರ್ಶನ್ ಭಾಗಿಯಾದ್ರೂ ಚಿತ್ರರಂಗ, ಫಿಲ್ಮ್ ಚೇಂಬರ್ ಯಾಕೆ ಸೈಲೆಂಟ್?
ಬೆಂಗಳೂರು, ಜೂನ್ 13: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಘಟನೆ ಸೋಮವಾರ ನಡೆದಿದೆ. ಜನಪ್ರಿಯ ನಟ ಎನ್ನಿಸಿಕೊಂಡಿದ್ದ ದರ್ಶನ್ ಬಂಧನವಾಗಿದೆ. ಅನೇಕ ಮೇರು ನಟರನ್ನು ನೋಡಿದ ಹಲವು ಕಲಾವಿದರು ಹಾಗೂ ನಾಡಿನ ಜನರು ಸೇರಿದಂತೆ ಇಡೀ ಕರ್ನಾಟಕವೇ ದರ್ಶನ್ ಬಂಧನದಿಂದ ಚಿತ್ರರಂಗದ ಮಾನ, ಮರಿಯಾದೆ ಹರಾಜಾಗಿದೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಬೆಳವಣಿಗೆ ಮಧ್ಯೆ 'ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ' ಯಾಕೆ ಇಷ್ಟೊಂದು ಮೌನ ವಹಿಸಿದೆ?.
ಒಂದಷ್ಟು ಸಂಘಟನೆಗಳು ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ 'ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ'ಗೆ ತೆರಳಿ ಮನವಿ ಮಾಡಿ ಆಗ್ರಹಿಸಿದ ಬಳಿಕ, ಮಂಡಳಿಯು ಈ ಬಗ್ಗೆ ಕಲಾವಿದರ ಜೊತೆ ಚರ್ಚಿಸಿ ದರ್ಶನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ.

ಕ್ರಮ ಕೈಗೊಳ್ಳಲು ಮಂಡಳಿಯಿಂದ ಯಾಕಿಷ್ಟು ವಿಳಂಬ?
ಚಿತ್ರೀಕರಣ, ಪೇಮೆಂಟ್ ವಿಚಾರ, ಕೆಲವು ಹೇಳಿಕೆಗಳು, ಸಣ್ಣ ಪುಟ್ಟ ಘಟನೆಗಳಿಗೆ ಸಂಬಂಧಿಸಿದಂತೆ ಪ್ರಮುಖರ ಜೊತೆ ಚರ್ಚಿಸಿ ಸಭೆ ನಡೆಸುವ, ನಿರ್ಧಾರ ಪ್ರಕಟಿಸುತ್ತಿದ್ದ 'ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ' ದರ್ಶನ್ ಪ್ರಕರಣದಲ್ಲಿ ಯಾಕಿಷ್ಟು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕನ್ನಡಿಗರು, ವಿವಿಧ ಸಂಘ-ಸಂಸ್ಥೆಯರು ಪ್ರಶ್ನಿಸುತ್ತಿದ್ದಾರೆ.
ನಟಿಯನ್ನು ಬ್ಯಾನ್ ಮಾಡಿತ್ತು ಇದೇ ಮಂಡಳಿ
ಸುಮಾರು 12 ವರ್ಷಗಳ ಪತ್ನಿ ವಿಜಯಲಕ್ಷ್ಮೀ ಜೊತೆಗೆ ಗಲಾಟೆ ಮಾಡಿಕೊಂಡು, ಅವರಿಗೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಇದೇ ದರ್ಶನ್ ಜೀವನದಲ್ಲಿ ಬೇರೊಬ್ಬ ನಟಿಯ ಆಗಮನವಾಗಿತ್ತು.ಅದಕ್ಕಾಗಿ ಗಲಾಡೆ ನಡೆದಿದೆ ಎಂದು ಹೇಳಲಾಗಿತ್ತು. ನಟಿ ನಿಖಿತಾ ತುಕ್ರಾಲ್ ಹಾಗೂ ದರ್ಶನ್ ಮಧ್ಯೆ ಏನೆನೋ ನಡೆಯುತ್ತಿದೆ ಎಂದೆಲ್ಲ ಹೇಳಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಈ ವೇಳೆ ಆ ನಟಿಯನ್ನು (ನಿಖಿತಾ ತುಕ್ರಾಲ್) ಮೂರು ವರ್ಷ ಕನ್ನಡ ಚಿತ್ರೋದ್ಯಮದಿಂದ ಇದೇ ವಾಣಿಜ್ಯ ಮಂಡಳಿ ಬ್ಯಾನ್ ಮಾಡಿತ್ತು. ಚಿತ್ರರಂಗದಿಂದ ನಿಷೇಧ ಹೇರಿತ್ತು. ಆದರೆ ಇಂದು ಅದೇ ದರ್ಶನ್ ಅಭಿಮಾನಿಯೊಬ್ಬರ ಕೊಲೆಗೆ ಕಾರಣವಾಗಿದ್ದಾರೆ. ಹೀಗಾಗಿ ದರ್ಶನ್, ಮತ್ತು ಆತನ ಗೆಳತಿ ಹಾಗೂ ಸಹಚರರು ಸೇರಿದಂತೆ 17 ಮಂದಿ ಮೇಲೆ ಕೇಸ್ ದಾಖಲಾಗಿದ್ದು, 14 ಮಂದಿಯನ್ನು ಬಂಧಿಸಿದ್ದಾರೆ.

ಕಠಿಣ ಕ್ರಮ ಕೈಗೊಂಡಿದ್ದ ಹೀಗಾಗುತ್ತಿರಲಿಲ್ಲ
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಆರೋಪದಲ್ಲಿ ದರ್ಶನ್ ಪ್ರಮುಖ A2 ಆರೋಪಿಯಾಗಿ ಮಾಡಲಾಗಿದೆ. ಕಾನೂನಿನ ಪ್ರಕಾರ ಎಲ್ಲವು ನಡೆಯುತ್ತಿದೆ. ಇದೆಲ್ಲ ಬೆಳವಣಿಗೆ ಮಧ್ಯೆ ಚಿತ್ರರಂಗ ಕಲಾವಿದರೂ, ವಾಣಿಜ್ಯ ಮಂಡಳಿ ಯಾಕೆ ಮೌನ ವಹಿಸಿದೆ. ದರ್ಶನ್ ಮೇಲೆ ಹಲವು ಕೇಸುಗಳಾಗಿವೆ. ವಿವಾದ ಅವರ ಸುತ್ತ ಸುತ್ತುತ್ತಿದೆ. ಹಿಂದೊಮ್ಮೆ ಜೈಲುಪಾಲಾದಾಗಲೇ ಖಡಕ್ ಎಚ್ಚರಿಕೆ ಕೊಟ್ಟಿದ್ದರೆ, ಸೂಕ್ತ ಕ್ರಮ ಕೈಗೊಂಡಿದ್ದರೆ ಇಂದು ರೇಣುಕಾಸ್ವಾಮಿ ಬದುಕಿರುತ್ತಿದ್ದ ಎಂಬ ಮಾತುಗಳು ಕೇಳಿ ಬಂದಿವೆ.
ಇಂತಹ ಘಟನೆಗಳಾದ ದರ್ಶನ್ ವಿರುದ್ಧ ಮಂಡಳಿ ಒಂದೊಳ್ಳೆ ನಿಲುವು ಪ್ರಕಟಿಸಲು ಏಕೆ ಪರಡಾಡುತ್ತಿದೆ. ಯಾಕಿಷ್ಟು ವಿಳಂಬ ನೀತಿ ಅನುಸರಿಸುತ್ತಿದೆ. ಮೇಲ್ನೋಟಕ್ಕೆ ಸತ್ಯ ಎಲ್ಲರಿಗೂ ಕಾಣುತ್ತಿದೆ. ಆರೋಪಿಗಳು ಕೊಲೆ ಬಗ್ಗೆ, ದರ್ಶನ್ ಬಗ್ಗೆ ಒಂದಷ್ಟು ಮಾಹಿತಿ ಹೇಳಿಕೊಂಡು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಕುರಿತು ಪೊಲೀಸರು, ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಮಂಡಳಿ, ಕಲಾವಿದರ ಮೌನವೇ ನಟನನ್ನು ಉತ್ತೇಜಿಸುತ್ತಿದೆಯೇ?
ಹೀಗಿದ್ದರೂ ವಾಣಿಜ್ಯ ಮಂಡಳಿ ಒಂದು ಸ್ಟ್ಯಾಂಡ್‌ಗೆ ಬರುವಲ್ಲಿ ತಡ ಮಾಡುತ್ತಿದೆ. ಚಿತ್ರರಂಗದ ಕಲಾವಿದರು ಈ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಒಂದೆರಡು ಮಂದಿ ಬಿಟ್ಟರೆ ಬೇರಾರು ಈ ಬಗ್ಗೆ ತುಟ್ಟಿ ಬಿಚ್ಚಿಲ್ಲ. ಇವರ ಈ ಮಾನ, ದರ್ಶನ್ ಅಭಿಮಾನಿಗಳ ಹುಚ್ಚುತನ, ಅಂಧಾಭಿಮಾನ, ಸಮಾಜದಲ್ಲಿ ತಮಗೆ ಸಿಕ್ಕ ಜನಪ್ರಿಯತೆಯ ಹಣದ ದರ್ಪದಿಂದ ಮೆರೆಯುವಂತೆ ಪರೋಕ್ಷವಾಗಿ ಪ್ರೇರೆಪಿಸುತ್ತಿದೆಯೇ? ಎಂಬ ಅನುಮಾನ ಮೂಡಿದೆ.
ಸದ್ಯ ಚಲನಚಿತ್ರ ವಾಣಿಜ್ಯ ಮಂಡಳಿಯು ಈ ಬಗ್ಗೆ ಎಲ್ಲ ಸದಸ್ಯರು, ಪ್ರಮುಖರ ಜೊತೆಗೆ ಚರ್ಚಿಸಿ ದರ್ಶನ್ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದಿದೆ. ಹಾಗಾದರೆ ಈ ಭಾರಿ ದರ್ಶನ್ ಚಿತ್ರರಂಗದಿಂದ ಬ್ಯಾನ್ ಆಗುತ್ತಾರಾ?. ಇಲ್ಲ ಆತನ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಕುತೂಹಲ ಕೆರಳುವಂತೆ ಮಾಡಿದೆ.












Click it and Unblock the Notifications