Skydeck: ದಕ್ಷಿಣ ಏಷ್ಯಾದ ಅತೀ ಎತ್ತರ 'ಸ್ಕೈಡೆಕ್'ಗೆ ಬೆಂಗಳೂರಲ್ಲಿ ಜಾಗ ಫೈನಲ್
ಬೆಂಗಳೂರು, ಜೂನ್ 03: ಬೆಂಗಳೂರಿನಲ್ಲಿ ದೆಹಲಿಯ ಕುತುಬ್ ಮಿನಾರ್‌ಗಿಂತಲೂ ಎತ್ತರವಾಗಿ ದಕ್ಷಿಣ ಏಷ್ಯಾದ ಪ್ರಮುಖ ಸ್ಕೈಡೆಕ್ ಯೋಜನೆ ಅನುಷ್ಠಾನವು ಮತ್ತೊಂದು ಹಂತಕ್ಕೆ ಬಂದಿದೆ. ಈಗಾಗಲೇ ಪ್ರಸ್ತಾಪಿಸಿದ್ದ ಸ್ಥಳಗಳ ಬದಲಾಗಿ ಹೊಸ ಸ್ಥಳವನ್ನು ಕರ್ನಾಟಕ ರಾಜ್ಯ ಸರ್ಕಾರವು ಅಂತಿಮಗೊಳಿಸಿದೆ. 250 ಮೀಟರ್ ಎತ್ತರದ ವೀಕ್ಷಣಾ ಗೋಪುರವು ಬೆಂಗಳೂರಿನ ಪ್ರವಾಸೋದ್ಯಮ ಜೊತೆಗೆ ನಗರದ ಸಾಂಸ್ಕೃತಿಕ ಪರಂಪರೆ ಅನ್ವೇಷಿಸಲು ಸಹಾಯ ಮಾಡಲಿದೆ.
ಹೌದು, ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ ಸೇರಿದಂತೆ ವಿವಿಧ ಕಡೆಗಳಲ್ಲಿ ಸ್ಥಳ ಗುರುತಿಸಲಾಗಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಈ ಸ್ಕೈಡೆಕ್ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗುತ್ತದೆ. ದೇಶದ ಇತರ ಭಾಗಗಳಲ್ಲಿರುವ ಸ್ಕೈಡೆಕ್ ರೀತಿಯ ಸಕಲ ಸೌಲಭ್ಯಗಳನ್ನು ಬೆಂಗಳೂರು ಗೋಪುರ ಒಳಗೊಳ್ಳಲಿದೆ.

ಪ್ರವಾಸಿಗರ ಆಕರ್ಷಣೆಗೆ ಕೇಂದ್ರ
ಬ್ರ್ಯಾಂಡ್ ಬೆಂಗಳೂರಿನ ಉಪಕ್ರಮವಾಗಿ ನಿರ್ಮಾಣವಾಗುತ್ತಿರುವ ಸರ್ಕಾರದ ಈ ಮಹತ್ವಾಕಾಂಕ್ಷೆಯ ಸ್ಕೈಡೆಕ್ ಯೋಜನೆಗೆ ಹೊಸ ಸ್ಥಳ ಅಂತಿಮಗೊಳಿಸಿ ಸರ್ಕಾರ ಪ್ರಕಟಿಸಿದೆ. ಪ್ರವಾಸೋದ್ಯಮ ಉತ್ತೇಜಿಸುವ, ಪ್ರವಾಸಿಗರ ಆಕರ್ಷಣೆಗೆ ಕೇಂದ್ರವಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ದೇಶದ ಉದ್ಯಾನ ನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಸುತ್ತ 360 ಡಿಗ್ರಿ ವ್ಯಾಪ್ತಿಯಲ್ಲಿ ಬೆಂಗಳೂರು ಸೌಂದರ್ಯ ಕಣ್ತುಂಬಿಕೊಳ್ಳಲು ಈ 250 ಮೀಟರ್ ಎತ್ತರದ ಸ್ಕೈ ಟವರ್ ಸ್ಥಾಪಿಸಲಾಗುತ್ತದೆ.
ಸ್ಥಳ ಗೊಂದಲಕ್ಕೆ ಪರಿಹಾರ
ಈ ಟವರ್ ಸ್ಥಾಪನೆಗೆ ಈವರೆಗೆ ಇದ್ದ ಸ್ಥಳ ಅಂತಿಮ ಗೊಂದಲ ಬಗೆಹರಿದಿದ್ದು, ಸರ್ಕಾರ ಕೆಂಗೇರಿ ಬಳಿ ನಾಡಪ್ರಭು ಲೇಔಟ್ ನಲ್ಲಿ (NPKL) ಸ್ಕೈಡೆಕ್ ನಿರ್ಮಿಸಲು ಸ್ಥಳ ಅಂತಿಮಗೊಳಿಸಿದೆ. ಈ ಹಿಂದೆ ಕೆಲವು ಸ್ಥಳಗಳನ್ನು ಗುರುತಿಸಲಾಗಿತ್ತು. ಆ ಪೈಕಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ಬಳಿ ಸ್ಥಾಪಿಸಲು ಪ್ರಸ್ತಾಪಿಸಲಾಗಿತ್ತು. ಆದರೆ ಭವಿಷ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ವಿಶ್ವವಿದ್ಯಾಲಯ ಕಾರ್ಯ ಚಟುವಟಿಕೆಗೆ ತೊಂದರೆ ಆಗುವ ಹಿನ್ನೆಲೆ ಕೆಂಗೇರಿ ಬಳಿ ಸ್ಥಳ ಗುರುತಿಸಲಾಯಿತು.
ಹೊಸ ಸ್ಥಳಕ್ಕೆ ಸ್ಥಳಾಂತರ ಗೊಳ್ಳಲು ಕಾರಣ?
ಈ ಯೋಜನೆಗೆ ಪ್ರಸ್ತಾಪಿಸಲಾಗಿದ್ದ ಇತರ ಸ್ಥಳಗಳೆಂದರೆ ಬೆನ್ನಿಗಾನಹಳ್ಳಿ, ಯಶವಂತಪುರದಲ್ಲಿರುವ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಮತ್ತು ಕೊಮ್ಮಘಟ್ಟದಲ್ಲಿ ಜಾಗ ನೋಡಲಾಗಿತ್ತು. ಬೆಂಗಳೂರಿನಲ್ಲಿ ವಾಯುಯಾನ ಸುರಕ್ಷತೆಯನ್ನು ನೋಡಿಕೊಳ್ಳುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಎತ್ತರ ನಿಯಮಗಳು ಈ ಜಾಗಗಳಲ್ಲಿ 250 ಮೀಟರ್ ಎತ್ತರದ ಗೋಪುರ ನಿರ್ಮಾಣಕ್ಕೆ ಪೂರಕವಾಗಲಿಲ್ಲ. ಹೀಗಾಗಿ ಆ ಜಾಗ ಬಿಟ್ಟು ಜ್ಞಾನಭಾರತಿ ವಿವಿ ಕ್ಯಾಂಪಸ್ ಗುರುತಿಸಿ, ಇದೀಗ ಅದನ್ನು ಕೈಬಿಟ್ಟು ಕೇಂಗೇರಿ ಬಳಿ ನಿರ್ಮಿಸುವುದಾಗಿ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.
ಇದೇ ವಿಚಾರವಾಗಿ ಸೋಮವಾರ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಇತರ ಹಿರಿಯ ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ ಸಭೆಯಲ್ಲಿ ಚರ್ಚಿಸಲಾಗಿದೆ. ಕೆಂಗೇರಿ ಬಳಿ ನಿರ್ಮಿಸಿದರೆ ಆಗುವ ಲಾಭ, ನಷ್ಟ, ಉಪಯೋಗ ಕುರಿತು ಚರ್ಚಿಸಲಾಗಿದೆ.












Click it and Unblock the Notifications